ಬೆಂಗಳೂರು : ಗೌರವ ಪ್ರಶಸ್ತಿ – 2023 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನಲ್ಲಿ (1) ಕೊಂಕಣಿ ಸಾಹಿತ್ಯ, (2) ಕೊಂಕಣಿ ಕಲೆ (ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) (3) ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ‘ಗೌರವ ಪ್ರಶಸ್ತಿ’ಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ಸನ್ಮಾನದೊಂದಿಗೆ ರೂ.50,000/- ಗೌರವಧನ ಮತ್ತು ಪ್ರಮಾಣಪತ್ರವನ್ನೊಳಗೊಂಡಿದೆ.
ಪುಸ್ತಕ ಬಹುಮಾನ – 2022 ಮತ್ತು 2023 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2022ರ ಕ್ಯಾಲೆಂಡರ್ ವರ್ಷದಲ್ಲಿ (2022 ಜನವರಿ 1ರಿಂದ 2022 ಡಿಸೆಂಬರ್ 31) ಹಾಗೂ 2023ರ ಕ್ಯಾಲೆಂಡರ್ ವರ್ಷದಲ್ಲಿ (2023 ಜನವರಿ 1ರಿಂದ 2023 ಡಿಸೆಂಬರ್ 31) ಪ್ರಕಟಿತವಾದ (1) ಕೊಂಕಣಿ ಕವನ, (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ, (3) ಕೊಂಕಣಿಗೆ ಭಾಷಾಂತರಿಸಿದ ಕೃತಿ (ಪ್ರಥಮ ಆದ್ಯತೆ) ಅಥವಾ ಲೇಖನ/ ಅಧ್ಯಯನ ವಿಮರ್ಶೆ ಬಗ್ಗೆ ಲೇಖಕರಿಂದ ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎರಡು ವರ್ಷಗಳ ಪುಸ್ತಕಗಳನ್ನು ಪ್ರತ್ಯೇಕವಾಗಿ ಸಲ್ಲಿಸುವುದು. ಪುಸ್ತಕ ಬಹುಮಾನವು ಸನ್ಮಾನದೊಂದಿಗೆ ರೂ.25,000/- ಗೌರವ ಧನ ಮತ್ತು ಪ್ರಮಾಣಪತ್ರವನ್ನೊಳಗೊಂಡಿದೆ.
ಸಾಧಕರು ನೇರವಾಗಿ, ಸಂಘ ಸಂಸ್ಥೆಗಳು, ಸಾರ್ವಜನಿಕರೂ ಸಹ ಸಾಧಕರ ಹೆಸರು ಮತ್ತು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಗೌರವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-2023” ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ -2022 ಅಥವಾ 2023” ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕಾ ಕಟ್ಟಡ, ಲಾಲ್ ಬಾಗ್, ಮಂಗಳೂರು 575003, ಇವರಿಗೆ ದಿನಾಂಕ 05-07-2024ರೊಳಗಾಗಿ ಕಳುಹಿಸಿಕೊಡುವಂತೆ ಕೋರಲಾಗಿದೆ.