ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರ ‘ಅಪ್ಪಯ್ಯನ ಆಸ್ತಿಕತೆ’ ಎನ್ನುವ 680 ಪುಟಗಳ ಅಪ್ಪಟ ಕುಂದ ಕನ್ನಡದ ಅದ್ಭುತ ಪುಸ್ತಕವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಸುಮಾರು 70 ವರ್ಷಗಳ ಹಿಂದಿನ ಅಮೋಘ ಚಿತ್ರಣಗಳನ್ನು ಈ ಪುಸ್ತಕದಲ್ಲಿ ಉಪಾಧ್ಯಾಯರು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ಶ್ರೀ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಶ್ರೀಮತಿ ಕಲ್ಯಾಣಿ ಇವರ ಸುಪುತ್ರ. ಸ್ವಂತ ಊರು ಕಟೀಲು ಆದರೂ ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಸ್ವಯಂ ನಿವೃತ್ತಿ ಹೊಂದಿದ ಬಿ.ಎಸ್.ಎನ್.ಎಲ್. ಉದ್ಯೋಗಿ. ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯ ಇವುಗಳಲ್ಲಿ ಆಸಕ್ತಿ ಇರುವ ಇವರು ಪಿಟೀಲು ವಾದನವನ್ನು ಹವ್ಯಾಸವಾಗಿರಿಸಿಕೊಂಡಿದ್ದಾರೆ.
ಡಾ. ಎಸ್.ಎಲ್. ಭೈರಪ್ಪ ಅವರ ಸರಸ್ವತೀ ಸಮ್ಮಾನ್ ಪ್ರಶಸ್ತಿ ಕೃತಿಯಾದ ‘ಮಂದ್ರ’ದ ರಂಗ ರೂಪಾಂತರ, ಭಾಸಕವಿಯ ‘ಮಧ್ಯಮವ್ಯಾಯೋಗ’ದ ಕನ್ನಡ ರೂಪ, ವಿಶಾಖದತ್ತನ ‘ಮುದ್ರಾರಾಕ್ಷಸ’ದ ಕನ್ನಡ ರೂಪ, ಕೆ.ಎಂ. ಮುನ್ಶಿ ಅವರ ‘ಸ್ವಾರ್ಥಸಿದ್ಧಿ’ಯ ಕನ್ನಡ ರೂಪ, ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತಿ’ ನಾಟಕ ರೂಪ ಮತ್ತು ಸಂತ ತ್ಯಾಗರಾಜರ ಪರಿಚಯಕೃತಿ ಇವು ಉಪಾಧ್ಯಾಯರ ಪ್ರಕಟಿತ ಕೃತಿಗಳು. ಶ್ರೀರಾಮ ಪಟ್ಟಾಭಿಷೇಕ, ವಾತಾಪೇ ಜೀರ್ಣೋಭವ, ಚಂದ್ರಚಕೋರಿ, ವಾಸವವಿಜಯ, ಜೀವಕಾರುಣ್ಯ, ಚಿತ್ರ ಚೇತನ, ಪುಣ್ಯಕೋಟಿ, ಧರ್ಮನಂದಿನಿ, ಮೃಚ್ಛಕಟಿಕ, ಶ್ರೀಧರಸ್ವಾಮಿ ಚರಿತ್ರ ಇವು ಇವರ ಯಕ್ಷಗಾನ ಕೃತಿಗಳು.
