ಕುಶಾಲನಗರ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಹಾಗೂ ವಿವಿಧ ಗೌಡ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ -2025’ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರಂದು ಕುಶಾಲನಗರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “ಭಾಷೆಗಳು ನಾಶವಾದಲ್ಲಿ ಸಮುದಾಯಗಳ ಏಳಿಗೆ ಅಸಾಧ್ಯ. ತಾಯಿನುಡಿಗಳನ್ನು ಬಳಕೆ ಮಾಡುವ ಮೂಲಕ ಉಳಿಸುವುದರೊಂದಿಗೆ ಅಕಾಡೆಮಿ ಮೂಲಕ ಭಾಷೆಯ ಅಭಿವೃದ್ಧಿಗೆ ಕಾರ್ಯಸೂಚಿ ನೀಡುವ ಕೆಲಸವಾಗಬೇಕಾಗಿದೆ. ಪ್ರಸಕ್ತ ಭಾಷೆ ಸಂಸ್ಕೃತಿ ದಿಕ್ಕಾಪಾಲಾಗಿ ಹೋಗುತ್ತಿದ್ದು, ಜನಗಣತಿ ಮೂಲಕ ತಮ್ಮ ಸಮುದಾಯದ ಜನಸಂಖ್ಯೆ ಮಾಹಿತಿಯನ್ನು ಸರಕಾರಕ್ಕೆ ಲಭಿಸುವಂತೆ ಮಾಡುವುದು, ಮುಖ್ಯ ಭಾಷೆ -ಉಪಭಾಷೆಗಳ ನಡುವೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಈ ಮೂಲಕ ಭಾಷೆಗಳ ಬೆಳವಣಿಗೆ ಸಾಧ್ಯ. ಅಧಿಕಾರದ ಮೂಲಕ ಭಾಷೆಗಳನ್ನು ನಿರ್ಧಾರ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಚರಿತ್ರೆಗಳು ಜನರಿಗೆ ಭಾರ ಆಗದೇ ಶಕ್ತಿ ನೀಡುವಂತಾಗಬೇಕು. ನಮ್ಮ ನಡುವೆ ಬಳಕೆ ಮಾಡುವ ಪದಗಳು ಮತ್ತಿತರ ವಿಷಯಗಳ ಸಂಗ್ರಹ ಮೂಲಕ ಕೋಶ ತಯಾರಾಗಬೇಕು. ಭಾಷೆಗಳು ಉಳಿದಲ್ಲಿ ಮಾತ್ರ ದೇಶದ ಉಳಿವು ಸಾಧ್ಯ. ದೇಶದ 172 ಭಾಷೆಗಳು ಮುಂದಿನ ಐದು ದಶಕಗಳಲ್ಲಿ ನಶಿಸಿ ಹೋಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಮಾತೃಭಾಷೆ ಬಿಟ್ಟು ಇತರ ಭಾಷಿಗರ ಗುಲಾಮರಾಗುವ ಸಾಧ್ಯತೆಗಳೇ ಅಧಿಕವಾಗಿದೆ. ಸ್ಥಳೀಯ ಭಾಷೆ ಉಳಿಸಲು ಸೂಕ್ತ ಕಾರ್ಯ ಯೋಜನೆ ಕಾರ್ಯಸೂಚಿ ಇಲ್ಲದಿರುವುದು. ಈ ನಡುವೆ ಇತರ ಸಮುದಾಯಗಳು ಚಿಕ್ಕ ಸಮುದಾಯಗಳ ಭಾಷೆಗಳನ್ನು ಸಾಯಿಸಲು ಯತ್ನಿಸುತ್ತಿದೆ. ಕನ್ನಡ ಭಾಷೆ ಕೂಡ ಕುಸಿತ ಕಾಣುತ್ತಿದ್ದು, ಹಿಂದಿ ಭಾಷೆ ಬೆಳೆಯುತ್ತಿದೆ” ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ “ಅಕಾಡೆಮಿ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಕುಶಾಲ್ನಗರದಲ್ಲಿ ಗಡಿನಾಡ ಉತ್ಸವ ನಾಲ್ಕನೇ ಕಾರ್ಯಕ್ರಮವಾಗಿದ್ದು ಅರೆ ಭಾಷೆ ಉಳಿವಿನ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂಬಂಧ ಹಲವು ಪುಸ್ತಕಗಳನ್ನು ಈಗಾಗಲೇ ಅಕಾಡೆಮಿ ಮೂಲಕ ಬಿಡುಗಡೆಗೊಳಿಸಲಾಗಿದೆ. ಸಂಶೋಧನಾ ಪ್ರಬಂಧಗಳನ್ನು ಕೂಡ ಪ್ರಕಟಿಸಲಾಗಿದ್ದು, 12 ಕೃತಿಗಳನ್ನು ಬಿಡುಗಡೆಗೊಳಿಸಲಾಗಿದೆ” ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಮಾತನಾಡಿ “ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಉಳಿಸಿ ಬೆಳೆಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಕಾಡೆಮಿ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾಷಾ ಜಾಗೃತಿ ಮೂಡಿಸಬಹುದು. ಸಮಾಜದ ಒಗ್ಗಟ್ಟಿನ ಮೂಲಕ ಮುಂದಿನ ಜನಾಂಗಕ್ಕೆ ಇತಿಹಾಸವನ್ನು ಹಸ್ತಾಂತರಿಸುವ ಕೆಲಸವಾಗಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಜಿ ಸಭಾಪತಿ ಕೆ. ಜಿ. ಬೋಪಯ್ಯ ಮಾತನಾಡಿ “ಮಕ್ಕಳಿಗೆ ಭಾಷೆಯ ಬಗ್ಗೆ ಆಚಾರ, ವಿಚಾರ, ಸಂಸ್ಕೃತಿ ಉಳಿಸುವ ಬಗ್ಗೆ ಪೋಷಕರು ತಿಳಿಸುವಂತೆ ಆಗಬೇಕು. ಅಕಾಡೆಮಿ ಮೂಲಕ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಆಗಬೇಕು. ಈಗಾಗಲೇ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು ಸಮಾಜದ ಮೂಲ ಸಂಸ್ಕೃತಿ ಬಗ್ಗೆ ನಿರಂತರ ಅಧ್ಯಯನ ಮಾಡುವಂತಾಗಬೇಕು. ಒಗ್ಗಟ್ಟಾಗಿ ಇತರರಿಗೆ ಮಾರ್ಗದರ್ಶನ ನಡೆಯಲಿ” ಎಂದು ಆಶಯ ವ್ಯಕ್ತಪಡಿಸಿದರು.
ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯ ಸಂದೀಪ್ ಪೂಳಕಂಡ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಆಲೂರು ಸಿದ್ದಾಪುರದ ದೇವಾಯೀರ ಗಿರೀಶ್, ಸುಂಟಿಕೊಪ್ಪ ಸಮಾಜದ ಕುಂಜಿಲನ ಮಂಜುನಾಥ್, ಗುಡ್ಡೆ ಹೊಸೂರು ಗೌಡ ಸಮಾಜ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ನಂಜರಾಯಪಟ್ಟಣದ ಕೆಮ್ಮಾರನ ಉತ್ತಯ್ಯ, ಚೆಟ್ಟಳ್ಳಿ ಸಮಾಜದ ರಾಘವಯ್ಯ ಐಯ್ಯಂಡ್ರ, ಚಿಕ್ಕತ್ತೂರು ಸಮಾಜದ ಚೆರಿಯ ಮನೆ ಮಂದಪ್ಪ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ ಅಂಬೆಕ್ಕಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಹೊರಟ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಚಾಲನೆ ನೀಡಿದರು. ಅಕಾಡೆಮಿ ಸದಸ್ಯ ಸಂಚಾಲಕರಾದ ಪೊನ್ನಚ್ಚನ ಮೋಹನ್ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.