ಸಾಮಾನ್ಯವಾಗಿ ಬೆಂಗಳೂರು ನಗರದಂಥ ಬೃಹತ್ ನಗರದಲ್ಲಿ ನೃತ್ಯಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನೃತ್ಯ ಕಾರ್ಯಕ್ರಮಗಳು ಸ್ಮೃತಿಪಟಲದಲ್ಲಿ ಉಳಿಯುವಂಥವು. ಜೆ. ಪಿ. ನಗರದ ‘ಅರ್ಕ’- ಆಪ್ತ ಕಲಾಮಂದಿರದಲ್ಲಿ ನಡೆದ ‘ಕಲಾಸಂಭ್ರಮ-4’ ದಲ್ಲಿ ನೃತ್ಯಕಲಾವಿದೆ – ಗುರು ಭಾವನಾ ವೆಂಕಟೇಶ್ವರ ಅವರ ಆಯ್ದ ಕೃತಿಗಳ ಸಮರ್ಪಣಾ ಪ್ರಸ್ತುತಿಗಳು ಮುದನೀಡಿದವು. ಅ ನೃತ್ಯಸಂಯೋಜನೆಗಳು ಹೊಸ ಆಯಾಮದಲ್ಲಿ ಕಣ್ಮನ ಸೆಳೆದರೆ, ಅಂಗಶುದ್ಧ ನರ್ತನ-ಸ್ಫುಟವಾದ ಮುದ್ರೆಗಳ ಚೆಲುವಿನಲ್ಲಿ ಕಲಾವಿದೆ ಭಾವನಾಳ ಆತ್ಮವಿಶ್ವಾಸ ಅಭಿವ್ಯಕ್ತಗೊಂಡಿತ್ತು. ವೇಗ ಗತಿಯ ನೃತ್ತಝೇಂಕಾರವನ್ನೂ ಒಳಗೊಂಡ ಸಾತ್ವಿಕಾಭಿನಯ, ಆಕಾಶಚಾರಿ, ಭ್ರಮರಿ, ಅಡವುಗಳ ಖಾಚಿತ್ಯ, ಹರಿತವಾದ ಜತಿಗಳ ಸೊಗಸು ಬೆರೆತ ಲವಲವಿಕೆಯ ಆಂಗಿಕಾಭಿನಯ ಮುಂತಾದ ‘ನೃತ್ಯವ್ಯಾಕರಣ’ದ ಎಲ್ಲ ಸುಂದರಾಂಶಗಳನ್ನೂ ಸುಮನೋಹರವಾಗಿ ಬಿಂಬಿಸಿದ್ದವು.
ನವ ಆಯಾಮದ ‘ಅಲರಿಪು’ -ಶಿವ-ಶಿವೆಯರ ಸುಂದರ ಸಂಗಮದಂತೆ ಭಾಸವಾದರೂ ದೇವ-ದೇವಿಯರ ಅಸ್ಮಿತೆಯನ್ನು ತನ್ನ ಸೂಕ್ಷ್ಮಾಭಿನಯದ ಬನಿಯಲ್ಲಿ ಸಾಕ್ಷಾತ್ಕರಿಸಿದ ಕಲಾವಿದೆಯ ಚೈತನ್ಯಭರಿತ ನರ್ತನ ಸ್ತುತ್ಯಾರ್ಹವಾಗಿತ್ತು. ‘ಶಿವ ನವರಸ’- ಪಾಪನಾಶನ ಶಿವನ್ ರಚಿಸಿದ ಅಪೂರ್ವ ಕೃತಿಯಲ್ಲಿ ಶಿವನ ಭವ್ಯತೆ ಹಾಗೂ ವೀರತ್ವವನ್ನು ಮನಮುಟ್ಟುವಂತೆ ಪ್ರತಿಪಾದಿಸಿತು. ಪ್ರತಿಯೊಂದು ರಸಕ್ಕೂ ಶಿವಪುರಾಣದ ಬೇರೆ ಬೇರೆ ಘಟನೆಗಳನ್ನು ಸೂಕ್ತವಾದ ಸನ್ನಿವೇಶದ ಒಡಲಲ್ಲಿ ಹುದುಗಿಸಿ, ಬಹು ಸಹಜ ರೀತಿಯಲ್ಲಿ ನವರಸಗಳು ಸ್ಫುರಿಸುವಂತೆ ಅಭಿನಯಿಸಿದ ಕಲಾವಿದೆಯ ಮನೋಜ್ಞ ಅಭಿನಯ, ಹೆಣೆಯಲಾದ ನೃತ್ಯಕುಸುರಿ ಮೆಚ್ಚುಗೆ ಪಡೆಯಿತು.