ಲೀಲಾಶುಕ ಕವಿಯ ‘ಶ್ರೀಕೃಷ್ಣಕರ್ಣಾಮೃತ’ ಇವರ ಅನುವಾದ ಕೃತಿ. ‘ಋತುಪರ್ಣ’ ಮತ್ತು ‘ವ್ಯೋಮಗೀತ’ ಇವು ಕವನಸಂಕಲನಗಳು. ಇವುಗಳಲ್ಲಿ ‘ಋತುಪರ್ಣ’ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರಕಿದೆ. ‘ಡಾ. ಪದ್ಮಾಸುಬ್ರಹ್ಮಣ್ಯಂ ನಾಟ್ಯಾಮೃತವರ್ಷ’ ಇದೊಂದು ನಾಟ್ಯ ಕೃತಿ ಹಾಗೂ ‘ಪ್ರೊ. ಜಿ. ವೆಂಕಟಸುಬ್ಬಯ್ಯ’ ಮತ್ತು ‘ಶತಾವಧಾನಿ ಡಾ. ಆರ್. ಗಣೇಶ್’ ಇವೆರಡು ಸಂದರ್ಶನ ಕೃತಿಗಳು. ಕರ್ನಾಟಕ ನಾಟಕ ಅಕಾಡಮಿಯ ‘ಸುವರ್ಣ ರಂಗ ಪ್ರಶಸ್ತಿ’, ನೂಪುರಭ್ರಮರಿ ಸಂಸ್ಥೆಯ ‘ವಿಮರ್ಶಾ ವಾಙ್ಮಯಿ ಪ್ರಶಸ್ತಿ’ ಹಾಗೂ ಬೆಂಗಳೂರು ಗಾಯನ ಸಮಾಜದ ‘ಶ್ರೀ ಕಲಾಜ್ಯೋತಿ ಪ್ರಶಸ್ತಿ’ ಇವು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
ಡಾ. ಆರ್. ಗಣೇಶ್ ಅವರ ನೂರಕ್ಕೂ ಮಿಕ್ಕಿ ಅಷ್ಟಾವಧಾನ ಹಾಗೂ ಒಂದು ಶತಾವಧಾನದಲ್ಲಿ ಪ್ರಚ್ಛಕತ್ವ, ‘ಯೇಗ್ದಾಗೆಲ್ಲಾ ಐತೆ’ ನಾಟಕದ ನಿರ್ದೇಶನ ಮತ್ತು ನಟನೆ ಹಾಗೂ ಇವರು ಕಲಾಗಂಗೋತ್ರಿ ನಾಟಕ ತಂಡದ ನಟರೂ ಆಗಿದ್ದಾರೆ. ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತಿ ಅವರ ‘ರಾಮಕಥಾ ಪ್ರವಚನ’ ಸರಣಿಗಳ 200ಕ್ಕೂ ಮಿಕ್ಕಿ ರೂಪಕ ವಿಭಾಗದ ಸಾಹಿತ್ಯ ನಿರ್ದೇಶನ ಮತ್ತು ನಟನೆ ಅಭಿನಂದನಾರ್ಹ.
‘ಅಪ್ಪಯ್ಯನ ಆಸ್ತಿಕತೆ’ ಒಂದು ವಿಮರ್ಶೆ :
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿತ ‘ಅಪ್ಪಯ್ಯನ ಆಸ್ತಿಕತೆ’ ಎನ್ನುವ ಅಪ್ಪಟ ಕುಂದಗನ್ನಡದ ಸೌರಭ ಸೂಸುವ 700 ಪುಟಗಳ ದಪ್ಪ ಪುಸ್ತಕ ಕುಂದಗನ್ನಡದಲ್ಲಿ ಹೇಳುವುದಾದರೆ ಗಿರ್ಕ್ ಅವಲಕ್ಕಿ-ಬೆಲ್ಲ ಜಗಿದ ಹಾಂಗೆ, ಜಗದಷ್ಟೂ ರುಚಿ ಓದಿದಷ್ಟೂ ಸವಿ ! ವೃತ್ತಿಯಿಂದ ಪುರೋಹಿತರಾಗಿಯೂ ಪೃವೃತ್ತಿಯಿಂದ ಸಾಹಿತ್ಯ-ಕಲಾಸಕ್ತರೂ ಆಗಿದ್ದ ಸೂರ್ಯನಾರಾಯಣ ಉಪಾಧ್ಯಾಯರು ತಮ್ಮ ಬದುಕಿನ ಹಿಂದು-ಮುಂದಿನ, ಆಚೀಚಿನ ಘಟನಾವಳಿಗಳ ಮೂಲಕ ಕುಂದಗನ್ನಡದ ನೆಲದ ಬದುಕಿನ ಕಂಪನ್ನು ಪುಟ ಪುಟದಲ್ಲೂ ಸ್ಫುರಿಸುತ್ತಾರೆ. ಮನ ಮುದ ಕೊಡುವ ಕುಂದಾಪ್ರ ಕನ್ನಡದ ಮಣ್ಣಿನ ವಾಸ್ನಿ ಘಮ್ಮೆಂದ್ ಅಡಿಗಡಿಗೆ ಮೂಗಿಗ್ ಬಡಿಯತ್. ನೂರ್ ವರ್ಷದ ಹಿಂದಿನ್ ಆ ಕಾಲದ್ ಬದ್ಕಿನ್ ಕಷ್ಟ ಕಾರ್ಪಣ್ಯಗಳು, ರೀತಿ ನೀತಿಗಳನ್ನು ಓದುಗರಿಗೆ ತೆರೆದಿಟ್ಟ ಪರಿ ಅನನ್ಯ. ಕುಂದಾಪುರದ ಮಣ್ಣಿನ ಸ್ವಾರಸ್ಯಕರ ನುಡಿಗಟ್ಟುಗಳು, ಗಾದೆ, ಚಾಲ್ತಿಯಲ್ಲಿದ್ದ ಬಯ್ಗಳು, ಉಪಮೆಗಳಿಂದ ಚಂದದ ಸರ ಕಂಡ್ಹಾoಗ್ ನೆಯ್ದ್, ಶೃಂಗಾರಮಯವಾಗಿ ಕಣ್ಣಿಗೆ ಕಟ್ಟೂ ಹಾಂಗ್ ದೃಷ್ಟಾಂತ ಸಹಿತ ಬಣ್ಣಿಸುವ, ಉಪಾಧ್ಯರ ಸಾಹಿತ್ಯ ಸಿರಿವಂತಿಕೆಗೆ, ಅವರ ಕುಂದಗನ್ನಡ ಭಾಷಾ ಸೊಗಸಿಗೆ ಓದುಗ ‘ಲಾಯಕ್ ಇತ್’’ ಅನ್ನದೇ ಇರಲು ಸಾಧ್ಯವೇ ಇಲ್ಲ. ಬಡತನ, ನೋವು, ಕಷ್ಟ-ಕಾರ್ಪಣ್ಯಗಳನ್ನು ರಸಮಯವಾಗಿ ಉಣಬಡಿಸುವ ಅವರ ಭಾಷಾ ಸಾಮರ್ಥ್ಯ ಅನುಪಮ.
ತವರಿನಿಂದ ನಿರ್ಲಕ್ಷಿಸಲ್ಪಟ್ಟ ಸೂರ್ಯ ಉಪಾಧ್ಯರ ಹೆರಿ ಹೆಂಡ್ತಿಯ ಪ್ರಸವ ಸಮಯದ ದಾರುಣ ಅಂತ್ಯ, ಮಗಳು ಕಾಯನ (ಕಾವೇರಿ) ಲಾಲನೆ-ಪಾಲನೆಯನ್ನು ಕೃತಿಕಾರ ಉಪಾಧ್ಯರು ಸ್ವತ: ಕಂಡ್ಹಾoಗೆ ಹೇಳ್ತರ್. ಎರಡನೇ ಹೆಂಡ್ತಿಯಾಯಿ ಬಂದ ಕಲ್ಯಾಣಿಯ ಮಲತಾಯಿ ಧೋರಣೆ, ನಲಿಯಬೇಕಾದ ವಯಸ್ಸಿನಲ್ಲಿ ಅಡಕತ್ತರಿಗೆ ಸಿಕ್ಕಂಡ್ ಸಣ್ಣ್ ಹೆಣ್ಣ್ ಕಾಯನ ಕಷ್ಟದ್ ಬದ್ಕಿನ್ ಕತಿ ಓದದೋರಿಗೆ ಥೋ.. ಥೋ..