ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ತಾರಾನಾಥ್ ಗಟ್ಟಿಯವರ ನೇತೃತ್ವದಲ್ಲಿ ಅಕಾಡೆಮಿಯ ಸದಸ್ಯರ ಸಹಕಾರದೊಂದಿಗೆ ತುಳು ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ . ಕಾಲೇಜು ವಿದ್ಯಾರ್ಥಿಗಳಿಗೆ ತುಳು ನಾಟಕ ಕಾರ್ಯಗಾರ ನಡೆಸಿ, ಅಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳಿಂದ ಆ ನಾಟಕವನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನ ಮಾಡುವ ಕಾರ್ಯಕ್ರವೂ ಇದರಲ್ಲಿ ಒಂದು.
ಸರಕಾರಿ ಪದವಿ ಪೂರ್ವ ಹೆಣ್ಮಕ್ಕಳ ಕಾಲೇಜು ಬಲ್ಮಠದಲ್ಲಿ ಅಬ್ಬರವಿಲ್ಲದ, ಸರಳವಾದ, ಸುಂದರ ನಾಟಕವೊಂದು ಪ್ರದರ್ಶನಗೊಂಡಿತು. ಅಮೃತ ಕಾಲೇಜು ಪಡೀಲ್, ಮಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಶ್ರೀ ಜಗನ್ ಪವಾರ್ ಬೇಕಲ್ ಇವರ ಅದ್ಭುತ ನಿರ್ದೇಶನದಲ್ಲಿ ರಂಗದ ಮೇಲೆ ಪ್ರದರ್ಶಿಸಿದ ನಾಟಕ “ಪಗಪು”. ಇದು ಪ್ರಥಮ ಪ್ರದರ್ಶನ. ಇನ್ನು ಬೇರೆ ಬೇರೆ ವೇದಿಕೆಗಳಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಸಂಸ್ಕೃತಿಯನ್ನು ಹಾಗೂ ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿಸಲು ಹಮ್ಮಿಕೊಂಡ ಕಾರ್ಯಕ್ರಮ ಇದು.
“ಪಗಪು” ನಾಟಕದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇದು ತುಳುನಾಡಿನ ಸೌಹಾರ್ದ ಪರಂಪರೆಯನ್ನು ಬಿಂಬಿಸುವ ತುಳು ನಾಟಕ. ಪ್ರತಿಯೊಬ್ಬನಿಗೂ ಈ ನೆಲದಲ್ಲಿ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಇದೆ. ಇನ್ನೊಬ್ಬರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಆದರೆ ತನ್ನಂತೆಯೇ ಇನ್ನೊಬ್ಬನು ಬದುಕಬೇಕೆಂಬ ಮಾನವೀಯ ಮನೋಭಾವ ಇರುವವನೇ ಒಂದು ವರ್ಗದ ಜನರ ಕುತಂತ್ರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವುದು, ಮುಂದೆ ಅದೇ ರೀತಿ ಉದಾರ ಭಾವವನ್ನು ಹೊಂದಿರುವ ಸಮಾಜಮುಖಿ ಕೆಲಸ ಮಾಡುವ ಅವನ ಕುಡಿಯೊಂದು ಬಲಿಯಾಗುವ ಮೂಲಕ ಮಾನವೀಯತೆಗೆ ಬೆಲೆ ಇಲ್ಲದಾಗುತ್ತದೆ. ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿದೆ. ಈ ಅನಿವಾರ್ಯತೆಯನ್ನೇ ನಾಟಕದ ವಸ್ತುವನ್ನಾಗಿರಿಸಿಕೊಂಡು ಪ್ರಸ್ತುತಪಡಿಸಿದ ನಾಟಕ ‘ಪಗಪು’. ಈ ನಾಟಕವು ಜಾತಿ ಪದ್ಧತಿಯಂತಹ ಕೀಳು ಆಲೋಚನಾ ಕ್ರಮವನ್ನು ಮತ್ತು ಜನಸಾಮಾನ್ಯರನ್ನು ರಾಜಕೀಯ ದಾಳಗಳನ್ನಾಗಿ ಬಳಸುವ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ.
ಯುವ ಜನಾಂಗಗಳ ಮನಸ್ಥಿತಿ ಬದಲಾಗಬೇಕು.
ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುವ ವಿಷಯಗಳ ಜಾಗಕ್ಕೆ ಉತ್ತಮ ಪರಿಣಾಮ ಬೀರುವ ವಿಚಾರಗಳನ್ನು ಬದಲಿಸಬೇಕು ಎಂಬ ಸಂದೇಶವನ್ನು ಯುವ ಜನಾಂಗಕ್ಕೆ ‘ಪಗಪು’ ನಾಟಕವು ನೀಡುತ್ತದೆ. ಇದು ಕನಿಷ್ಠ ಸಮಯದಲ್ಲಿ ಒಂದು ಮಹತ್ತರ ಸಂದೇಶವನ್ನು ಯುವ ಸಮುದಾಯಕ್ಕೆ ನೀಡುವ ನಾಟಕವಾಗಿದೆ.
-ಅಕ್ಷರೀ