ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಪುತ್ತೂರು ಘಟಕದ ವಾರ್ಷಿಕ ಮಹಾಸಭೆಯು ಇದೇ ತಾರೀಕು 20-05-2024ನೇ ಸೋಮವಾರದಂದು ತೆಂಕಿಲದ ವಿವೇಕಾಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾಸ್ಕರ ಬಾರ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಗೆ ಆಗಮಿಸಿದ ಜಿಲ್ಲಾಧ್ಯಕ್ಷರಾದ ಮಧೂರು ಮೋಹನ್ ಕಲ್ಲೂರಾಯರು ಮಾತನಾಡುತ್ತಾ “ಗಮಕವೆಂಬ ಅಪರೂಪದ ಕಲೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯತೆ ಇದೆ. ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸಕ್ತರನ್ನು ಉತ್ತೇಜಿಸುವುದರ ಜೊತೆಗೆ, ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಕೂಡಾ ಅತೀ ಅವಶ್ಯಕ” ಎಂದು ಹೇಳಿದರು.
ಬಳಿಕ ಪ್ರಸಕ್ತ 2024-25ನೇ ಸಾಲಿನ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಗೌರವಾಧ್ಯಕ್ಷರಾಗಿ ಭಾಸ್ಕರ ಬಾರ್ಯ, ಅಧ್ಯಕ್ಷರಾಗಿ ವೇದವ್ಯಾಸ ರಾಮಕುಂಜ, ಉಪಾಧ್ಯಕ್ಷರಾಗಿ ಶೋಭಿತ ಸತೀಶ್, ಈಶ್ವರ ಭಟ್ ಗುಂಡ್ಯಡ್ಕ, ವತ್ಸಲಾ ರಾಜ್ಞಿ, ಪ್ರಧಾನ ಕಾರ್ಯದರ್ಶಿಗಳಾಗಿ ಶಂಕರಿ ಶರ್ಮ, ಸಹಕಾರ್ಯದರ್ಶಿಗಳಾಗಿ ಸುಮನ ರಾವ್, ಸಂಚಾಲಕರಾಗಿ ಆಶಾ ಬೆಳ್ಳಾರೆ ಹಾಗೂ ಖಜಾಂಚಿಯಾಗಿ ವೀಣಾ ಸರಸ್ವತಿ ಇವರು ಆಯ್ಕೆಯಾದರು. ಜಿಲ್ಲಾಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರನ್ನು ಗೌರವ ಸಲಹೆಗಾರರನ್ನಾಗಿ ನೇಮಿಸಲಾಯಿತು.
ಪ್ರೊ. ಎ.ವಿ. ನಾರಾಯಣ, ಹರಿಣಾಕ್ಷಿ ಜೆ. ಶೆಟ್ಟಿ, ಜಯಂತಿ, ಪ್ರೇಮಲತಾ ರಾವ್, ಜಯಲಕ್ಷ್ಮಿ ವಿ. ಭಟ್, ಪ್ರೇಮಾ ನೂರಿತ್ತಾಯ, ವೀಣಾ ನಾಗೇಶ ತಂತ್ರಿ, ಭಾರತಿ ರೈ, ಭವಾನಿ ಶಂಕರ ಶೆಟ್ಟಿ, ಚಂದ್ರಶೇಖರ ಆಳ್ವ ಪಡುಮಲೆ ಸಕ್ರಿಯ ಸದಸ್ಯರಾಗಿ ಆಯ್ಕೆಯಾದರು. ಸಭಾ ಕಾರ್ಯಕ್ರಮದಲ್ಲಿ ಮಾಸ್ಟರ್ ಶಿವಪ್ರಕಾಶ್ ಸಬ್ಬಣಕೋಡಿ ಪ್ರಾರ್ಥಿಸಿ, ಆಶಾ ಬೆಳ್ಳಾರೆ ಸ್ವಾಗತಿಸಿ, ಅಧ್ಯಕ್ಷರಾದ ಭಾಸ್ಕರ ಬಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿ, ಹರಿಣಾಕ್ಷಿ ಜೆ. ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು. ಬಳಿಕ ಕುಮಾರಿ ಸುಪ್ರಜಾ ರಾವ್ ಅವರ ಗಮಕದೊಂದಿಗೆ ಸಭಾ ಕಾರ್ಯಕ್ರಮವು ಸುಸಂಪನ್ನಗೊಂಡಿತು.