ಮಂಗಳೂರು : ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಂದ ಗೋಕುಲ, ಕಲಾಭಿ ಮತ್ತು ಕೆನರಾ ಕಲ್ಚರಲ್ ಅಕಾಡೆಮಿ ಸಹಯೋಗದೊಂದಿಗೆ ರಾಜ್ಯ ಮಟ್ಟದ ಒಂಭತ್ತನೆ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 04-01-2024ರಿಂದ 07-04-2024ರವರೆಗೆ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ದಿನಾಂಕ 04-01-2024ರಂದು ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ‘ನಟನ’ ತಂಡದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುವ ‘ಕಣಿವೆಯ ಹಾಡು’, ದಿನಾಂಕ 05-01-2024ರಂದು ರಾಜೇಂದ್ರ ಕಾರಂತ್ ರಚನೆ ಮತ್ತು ನಿರ್ದೇಶನದಲ್ಲಿ ಬೈಂದೂರಿನ ಲಾವಣ್ಯ ತಂಡದವರು ಪ್ರಸ್ತುತ ಪಡಿಸುವ ‘ನಾಯಿ ಕಳೆದಿದೆ’, ದಿನಾಂಕ 06-01-2024ರಂದು ರೋಹಿತ್ ಎಸ್. ಬೈಕಾಡಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಣಿಪಾಲದ ಸಂಗಮ ಕಲಾವಿದೆರ್ ಅಭಿನಯಿಸುವ ‘ಮೃತ್ಯುಂಜಯ’ ಮತ್ತು ದಿನಾಂಕ 07-01-2024ರಂದು ರಾಜ್ ಗುರು ಹೊಸ ಕೋಟೆ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ರಂಗಪಯಣ ಪ್ರಸ್ತುತ ಪಡಿಸುವ ‘ನವರಾತ್ರಿಯ ಕೊನೆ ದಿನ’ ನಾಟಕ ಪ್ರದರ್ಶನಗಳು ನಡೆಯಲಿದೆ.
ಕಣಿವೆಯ ಹಾಡು ನಾಟಕದ ಕುರಿತು :
ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು.
ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ. ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್ ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕ, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸುತ್ತಾನೆ.
ಕಣಿವೆಯ ಹಾಡು ಹೀಗೆ… ನಮ್ಮ ಎದೆಗಳಲ್ಲಿ ಮಾತ್ರವಲ್ಲ ಬುದ್ಧಿಯಲ್ಲೂ ರಿಂಗುಣಿಸುವುದು ಹೀಗೆ: ದಕ್ಷಿಣ ಆಫ್ರಿಕದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ನನ್ನಲ್ಲಿ ಅಸಾಧ್ಯ ನೋವಿದೆ, ಸಿಟ್ಟಿದೆ. ಆದರೆ ನನ್ನ ಬರವಣಿಗೆಯ ಶಕ್ತಿ ಪ್ರೀತಿ ಮಾತ್ರ. ನಾನು ನನಗಿರುವ ಸಿಟ್ಟಿನ ಕಾರಣಗಳನ್ನು ಪ್ರೀತಿಗೆ ಹೇಳಿದ್ದೇನೆ. ಅದು ಕೃತಿ ರಚಿಸುತ್ತದೆ.
ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ನಾಟಕ : ನಾಯಿ ಕಳೆದಿದೆ
ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ ಸದೃಶವಾಗಿಸುತ್ತದೆ. ಫೋನಿನಲ್ಲೂ ತಮಗಿಂತ ನಾಯಿ ಕುರಿತಾಗಿ ತೋರುವ ಕಾಳಜಿ, ಕೇಳುವ ಪ್ರಶ್ನೆಗಳು ಅವರ ಕನಸುಗಳನ್ನು ನುಚ್ಚುನೂರಾಗಿಸುತ್ತವೆ.
‘ಮೃತ್ಯುಂಜಯ’ ನಾಟಕದ ಕುರಿತು :
ಮಾನವ ನಾಗರೀಕತೆಯ ಮೂಲದತ್ತ ಪಯಣ ರೋಮಾಂಚನಕಾರಿ ಅನುಭವ. ಆ ದಾರಿಯಲ್ಲಿ ಪ್ರಾಚೀನ ಈಜಿಪ್ಟ್ ಬಲು ದೊಡ್ಡ ತಂಗುದಾಣ. ಸುಮಾರು 4500 ವರ್ಷಗಳ ಹಳೆಯ ಸಂಗತಿ ಇದು. ಐಗುಪ್ತದ ನೀಲನದಿಯ ದಂಡೆಗಳು ಕೃಷಿಯಿಂದ ಹಸುರಾಗ ತೊಡಗಿ ಆಗಲೇ 4000 ವರ್ಷ ಕಳೆದಿದ್ದವು. ಊರುಗಳು ನಗರಗಳು ರೂಪುಗೊಂಡಿದ್ದವು. ಲಿಪಿ ಸೃಷ್ಟಿಯಾಗಿತ್ತು. ಸತ್ತ ಫೆರೋಗಳಿಗೆ ಗೋರಿ ನಿರ್ಮಾಣ ಆರಂಭವಾಗಿತ್ತು. ಅದು ಈಜಿಪ್ಟ್ ನ ಬಹುಜನ ಸಮುದಾಯವೇ ಗುಲಾಮ ಜೀವನ ನಡೆಸುತ್ತಿದ್ದ ಕಾಲ. ಅಂತಹ ದುಷ್ಟ ವ್ಯವಸ್ಥೆಯಲ್ಲಿ ಸರ್ವಶಕ್ತ ಫೆರೋ ವಿರುದ್ಧ ಶ್ರಮಿಕರು ನಡೆಸಿದ ಹೋರಾಟವೇ ಈ ಕಥನ. ಇದು ಮಾನವ ನಾಗರೀಕತೆಯ ಇತಿಹಾಸದಲ್ಲೇ ಪ್ರಪ್ರಥಮ ಎನ್ನಬಹುದಾದ ಬಂಡಾಯದ ಕಥನ.