ಅನ್ಸತ್!. ಮಾತೃತ್ವದ ಅಮೃತಕುಂಭಕ್ಕಿಂತ ನೈಷೇಧಿಕವಾದ ವ್ಯಕ್ತಿತ್ವದ ವಿಷಾಕ್ತವಿಷವಲಯವೇ ವಿಜೃಂಭಿಸಿತು ಎಂದು ಉಪಾಧ್ಯರು ಅಪ್ಪಯ್ಯನ ಅತ್ತೆ ಮಂಜಮ್ಮನ ವ್ಯಕ್ತಿತ್ವ ಪರಿಚಯಿಸುತ್ತಾರೆ. ಕೃತಿಯುದ್ದಕ್ಕೂ ತಂದೆ-ಮಗಳ ಬಾಂಧವ್ಯವನ್ನು ನಿಷ್ಕಲ್ಮಷ ಹೃದಯದಿಂದ ಬಿಚ್ಚಿಡುವ ಕೃತಿಕಾರರ ಸಹೃದಯತೆ ಎದ್ದ್ ಕಾಣತ್. ಕೈ ಬಾಯಿ ಸಂಘರ್ಷದ ಬದುಕಿನುದ್ದಕ್ಕೂ ತನ್ನೊಳಗಿನ ಕಲಾವಿದನನ್ನು ಜೀವಂತವಾಗಿಸಿಡಲು ಶ್ರಮಿಸುವ ಉಪಾಧ್ಯರು ಪೌರೋಹಿತ್ಯದ ಮಡಿವಂತಿಕೆಯ ಕಟ್ಟುಪಾಡಿನ ಬದುಕಿನ ಚೌಕಟ್ಟಿನೊಳಗೆ ಕಲಾವಿದನೊಂದಿಗೂ ಜತೆ ಜತೆಯಾಗಿ ಸಾಗಲು, ಸಮನ್ವಯ-ಸಾಮಂಜಸ್ಯ ಸಾಧಿಸಲು ಹೆಣಗುತ್ತಾರೆ. ಕಾಮನೆ, ಲಾಲಸೆ ಇಲ್ಲದೇ ಕಲೆಯನ್ನು ಉಸಿರಾಗಿಸಿಕೊಂಡು ಎಲೆಮರೆಯ ಕಾಯಿಯಂತೆ ಬಾಳಿ ಬದುಕಿದ ಸೂರ್ಯ ಉಪಾಧ್ಯರಂತಹ ಕಲಾವಿದರ ಕೊಡುಗೆಯಿಂದ ಇವತ್ ಯಕ್ಷಗಾನ-ತಾಳಮದ್ದಳೆ ಕಲೆ ಶ್ರೀಮಂತ ಕಲೆಯಾಗಿ ನಮ್ಮ ನಡುವೆ ಉಳಿದಿದೆ ಎಂಬುದ್ ಸತ್ಯ.
ಗಂಡ ಹೆಂಡ್ತಿ ಹ್ಯಾಂಗೆಲ್ಲಾ ಪ್ರೇಮಾತಿರೇಕವಾಗಿ ಬೈದಕಣ್ಣಕ್ಕ್, ಅಂತಹ ಗಹಣಗರ್ಭಿತವಾದ ಪದ ಭಂಡಾರ ಅಚ್ಚಕನ್ನಡದಲ್ಲಿ ಎಷ್ಟಿವೆ ಎಂತ ಒಂದೆಡೆ ಇಲ್ಲಿ ಲೇಖಕರು ಭಾಳ ಸಾಪ್ ಆಯಿ ಬರೆದೀರ್. ಪತಿವೀರನ ಪರಾಕ್ರಮೋಕ್ತಿ ಇಂತಿದೆ– ಎಲೆಲೇ ಕಳ್ಳೆ, ಕರಾಳಿ, ಭ್ರಷ್ಟೇ, ಮರುಳೇ, ಹಪ್ರಂಡೇ, ನೀಚಳೇ, ಕಡುದುಷ್ಟೇ, ಕಣ್ಕೊಳಕಿ, ಹಾಳ್ ಮುಸುಡಳೇ, ಬಾ ಕುಟ್ಟವೇಂ ಮೆಟ್ಟಿನಿಂ… ಪತ್ನಿಯ ಉವಾಚ – ಎಲೆಲೇ ನೀ ಎನ್ನ ಬಲ್ಪಂ ತಿಳಿಯದಕಟ ರೇ! ಕೆಟ್ಟ ದುಷ್ಟಾ ದುರಾತ್ಮಾ, ಹೆಡ್ಡಾ, ಫಟಿಂಗಾ, ದುರುಳ, ಮರುಳ, ಮುಟ್ಠಾಳ, ಮೂಢಾತ್ಮ, ಬೋಳಾ… ಆಕ್ಷರ್ಯ, ಮುಕ್ಳಿಸೊಕ್, ಹರ್ಬ್, ಜವ್ಣಾಸು, ತೆವಡ್ಕ ಮೊದಲಾದ ಕುಂದಗನ್ನಡದ ಶಬ್ಧಗಳ ಯಥೇಚ್ಛ ಬಳಕೆ, ಅಂಡ್ ಸುಟ್ (ಮುಕ್ಳಿ ಸುಟ್) ಹುಳಿಯೆನ್ನುವ ಕುಂದ ನಾಡಿನ ರೆಸಿಪಿಯ ಹಾಸ್ಯಮಯ ವಿವರಣೆ, ಊಟದ ತಟ್ಟೆಯ ಪರ್ಯಾಯವಾಗಿ ಹಂಬೆ ಎಲೆ ಸೆಡೋ ರಿವಾಜು, ಯೂರಿ ಗಗಾರಿನ್ನನೂ ಅನುಭವಿಸಿರಲಾರದ ಕುಂಡೆ ಖುಶಿಯಲ್ಲಿ ಪಿಳ್ಳೆಗಳು ಪೊಂಪುಳಿ ಹೋಗುತ್ತಿದ್ದವು, ಬೆಕ್ಕು ಮೈ ನೆರೆದರೂ ನೆಂಟರೆಲ್ಲ ಸೇರಿದರೆ ಊಟದೆಲೆಯ ಸಂಖ್ಯೆ ನೂರನ್ನು ಮೀರುತ್ತಿತ್ತು ಎನ್ನುವ ತರಹೇವಾರಿ ಉಪಮೆಗಳ ಮೂಲಕ ಕುಂದಾಪುರ ಪರಿಸರದ ಭಾಷಾ ಪ್ರಬೇಧದ ಮೆರುಗನ್ನು ಸಮಸ್ತ ಕನ್ನಡಿಗರು ಆಸ್ವಾದಿಸುವಂತೆ ಮಾಡಿದ್ದಾರೆ.
ಬಾಣಂತಿ ಕಾಯನ ಆರೈಕೆ ಮಾಡಬೇಕಾದ ಮಲತಾಯಿ ಕಲ್ಯಾಣಿ ಮಗುವಿನ ಹಾಲಿನಲ್ಲೂ ನೀರು ಬೆರೆಸುವ ಕಳ್ಳಾಟ, ಹಿರಿತನ ನಿಭಾಯಿಸಬೇಕಾದ ವೆಂಕಮ್ಮ ಮದುವೆ ಮನೆಗೆ ತಂದ ಸಾಮಾಗ್ರಿಗಳನ್ನೂ ಮಂಗಮಾಯ ಮಾಡುವ ವಿಘ್ನ ಸಂತೋಷದ ಬುದ್ಧಿ, ಅಪ್ಪಯ್ಯನ ಶ್ರಾದ್ಧಕ್ಕೆ ಕರೆ ಬರತ್ತಾ ಅಥವಾ ಅನ್ನಕ್ಕೆ ಎಸರು ಇಡ್ಕಾ.. ಎಂದು ಹೊತ್ತು ಏರುವವರೆಗೆ ಕತ್ತು ನೀಕಿ ನೋಡಬೇಕಾದ ಕಲ್ಯಾಣಿಯ ಕಸಿವಿಸಿಗಳಂತಹ ಹಿಂದೂ-ಇಂದೂ ಪ್ರಾಸಂಗಿಕ ಎನಿಸುವ ಅನೇಕ ಸಾಂಸಾರಿಕ ಹೇಸಿಗೆಗಳನ್ನೂ ಉಪಾಧ್ಯರು ಕುಂದಗನ್ನಡದ ಮೊನಚು-ವ್ಯಂಗ್ಯೋಕ್ತಿಗಳಿಂದ ಸ್ವಾದಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಜೀವನ ಕಥನವೊಂದನ್ನು ಸಶಕ್ತವಾಗಿ ಪ್ರಸ್ತುತ ಪಡಿಸುವುದರ ಜತೆಯಲ್ಲಿ ಅದೊಂದು ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ದಾಖಲೆಯಾಗುವಂತೆ, ಕುಂದಗನ್ನಡದ ಮಣ್ಣಿನ ಭಾಷಾ ಶ್ರೀಮಂತಿಕೆಯ ಹಿರಿಮೆಯನ್ನು ಜಗದಗಲ ಪಸರಿಸುವ ಕೃತಿಯಾಗಿ ರಚಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು (ಮೊ.9448087878) ಅಭಿನಂದನಾರ್ಹರು.
