ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಇದರ ಹಿಮ್ಮೇಳ ಮುಮ್ಮೇಳ ತರಗತಿಗಳ ವಾರ್ಷಿಕೋತ್ಸವ “ರಂಗಾರ್ಪಣ-1” ಕಾರ್ಯಕ್ರಮ ಹಾಗೂ ‘ಸಿನ್ಸ್ 1999 ಶ್ವೇತಯಾನ- 82’ ಕಾರ್ಯಕ್ರಮವಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ವಿಭಾಗದ ಆಯ್ದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಸಮಾರಂಭ ದಿನಾಂಕ 01 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿವಂದಿಸಿದ ಹವ್ಯಾಸಿ ಯಕ್ಷಗಾನ ಹಿರಿಯ ಕಲಾವಿದ ಸೀತಾರಾಮ ಸೋಮಯಾಜಿ ಮಾತನಾಡಿ “ನಿರಂತರ ಸಾಂಸ್ಕೃತಿಕ ಚಟುವಟಿಕೆಯಿಂದ ಸಮಾಜದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಯಶಸ್ವೀ ಕಲಾವೃಂದ ಸಾಧನೆಯ ಪಥದಲ್ಲಿದ್ದು ಇತರ ವಿಭಾಗದ ಅನೇಕ ಸಾಧಕರನ್ನು ಗುರುತಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಸಾಧನೆಗೈದವರಿಗಲ್ಲದೇ ಸಾಮಾನ್ಯರಿಗೆ ಪ್ರಶಸ್ತಿ ಲಭಿಸಲು ಸಾಧ್ಯವಿಲ್ಲ. ಸಮಾಜಮುಖಿ ಕೆಲಸವನ್ನು ಮಾಡುತ್ತಾ ಉತ್ತುಂಗಕ್ಕೇರಿದಾಗಲೆ ಪ್ರಶಸ್ತಿ ದೊರೆಯಲು ಸಾಧ್ಯ. ಸಾಧನೆಗೈದ ಸಂಸ್ಥೆಯಿಂದಲೇ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘ್ಯಯೋಗ್ಯ.” ಎಂದರು.
ಮೆಕ್ಕೆಕಟ್ಟು ಮೇಳದ ಯಜಮಾನರಾದ ರಂಜಿತ್ ಕುಮಾರ್ ಶೆಟ್ಟಿ ಮಾತನಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವೆಯಲ್ಲಿ ನಿರಂತರವಾಗು ತೊಡಗಿಸಿಕೊಂಡ ಕೊರ್ಗಿ ವಿಠ್ಠಲ ಶೆಟ್ಟಿ, ಸಾಂಸ್ಕೃತಿಕ ಹಾಗೂ ಸಮಾಜ ಸೇವೆಯಲ್ಲಿ ಸಂಘಟಕರಾಗಿ ಗುರುತಿಸಿಕೊಂಡ ತಾರಾನಾಥ ಹೊಳ್ಳ ಕಾರ್ಕಡ, ಹನ್ನೆರಡು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ ಭಾಗವತಿಕೆಯ ಗುರು ಹಾಗೂ ಯಕ್ಷ ತಾಳಗಳ ತಯಾರಕರಾದ ವಿಠ್ಠಲ ಆಚಾರ್ ಬಸ್ರೂರು, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುವಾಗಿ, ಪ್ರಸಂಗಕರ್ತರಾಗಿ ಜನಾನುರಾಗಿಯಾಗಿರುವ ವಿಷ್ಣುಮೂರ್ತಿ ಬೇಳೂರು, ಶಿಕ್ಷಣ ಸೇವೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಾ ಅನೇಕ ಯಕ್ಷ ಪ್ರಸಂಗಗಳ ಕತೃರಾದ ಪಿ. ವಿ. ಆನಂದ ಸಾಲಿಗ್ರಾಮ, ಕ್ರೀಡಾ ಕ್ಷೇತ್ರದಲ್ಲಿ ಅತೀವ ಸಾಧನೆಗೈದ ಶೋಭಿತ್ ಆಚಾರ್ ತೆಕ್ಕಟ್ಟೆ ಇವರಗಳು ಅಸಾಧಾರಣ ಸಾಧಕರು. ಇವರನ್ನು ಗೌರವಿಸುವ ಕಾರ್ಯದಲ್ಲಿ ಭಾಗಿಯಾಗುವ ಯೋಗ್ಯ ನಮ್ಮದು”. ಎಂದರು.
ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಶ್ವೇತಯಾನದ ಕಾರ್ಯಾಧ್ಯಕ್ಷ ಗೋಪಾಲ ಪೂಜಾರಿ, ರೋಟರಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ಗುರುದ್ವಯರಾದ ದೇವದಾಸ್ ರಾವ್ ಕೂಡ್ಲಿ ಹಾಗೂ ಲಂಬೋದರ ಹೆಗಡೆ ನಿಟ್ಟೂರು, ಸುಧಾಕರ ಆಚಾರ್, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.
ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ಕಾರ್ಯಕ್ರಮ ‘ರಂಗಾರ್ಪಣ’ದಲ್ಲಿ ಶಿಷ್ಯರಿಂದ ‘ಯುಗಳ ಗಾನ ತಾಳಮದ್ದಳೆ’ ಹಾಗೂ ಯಕ್ಷಗಾನ ‘ಲಂಕಾದಹನ’ ಪ್ರಸ್ತುತಿಗೊಂಡಿತು.