ಬೆಂಗಳೂರು: ಒಂದು ಆದರ್ಶಕ್ಕೆ, ಒಂದು ವಿಷಯಕ್ಕೆ ನಮ್ಮನ್ನು ಸಮರ್ಪಿಸಿಕೊಂಡರೆ ಅವೇ ನಮ್ಮ ದಿನನಿತ್ಯದ ಹೆಚ್ಚಿನ ಭಾಗವಾಗಿರುತ್ತದೆ.ಅದರಲ್ಲೂ ಸಂಘಟನೆಗೆ ಸಮರ್ಪಿಸಿಕೊಂಡರಂತೂ ನಮ್ಮ ವೈಯಕ್ತಿಕ ಬೆಳವಣಿಯು ಅರ್ಧ ಕುಂಠಿತವಾದಂತೆ. ಕಲಾವಿದರಾಗಿ ನಾವು ಇಂತಹ ಹುಚ್ಚು ಪ್ರಯಾಸಗಳಲ್ಲಿ ಇಳಿದಿರುತ್ತೇವೆ. ಕಲೆಯನ್ನು ಪಂಚಮವೇದ ಅಂತಲೇ ಪರಿಗಣಿಸಿದ್ದಾರೆ. ಹಾಗಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾಡುವ ಕೊಡುಗೆ ಕೂಡ ಅತ್ಯಂತ ಶ್ರೇಷ್ಠವಾದದ್ದು ಅಂತ ತಿಳಿದು ನಮಗೆ ನಾವೇ ಸಮಾಧಾನಮಾಡಿಕೊಂಡು ಕೆಲಸ ಮಾಡಬೇಕು.
ಇಂತಹ ಸಾಹಸ ಯಾತ್ರೆಯಲ್ಲಿ ಸ್ನೇಹಿತರಾದ ಧನನ್ಜೋಯ್ ದಾಸ್ ಅವರು ಬ್ರಿಗೇಡ್ ರೋಡ್ ನಲ್ಲಿಯ ‘ಆರ್ಟ್ಮಾ ಆರ್ಟ್ ಗ್ಯಾಲರಿ’ಯಲ್ಲಿ ‘ಆರ್ಟ್ ಎಕ್ಸಟ್ರಾವಗಝ’ ಹೆಸರಿನಲ್ಲಿ ಸಮೂಹ ಕಲಾ ಪ್ರದರ್ಶನ ಆಯೋಜನೆ ಮಾಡಿದ್ದರು. ದಿನಾಂಕ 16-9-23ರ ಶನಿವಾರ ಸಂಜೆ ಹಿರಿಯ ಕಲಾವಿದರಾದ ಶ್ರೀ ಚಿ.ಸು.ಕೃಷ್ಣ ಸೆಟ್ಟಿ ಸಿ.ಎಸ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶುಭಾ ಸುರೇಶ್, ಕಲಾವಿದರಾದ ಶ್ರೀ ಗಣಪತಿ ಎಸ್.ಹೆಗಡೆಯವರಿಂದ ಉದ್ಘಾಟನೆಗೊಂಡಿತು. ಬೇರೆ ಬೇರೆ ಕ್ಷೇತ್ರದಿಂದ, ಬೇರೆ ಬೇರೆ ನೆಲೆಯಿಂದ ಬಂದ ಎಂಟು ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದರು.ಇದನ್ನ UXDD (ಯೂಸರ್ ಎಕ್ಸ್ ಪೀರಿಯನ್ಸ್ ಡಿಸೈನ್ ಡೆವಲಪ್ ಮೆಂಟ್) ಗುಂಪು ಪ್ರಾಯೋಜನೆ ಮಾಡಿತ್ತು.
ಕಲಾವಿದರು ಹೆಚ್ಚಾಗಿ ತಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ವಿಚಾರಗಳ ಬಗ್ಗೆ ಕುತೂಹಲ ತೋರುತ್ತಾ, ತಮ್ಮ ಅನುಭವವನ್ನು ಮತ್ತೊಬ್ಬರಿಗೆ ತಿಳಿಸುವಲ್ಲಿ ಸದಾ ಪ್ರಯೋಗಶೀಲರಾಗಿರುತ್ತಾರೆ. ಹುಡುಕಾಟದ ಮತ್ತು ಸಂಶೋದಕ ಮನಸ್ಸು ಅವರದಾಗಿರುತ್ತದೆ. ಹಾಗಾಗಿ ಕಲಾಕೃತಿಗಳನ್ನು ನೋಡುವ, ಕಲಾವಿದರ ಕುರಿತು ತಿಳಿದುಕೊಳ್ಳುವ ಪ್ರಜ್ಞಾಶೀಲ ಮನಸ್ಸು ನಮ್ಮದಾಗಬೇಕು ನಮ್ಮೆಲ್ಲ ಇತರ ಯೋಚನೆಗಳನ್ನು ಬದಿಗಿರಿಸಿ ಕಲಾಕೃತಿಗಳನ್ನು ನೋಡಬೇಕು. ಕಲೆಯ ಜೊತೆ ಸ್ವಲ್ಪ ಸಮಯವನ್ನು ಕಳೆಯಬೇಕು. ಅಲ್ಲಿಯ ಸಂವೇದನೆಗಳು ತಂದುಕೊಡುವ ಅನುಭವ ಮುಖ್ಯವಾಗುತ್ತದೆ . ಕಲೆಯನ್ನು ಮೆಚ್ಚುವುದು ಬಿಡುವುದು ಅದು ವ್ಯಕ್ತಿಗತ ತೀರ್ಮಾನ. ಕಲೆಯ ಬಗ್ಗೆ ಅಭಿರುಚಿ ಅಭಿಮಾನ ಬೆಳೆಸಿಕೊಂಡರೆ ಸಾಕು. ಅದೇ ಕಲೆಗೆ ನಾವು ಸಲ್ಲಿಸುವ ಅಮೂಲ್ಯ ಸೇವೆ
ಚಿತ್ರ ಬರಹ : ಗಣಪತಿ ಎಸ್ ಹೆಗಡೆ