ಬೈಂದೂರು ಚಂದ್ರಶೇಖರ ನಾವಡ
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ದಿ. ರಾಮ ನಾವಡ ಮತ್ತು ದಿ. ಗೋದಾವರಿ ಅವರ ಪುತ್ರ ಬೈಂದೂರು ಶ್ರೀ ಚಂದ್ರಶೇಖರ ನಾವಡ. 1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯಲ್ಲಿ 22 ವರ್ಷದ ಸೇವಾ ಅನುಭವವನ್ನು ಹೊಂದಿದ ಇವರು ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲಿ ಮತ್ತು ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಮಧ್ಯಪ್ರದೇಶದ ಪಚಮಡಿ ಹಾಗೂ ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‌ನಲ್ಲೂ ಸೇವೆ ಮಾಡಿದ ಅನುಭವಿ.
ಜಮ್ಮು ಕಾಶ್ಮೀರದಲ್ಲಿ ‘ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ ‘ಅಪರೇಶನ್ ವಿಜಯ್’ದಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆಫ್ರಿಕಾದ ಕಾಂಗೋ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ವಿದೇಶ ಸೇವೆಯನ್ನು ಮಾಡಿ 2012ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದರು. ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೈಂದೂರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಕ್ಷಣೆ, ವಿದೇಶಾಂಗ ನೀತಿ, ಬ್ಯಾಂಕಿಂಗ್ ಸಂಬಂಧಿಸಿದ ಲೇಖನಗಳು, ಕಥೆ, ವಿಮರ್ಶೆ, ಲಘು ಬರಹಗಳು, ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸೇನಾನುಭವ’, ‘ಮಹಾನ್ ಸೇನಾನಿ ಜ. ಬಿಪಿನ್ ರಾವತ್’, ‘ಸೈನಿಕನ ಆಂತರ್ಯದ ಪಿಸು ನುಡಿ’ ಇವು ಇವರ ಪ್ರಕಟಿತ ಕೃತಿಗಳು.
1 Comment
ವಿದ್ವಾನ್ ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರು ಫೇಸ್ ಬುಕ್ ನಲ್ಲಿ ಅನೇಕ ಕಂತುಗಳಲ್ಲಿ ಬರೆದ ‘ಅಪ್ಪಯ್ಯನ ಆಸ್ತಿಕತೆ’ ಯನ್ನು ಕುವೆಂಪು ಭಾಷಾ ಪ್ರಾಧಿಕಾರವು ಪ್ರಕಟಿಸಿರುವ ತಾವಾಗಿಯೆ ಕೇಳಿ ಹೊರ ತಂದರಂತೆ. ಅದು ದಶಕಗಳ ಹಿಂದಿನ ಕುಂದ ನಾಡಿನ ಗ್ರಾಮೀಣ ಬದುಕಿನ ಸುಂದರ ವರ್ಣನೆ ಉಣ ಬಡಿಸುವ ಸರ್ವೋತ್ಕೃಷ್ಟ ಕೃತಿ. ಪುಸ್ತಕ ಓದುಗರನ್ನು ಹಿಡಿದಿಡುವ ಕೃತಿ. ನಾನು ಆ ಕೃತಿಯ ಕುರಿತು ಬರೆದ ಸಣ್ಣ ಬರಹವನ್ನು ಮತ್ತಷ್ಟು ಸುಂದರವಾಗಿಸಿ, ಅರ್ಥಪೂರ್ಣ ರೀತಿಯಲ್ಲಿ ತಮ್ಮ ವೆಬ್ ಓದುಗರಿಗೆ ಪರಿಚಯಿಸಿದ್ದೀರಿ. ಇದು ವಿದ್ವಾನ್ ಉಪಾಧ್ಯರಿಗೂ ಮತ್ತು ನನಗೂ ಖುಷಿ ಕೊಟ್ಟಿದೆ. ಇನ್ನೂ ಹೆಚ್ಚು ಓದುಗರಿಗೆ ಇದು ತಲುಪಲಿ. ತಮ್ಮ ಪ್ರೋತ್ಸಾಹಕ್ಕೆ ಋಣಿ. 700 ಪುಟಗಳ ಪುಸ್ತಕಕ್ಕೆ ಕೇವಲ 500 ರೂಪಾಯಿ. ಅದೂ ಸಹ ಜನವರಿ, ಏಪ್ರಿಲ್, ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲಿ 50% ರಿಯಾಯತಿ ಇದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ದಿಂದ online ನಲ್ಲಿ ತರಿಸಿಕೊಳ್ಳಬಹುದು. ರೂವಾರಿ ಡಾಟ್ ಕಾಮ್ ತಂಡಕ್ಕೆ ಮತ್ತೊಮ್ಮೆ ನಮಿಸುವೆ.