ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು ಇದರ ಹದಿನೆಂಟನೇ ವಾರ್ಷಿಕೋತ್ಸವ ಮತ್ತು ರಂರಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ನೇ ಶನಿವಾರದಂದು ಸಂಜೆ ಘಂಟೆ 4.55ರಿಂದ ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಲಿದೆ.
2024 ನೇ ಸಾಲಿನ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ ಸಾಧಕರಾದ ಶ್ರೀ ರಾಮ ಜೋಗಿ, ‘ರಂಗ ಚಿನ್ನಾರಿ ಪ್ರಶಸ್ತಿ’ಗೆ ಸಂಗೀತ ಕ್ಷೇತ್ರದ ಸಾಧಕರಾದ ಶ್ರೀ ಚಂದ್ರಶೇಖರ ಹಾಗೂ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲಾ ಕ್ಷೇತ್ರದ ಸಾಧಕರಾದ ಶ್ರೀಮತಿ ಶಶಿಕಲಾ ಬಾಯಾರು, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಕಲಾ ಕ್ಷೇತ್ರದ ಸಾಧಕರಾದ ಶ್ರೀ ಕಾರ್ತಿಕ್ ಪಡ್ರೆ ಹಾಗೂ ನೃತ್ಯಕಲಾ ಕ್ಷೇತ್ರದ ಸಾಧಕರಾದ ಕುಮಾರಿ ಶಿವಾನಿ ಕೆ. ಕೂಡ್ಲು ಆಯ್ಕೆಯಾಗಿದ್ದಾರೆ.
ಧಾರ್ಮಿಕ ಮುಂದಾಳು ಹಾಗೂ ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಲಿರುವರು. ಸಮಾರಂಭದಲ್ಲಿ ಅತಿಥಿಗಳಾಗಿ ಖ್ಯಾತ ಸಾಹಿತಿಗಳಾದ ಡಾ. ರಮಾನಂದ ಬನಾರಿ, ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಶ್ರೀ ಕೆ. ಪಿ. ಶಶಿಧರನ್ ನಾಯರ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಸಂಕಬೈಲು ಸತೀಶ ಅಡಪ ಭಾಗವಹಿಸಲಿರುವರು.
ಸಭಾಕಾರ್ಯಕ್ರಮದ ಬಳಿಕ ಸ್ವರ ಚಿನ್ನಾರಿಯ ಸದಸ್ಯರಾದ ಶ್ರೀಮತಿ ಅಕ್ಷತಾ ವರ್ಕಾಡಿ, ಶ್ರೀ ಕಿಶೋರ್ ಪೆರ್ಲ, ಶ್ರೀಮತಿ ಬಬಿತಾ ಆಚಾರ್ಯ, ಕು. ವೇಧಾ ಕಾಮತ್ ವಿ. ಹಾಗೂ ಶ್ರೀ ರತ್ನಾಕರ ಎಸ್. ಓಡಂಗಲ್ಲು ಇವರಿಂದ ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಲಿರುವುದು.