ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು?|
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?||
ನಿತ್ಯಸತ್ತ್ವವೇ ಭಿತ್ತಿ, ಜೀವಿತ ಕ್ಷಣಚಿತ್ರ|
ತತ್ತ್ವವೀ ಸಂಬಂಧ – ಮಂಕುತಿಮ್ಮ||
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?||
ನಿತ್ಯಸತ್ತ್ವವೇ ಭಿತ್ತಿ, ಜೀವಿತ ಕ್ಷಣಚಿತ್ರ|
ತತ್ತ್ವವೀ ಸಂಬಂಧ – ಮಂಕುತಿಮ್ಮ||
ಚಿತ್ರವೊಂದಕ್ಕೆ ಗೋಡೆ ಬೇಕೇ ಬೇಕು. ಚಿತ್ರವಿಲ್ಲದ ಗೋಡೆಯು ಕೂಡ ಸೊಗಸಾಗಿ ಕಾಣೋದಿಲ್ಲ. ಒಂದಕ್ಕೊಂದು ಸಂಬಂಧ.
ಹೊರಗಿನ ಜಗತ್ತನ್ನು ವಿವಿಧ ರೀತಿಯಿಂದ ನೋಡುವವ ಕಲಾವಿದ. ತನ್ನ ಅನುಭವಗಳನ್ನು ವಿವಿಧ ರೀತಿಯಲ್ಲಿ ಸಂಯೋಜನೆಗೊಳಿಸಿ ತಿಳಿಸುವ ಪ್ರಯತ್ನ ಕಲಾವಿದರದು. ನಾಲ್ಕು ಗೋಡೆಗಳ ಮಧ್ಯೆ ರಚಿಸಿದ ಕಲಾವಿದನ ಕಲಾಕೃತಿಗಳನ್ನು ಸಮುದಾಯಕ್ಕೆ ತಲುಪಿಸುವಲ್ಲಿ, ಕಲೆಗೊಂದು ಮೌಲ್ಯವನ್ನು ತಂದುಕೊಡುವಲ್ಲಿ ಕಲಾ ಗ್ಯಾಲರಿಗಳ ಪಾತ್ರ ದೊಡ್ಡದು. ಕಲಾವಿದನ ಕಲಾಕೃತಿ ನೋಡುಗ ಇಲ್ಲದೆ ಸಾಫಲ್ಯವಾಗುವುದಿಲ್ಲ. ಕಲಾವಿದ ಸೃಷ್ಟಿ ಮಾಡಿದರೆ ಅದರಿಂದ ಪ್ರಭಾವಿತರಾಗುವವರು ನೋಡುಗರು.ಇವರಿಬ್ಬರ ಮಧ್ಯೆ ಸಂಪರ್ಕಸೇತುವಾಗಿ ಕೆಲಸ ಮಾಡುವುದು ಕಲಾ ಗ್ಯಾಲರಿ.
ಇಂಥಹ ಒಂದು ಕಲಾ ಗ್ಯಾಲರಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ‘ಆರ್ಟ್ಮಾ ಆರ್ಟ್ ಗ್ಯಾಲರಿ’ ಅನ್ನುವ ಹೆಸರಿನಲ್ಲಿ ತಲೆಯೆತ್ತಿದೆ. ಜನನಿಬಿಡ ಸ್ಥಳವಾದರೂ ಗ್ಯಾಲರಿ ಒಳ ಆವರಣ ಪ್ರಶಾಂತವಾಗಿ ಹಳ್ಳಿ ಮನೆಯ ಮಾಳಿಗೆಯನ್ನು ನೆನಪಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಇರುವ ಶ್ರೀ ಆತ್ಮರಾಮ್ ಎನ್ ಗಂಗಾರಾಮ್ ಅವರು ಇದರ ಸಂಸ್ಥಾಪಕರು. ಅನೇಕ ಸೃಜನಶೀಲ ಮನಸ್ಸುಗಳಿಂದ ಸೃಷ್ಟಿಯಾದ ಕಲಾಕೃತಿಗಳಿಗೆ ಇದೊಂದು ವೇದಿಕೆಯಾಗಲಿದೆ. ಸಾಂಸ್ಕೃತಿಕ ನಗರವಾಗಿಸಲು ತನ್ನದೊಂದು ಚಿಕ್ಕ ಕೊಡುಗೆ ಎನ್ನುವುದು ಇವರ ಮನದಾಳ. ಹನ್ನೆರಡು ಜನ ಕಲಾವಿದರ ‘ಒರಟೋರಿಯೋ’(ORATORIO) ಕಲಾಪ್ರದರ್ಶನ ದಿನಾಂಕ 03-08-2023ರಂದು ಶ್ರೀ ಚಿರಂಜೀವ್ ಸಿಂಗ್ ಮತ್ತು ಶ್ರೀ ಎಸ್.ಜಿ.ವಾಸುದೇವ್ ಅವರಿಂದ ಲೋಕಾರ್ಪಣೆಗೊಂಡಿತು. ಈ ಗ್ಯಾಲರಿಯ ಮೇಲ್ವಿಚಾರಣೆಯನ್ನು ಕಲಾವಿದ ಶ್ರೀ ಧನಂಜಯ್ ದಾಸ್ ವಹಿಸಿಕೊಂಡಿದ್ದಾರೆ. ಈ ಕಲಾಪ್ರದರ್ಶನವು ದಿನಾಂಕ 22-08-2023ರ ತನಕ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 7ರ ತನಕ ತೆರೆದಿರುತ್ತದೆ. ಜನರ ಪ್ರೋತ್ಸಾಹ ಬೆಂಬಲದಿಂದ ಮಾತ್ರ ಕಲೆಯ ಬೆಳವಣಿಗೆ ಸಾಧ್ಯ. ನೀವು ಹೋಗಿ ನೋಡಿ ಬನ್ನಿ.
- ಗಣಪತಿ ಎಸ್. ಹೆಗ್ಡೆ