Subscribe to Updates

    Get the latest creative news from FooBar about art, design and business.

    What's Hot

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವ್ಯಕ್ತಿ ಪರಿಚಯ | ಶತಾಯುಷಿ ಮೃದಂಗ ಮಾಂತ್ರಿಕ ಟಿ.ಕೆ. ಮೂರ್ತಿ  
    Music

    ವ್ಯಕ್ತಿ ಪರಿಚಯ | ಶತಾಯುಷಿ ಮೃದಂಗ ಮಾಂತ್ರಿಕ ಟಿ.ಕೆ. ಮೂರ್ತಿ  

    February 8, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಂದು ಮೈಸೂರು ಅರಮನೆಯಲ್ಲಿ ಮಹಾರಾಜಪುರ ವಿಶ್ವನಾಥ ಅಯ್ಯರ್ ಕಛೇರಿ. ಇದಕ್ಕೆ ಚೌಡಯ್ಯ ಅವರದ್ದು ಪಿಟೀಲು ಮತ್ತು ತಂಜಾವೂರು ವೈದ್ಯನಾಥ ಅಯ್ಯರ್ ಮೃದಂಗ ಸಾಥ್ ಇತ್ತು. ಈ ದಿಗ್ಗಜರೊಂದಿಗೆ ವೇದಿಕೆ ಏರಿದ ಹತ್ತರ ಹುಡುಗ ತನ್ನ ಪುಟಾಣಿ ಕೈಗಳಿಂದಲೇ ಮೃದಂಗ ನುಡಿಸಾಣಿಕೆ ಮೂಲಕ ಮೋಡಿ ಮಾಡಿದ. ಮಹಾರಾಜರು ಖುಷಿಯಾಗಿ ಒಂದು ಸಾವಿರ ರೂ. ಬಹುಮಾನ ನೀಡಿದರು. ಇದೇ ಹುಡುಗ ತಾನು ಓದುತ್ತಿದ್ದ ತಿರುವನಂತಪುರದ ಶಾಲೆಯಲ್ಲಿಯೂ ಚಿಥಿರಾ ತಿರುನಾಳ್ ಮಹಾರಾಜರೆದುರು ಮೃದಂಗ ನುಡಿಸಿ ರಾಜರಿಂದ ಚಿನ್ನದ ಪದಕ ಪಡೆದಿದ್ದ. ನುಡಿಸಾಣಿಕೆಯಿಂದಲೇ ಬೆರಗುಗೊಳಿಸುತ್ತಿದ್ದ ಆ ಹುಡುಗನ ಹೆಸರು ತನು ಕೃಷ್ಣ ಮೂರ್ತಿ (ಟಿ.ಕೆ. ಮೂರ್ತಿ). ಅವರೀಗ ಶತಾಯುಷಿ. ಕಳೆದ 90 ವರ್ಷದಿಂದ ನಿರಂತರವಾಗಿ ದೇಶ-ದೇಶದಾಚೆಗೂ ನುಡಿಸಿ ಜನಮಾನಸದಲ್ಲಿ ನೆಲೆಸಿರುವ ಈ ನಾದಸಂತರಿಗೆ ಬೆಂಗಳೂರಿನಲ್ಲಿ ಶಿಷ್ಯವೃಂದದಿಂದ ಅಭಿನಂದನಾ ಸಮಾರಂಭ ನಡೆಯಿತು.

    ಪ್ರಸ್ತುತ ಚೆನ್ನೈ ನಿವಾಸಿಯಾಗಿರುವ ಟಿ.ಕೆ. ಮೂರ್ತಿಯವರ ಹುಟ್ಟೂರು ತಿರುವನಂತಪುರ. ಅವರ ಕುಟುಂಬದವರೂ ರಾಜರ ಆಸ್ಥಾನಗಳಲ್ಲಿ ಕಲಾವಿದರಾಗಿದ್ದವರು. ಮಗನಿಗೆ ಮೂರು ತುಂಬಿದಾಗಲೇ ಅಮ್ಮ ಅನ್ನಪೂರ್ಣಿ ಮೂರು ರೂಪಾಯಿಗೆ ಮೃದಂಗ ಖರೀದಿಸಿದ್ದರಂತೆ. ಪುಟ್ಟ ಮಗು ನುಡಿಸುತ್ತಿದ್ದರೆ ಗಾಯಕರಾಗಿದ್ದ ತಂದೆ ತನು ಭಾಗವತರ್ ತಮ್ಮ ಕಛೇರಿಗೆ ಮಗನನ್ನೇ ವಾದಕನನ್ನಾಗಿಸಿದ್ದರು! ಪ್ರತಿಷ್ಠಿತ ವೇದಿಕೆಗಳಲ್ಲಿ ಮಿಂಚುತ್ತಿದ್ದ ಹುಡುಗನ ನೋಡಿದ ತಂಜಾವೂರು ವೈದ್ಯನಾಥ ಅಯ್ಯರ್ ಮೂರ್ತಿಯವರನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ತಂಜಾವೂರು ಮೃದಂಗ ವಾದನ ಶೈಲಿಗೆ ಹೆಸರಾಗಿದ್ದ ವೈದ್ಯನಾಥ ಅವರನ್ನು ಸಂಗೀತವಲಯದಲ್ಲಿ ‘ಕಿಂಗ್‌ಮೇಕರ್ ‘ ಎಂದೇ ಕರೆಯಲಾಗುತ್ತಿತ್ತು. ಮೂರ್ತಿಯವರಿಗೆ ಗುರುಕುಲ ಮಾದರಿಯಲ್ಲಿಯೇ ಸಂಗೀತ ಕಲಿಸಿ ಬೆಳೆಸಿದವರು ವೈದ್ಯನಾಥ ಅಯ್ಯರ್. ‘ಗುರುಗಳು ಕಲಿಸುವಾಗ ಶಿಸ್ತಿನ ಸಿಪಾಯಿ. ಒಮ್ಮೊಮ್ಮೆ ಮಧ್ಯರಾತ್ರಿ ಎಬ್ಬಿಸಿ ಕಲಿಸಲು ಶುರುಮಾಡುತ್ತಿದ್ದರು. ನಾನು ಮತ್ತು ಪಾಲ್ಘಾಟ್ ಮಣಿ ಅಯ್ಯರ್ ನಿದ್ದೆಯ ಮಂಪರಿನಲ್ಲೇ ಮುಖ ತೊಳೆದು ಬಂದು ಮೃದಂಗ ಹಿಡಿದು ಕುಳಿತುಕೊಳ್ಳುತ್ತಿದ್ದೇವು’ ಎಂದು ಮೂರ್ತಿಯವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಮೂರ್ತಿಯವರು ಸುಮಾರು 50 ವರ್ಷ ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ನುಡಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರಿಗೆ ಮೊದಲ ಬಾರಿ ನುಡಿಸಿದಾಗ ಮೂರ್ತಿ ಹದಿನೈದರ ಹೈದ. ಅಂದೊಮ್ಮೆ ವೈದ್ಯನಾಥ ಅವರ ಮನೆಗೆ ಸುಬ್ಬುಲಕ್ಷ್ಮಿ ಬಂದಿದ್ದರು. ವೈದ್ಯನಾಥರು ‘ಈತ ಮೃದಂಗ ಮೂರ್ತಿ’ ಎಂದು ಸುಬ್ಬುಲಕ್ಷ್ಮಿಗೆ ಪರಿಚಯಿಸಿದ್ದರು. ಆದರೆ ಅವರೆಗೆ ನೋಡಿರದ ಸುಬ್ಬುಲಕ್ಷ್ಮಿಯವರು ‘ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದರಂತೆ. ಆಗ ವೈದ್ಯನಾಥ ಅವರು ‘ಹೌದೇ, ಹಾಗಾದರೆ ಕಛೇರಿ ಮಾಡುವ’ ಎಂದು ಅಂದೇ ಸಂಜೆ ಮನೆಯಲ್ಲಿಯೇ ಕಛೇರಿ ಏರ್ಪಡಿಸಿದ್ದರು! ಸುಬ್ಬಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಡುವಾಗಲೂ ಸಾಥ್ ನೀಡಿದ್ದು ಇದೇ ಮೂರ್ತಿಯವರು. ಈ ಮೂಲಕ ವಿಶ್ವಸಂಸ್ಥೆ ಸಭೆಯಲ್ಲಿ ನುಡಿಸಿದ ಭಾರತದ ಮೊದಲ ಮೃದಂಗ ವಾದಕನೆಂಬ ಹೆಗ್ಗಳಿಕೆಯೂ ಇವರದ್ದಾಯಿತು.