ಪ್ರಾಚೀನ ಕಾಲದ್ದೆಲ್ಲವೂ ದಾಯಾದಿ ನಾಗರೀಕತೆಗಳೇ. ವಿಶ್ವದ ಎಲ್ಲಾ ಜನರು ಸೋದರ ಸಂಬಂಧಿಗಳೇ. ಇಲ್ಲಿರುವುದು ಆಧುನಿಕ ಮಾನವನ ಪೂರ್ವಜರ ಕಥೆ. ಅದು ನಮಗೆ ಪರಕೀಯವಲ್ಲ. 4500 ವರ್ಷಗಳ ಹಿಂದೆ ಪ್ರಾಚೀನ ಐಗುಪ್ತದಲ್ಲಿ ಇದ್ದಂತದೇ ದುಷ್ಟ ಸಮಾಜ ವ್ಯವಸ್ಥೆಯಲ್ಲಿ, ಸ್ಥಿತಿಗತಿಗಳಲ್ಲಿ ಅದು ಯಾವ ದೇಶದಲ್ಲೇ ಇರಲಿ, ಯಾವ ಭೂಖಂಡದಲ್ಲೇ ಇರಲಿ ಜನ ಸಿಡಿದೇಳುವುದು ನಿಶ್ಚಯ. ಕ್ರೌರ್ಯ ಮರ್ಧನಗಳಿಗೆ ಇದಿರಾಗಿ ನ್ಯಾಯಕ್ಕೋಸ್ಕರ ಒಳ್ಳೆಯ ಬದುಕಿಗೋಸ್ಕರ ಜನ ನಡೆಸುವ ಹೋರಾಟಕ್ಕೆ ಸಾವಿಲ್ಲ.
‘ನವರಾತ್ರಿಯ ಕೊನೆದಿನ’ ನಾಟಕ ಬಗ್ಗೆ :
ರಂಗಪಯಣದ 18ನೇ ಪ್ರಯೋಗ. ಜನಪದ ಕಥೆಯೊಂದರಲ್ಲಿ ಒಂದು ಪ್ರತೀತಿ ಹುಟ್ಟಿತು. ಹೆಣ್ಣು ಮಕ್ಕಳು ಗೆಜ್ಜೆ ಕಟ್ಟಿ ಹಜ್ಜೆ ಕುಣಿದರೆ ಊರಲ್ಲಿ ಮಳೆ ಆಗುವುದಿಲ್ಲಾ ಎಂಬ ಮೂಢನಂಬಿಕೆಯೊಂದರ ಬೆನ್ನತ್ತಿ ಬರಡು ನೆಲದಲ್ಲಿ ಬದುಕು ಸಾಗಿಸುತ್ತಾ ಆಳುವವರ ಅಡಿಯಾಳಾಗಿ ಅವರ ಮಾತುಗಳನ್ನು ಅನುಸರಿಸುತ್ತ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕು ಸಾಗಿಸುತ್ತ ಹೊರಟ ಪ್ರದೇಶದ ಬದಲಾವಣೆಗೆ ಕಾಳಿ ಎಂಬ ಪಾತ್ರದ ಭವಿತವ್ಯವಾಗಿ ಬದಲಾವಣೆ ಹೊಂದುತ್ತಾರೆ. ಮತ್ತೆ ಆ ಪ್ರದೇಶಕ್ಕೆ ಮಳೆ ಕಾಣುತ್ತದೆ. ಹೆಣ್ಣು ಮಕ್ಕಳು ಹಾಡಿ ಕುಣಿಯುವುದು ಅವರ ಆ ಜನ್ಮಸಿದ್ದ ಹಕ್ಕು. ಆ ಹಕ್ಕು ಕಳೆದುಕೊಂಡವರ ಕೊರಗು, ಹಲವಾರು ಜನಪದ ವಾದ್ಯಗಳ ಮಾರ್ದನಿ, ಹೆಣ್ಣುಮಕ್ಕಳ ಹೋರಾಟ ಇವೆಲ್ಲದರ ಸಂಗಮ ‘ನವರಾತ್ರಿಯ ಕೊನೆ ದಿನ’.