ನಂತರ- ಕ್ಷೇತ್ರಯ್ಯನವರ ಲೋಕಧರ್ಮೀಯ ನೆಲೆಯ ‘ಎವರೇ ವಾಡು?’ ಎಂಬ ಸುಂದರ ‘ಪದ’ದಲ್ಲಿ ಮನಮೋಹಕ ರಮ್ಯಾಭಿನಯದಿಂದ ಭಾವನಾ ಮನಸೂರೆಗೊಂಡರು. ಇಲ್ಲಿಯ ನಾಯಕಿಗೆ ಮದುವೆಯಾಗಿದ್ದರೂ, ಪರಪುರುಷ ಶ್ರೀಕೃಷ್ಣನ ಪ್ರೇಮವರ್ತುಲದಲ್ಲಿ ಸಿಲುಕಿದ ಅವಳು, ಮೇಲ್ನೋಟಕ್ಕೆ ಈ ಸಂಬಂಧವನ್ನು ನಿರಾಕರಿಸುವಂತೆ ಹುಸಿಗೋಪ ವ್ಯಕ್ತಪಡಿಸುತ್ತ ಗೆಳತಿಗೆ ದೂರು ಹೇಳುವಂತೆ ನಟಿಸಿದರೂ, ಅವಳಿಗೆ ಅವನು ಪ್ರಾಣಪ್ರಿಯ. ಅವನಿಗೆ ಮನಸೋತವಳು, ಕೃಷ್ಣ ಅವಳ ಅಂತರಂಗದ ಪ್ರೇಮಿಯೇ. ಕೃಷ್ಣನ ಸರಸ-ಸಲ್ಲಾಪದ ಸಾಂಗತ್ಯದಲ್ಲಿ ಒಳಗೊಳಗೇ ಆನಂದ ಹೊಂದುತ್ತ, ಅವಳು ಬಹಿರಂಗದಲ್ಲಿ ಮಾತ್ರ ಕೃಷ್ಣನ ತುಂಟಾಟ ಹೆಚ್ಚಾಯಿತೆಂಬ ನಾಟಕವಾಡುತ್ತಾಳೆ. ಗೆಳತಿಗೆ ಅವನ ಬಗ್ಗೆ ದೂರು ಹೇಳುತ್ತ ಅವನೊಡನಾಟದ ರಮ್ಯ ಭಾವನೆಗಳನ್ನು ಮತ್ತೆ ಮತ್ತೆ ಆಸ್ವಾದಿಸುತ್ತಾಳೆ. ಆ ಶೃಂಗಾರ ನಾಯಕಿಯ ಪಾತ್ರದಲ್ಲಿ, ಭಾವನಾ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತನ್ನ ತನ್ಮಯತೆಯ ನವಿರಾದ ಅಭಿನಯದಲ್ಲಿ, ಹುಸಿಗೋಪ-ಪ್ರೇಮಸಿಂಚನದ ಲಜ್ಜಾನ್ವಿತ ಚಂಚಲ ಕಣ್ಣೋಟದಲ್ಲಿ ನೋಡುಗರ ಹೃದಯವನ್ನು ಬೆಚ್ಚಗೆ ಮಾಡಿ ಮೋಡಿಗೊಳಿಸಿದರು. ಕಲಾವಿದೆಯ ಪ್ರೌಢ ಅಭಿನಯ ಮೆಚ್ಚುಗೆ ಪಡೆಯಿತು.
ಅಂತ್ಯದ ಬೃಂದಾವನೀ ರಾಗದ ಕುಣಿತದ ಶ್ರೀಕೃಷ್ಣನ ವರ್ಣರಂಜಿತ ವ್ಯಕ್ತಿತ್ವಕ್ಕೆ ಮೆರಗು ನೀಡಿದ, ಮನಮೋಹಕ ಲಯದ ‘ತಿಲ್ಲಾನ’ದಲ್ಲಿ ಕಲಾವಿದೆ ನುರಿತ ಹೆಜ್ಜೆ-ಗೆಜ್ಜೆಗಳ ಧ್ವನಿಯಲ್ಲಿ ಲೀಲಾಜಾಲವಾಗಿ ನರ್ತಿಸುತ್ತ, ಹರ್ಷದ ಸೋನೆಗರೆದರು. ಮುಂದೆ-‘ಹರಿವರಾಸನಂ’- ಅಯ್ಯಪ್ಪನ ಮಂಗಳ ಭಜನೆಯಲ್ಲಿ ದೀಪಾರತಿ ಬೆಳಗಿ ಕಲಾವಿದೆ ಹೊಸ ಹೊಳಪಿನ ಚಲನೆಯಲ್ಲಿ ರಸಾನುಭವ ನೀಡಿದರು.
ಭಾವನಾರ ನೃತ್ಯದೀಪಿಕೆ ಉಜ್ವಲವಾಗಿ ಬೆಳಗಲು ಕಾರಣೀಭೂತರಾದ ಭಾವಪೂರ್ಣ ಅನನ್ಯ ಗಾಯನದಲ್ಲಿ ವಿ. ಡಿ. ಶ್ರೀವತ್ಸ, ಮೃದಂಗ ಝೇಂಕಾರದಲ್ಲಿ ವಿ. ಜಿ.ಎಸ್. ನಾಗರಾಜ್, ಸುಮಧುರ ಮುರಳೀಗಾನದಲ್ಲಿ ವಿ. ನಿತೀಶ್ ಅಮ್ಮಣ್ಣಯ್ಯ ಮತ್ತು ವಿಶಿಷ್ಟ ನಟುವಾಂಗದ ಓಘದಲ್ಲಿ ನೃತ್ಯಜ್ಞೆ ವಿದುಷಿ ಪದ್ಮಿನಿ ಉಪಾಧ್ಯರ ಪಾತ್ರ ಪ್ರಮುಖವಾಗಿತ್ತು.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.