    ಕರ್ನಾಟಕ ಸಂಗೀತ ಮಾತ್ರವಲ್ಲ ಹಿಂದೂಸ್ತಾನಿಯ ಮೇರು ತಬಲಾ ಕಲಾವಿದರಾಗಿದ್ದ ಉಸ್ತಾದ್ ಅಲ್ಲಾರಖಾ, ಝಾಕಿರ್ ಹುಸೇನ್ ಮೊದಲಾದವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಕರ್ನಾಟಕ, ಹಿಂದೂಸ್ತಾನಿ ಸಂಗೀತವನ್ನೂ ಹಾಡುತ್ತಿದ್ದರು. ಘಟಂ ನುಡಿಸುತ್ತಿದ್ದರು, ಕೊನ್ನಕೋಲ್‌ನಲ್ಲಿ ಪಾಂಡಿತ್ಯ ಪಡೆದಿದ್ದರು. ಈವರೆಗೆ 45 ಸಾವಿರಕ್ಕೂ ಹೆಚ್ಚು ಕಛೇರಿಗಳಲ್ಲಿ ನುಡಿಸಿದ್ದಾರೆ.

    ಹತ್ತು ವರ್ಷಗಳ ಹಿಂದೆ ಟಿ.ಕೆ. ಮೂರ್ತಿ ಅವರಿಗೆ 90 ತುಂಬಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಅಭಿನಂದನಾ ಸಮಾರಂಭವಿತ್ತು. ಆಗವರು ‘ಕರ್ನಾಟಕ ನನ್ನನ್ನು ಎಷ್ಟೊಂದು ಪ್ರೀತಿಸಿದೆ, ಗೌರವಿಸಿದೆ. ಮುಂದಿನ ಜನುಮವಿದ್ದರೆ ಕನ್ನಡನಾಡಿನಲ್ಲೇ ಹುಟ್ಟಬೇಕು’ ಎಂದಿದ್ದರು. ಮುತ್ತಯ್ಯ ಭಾಗವತ‌ರ್, ಪಿಟೀಲು ಚೌಡಯ್ಯ, ಮಹದೇವಪ್ಪ ಮೈಸೂರು ಮಂಜುನಾಥ್-ನಾಗರಾಜ್ ಜೋಡಿ ಸೇರಿದಂತೆ ಹಲವರಿಗೆ ಸಾಥ್ ನೀಡಿದವರು. ‘ಹಿಂದೆ ಒಬ್ಬರು ಟಿ.ಎಂ.ಪುಟ್ಟಸ್ವಾಮಯ್ಯ ಎಂಬುವವರಿದ್ದರು. ಕರ್ನಾಟಕದಲ್ಲಿ ಮೂರ್ತಿಯವರ ಕಛೇರಿಯಿದ್ದರೆ ಪುಟ್ಟಸ್ವಾಮಯ್ಯ ಬರುತ್ತಿದ್ದರು. ಮೂರ್ತಿಯವರು ಅವರಿಗೆ ನಮಸ್ಕರಿಸಿಯೇ ಕಛೇರಿಗೆ ಕುಳಿತುಕೊಳ್ಳುತ್ತಿದ್ದರು. ಕರ್ನಾಟಕದೊಂದಿಗಿನ ಅವರ ನಂಟು ಬಹಳ ಹಳೆಯದು’ ಎನ್ನುತ್ತಾರೆ ವಯಲಿನ್ ವಾದಕ ಮೈಸೂರು ಮಂಜುನಾಥ್.

    ಇಪ್ಪತ್ತೈದು ವರ್ಷಗಳಿಂದ ಮೂರ್ತಿಯವರು ನನ್ನ ಗುರುಗಳು. ಸಮಯದ ಪರಿವೆ ಇಲ್ಲದೆ ನಿರರ್ಗಳವಾಗಿ ತಾಸುಗಟ್ಟಲೆ ಪಾಠ ಮಾಡುತ್ತಾರೆ. ಇಂಥ ಗುರುಗಳನ್ನು ಪಡೆದ ನಾವು ಪುಣ್ಯವಂತರು. ಇವತ್ತಿಗೂ ಅವರ ಕೈಯಲ್ಲಿ ನಾದ, ಅದರ ಸ್ಪಷ್ಟತೆ ಮತ್ತು ನುಡಿಸಾಣಿಕೆಯ ವೇಗ ಎಲ್ಲವೂ ಅತ್ಯುನ್ನತವಾದ ಶ್ರೇಷ್ಠಮಟ್ಟದಲ್ಲಿವೆ ಎನ್ನುತ್ತಾರೆ ಮೃದಂಗ ವಾದಕರಾದ ಬಿ.ಸಿ. ಮಂಜುನಾಥ್.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ವಾರ್ಷಿಕೋತ್ಸವ
    Next Article ‘ನಾಟ್ಯಾರಾಧನಾ ತ್ರಿಂಶೋತ್ಸವ – 1994-2024’ | 10 ಫೆಬ್ರವರಿ
    roovari

    Add Comment Cancel Reply


    Related Posts

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.