ಬೆಂಗಳೂರು : ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023-2024ರ ಸಾಲಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 23-06-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ರಾಜ್ಯದ ರಾಜ್ಯಪಾಲರು ವಿತರಣೆ ಮಾಡಲಿದ್ದಾರೆ.
ಯೋಗೇಶ್ ಕಾಂಚನ್ ಬೈಕಂಪಾಡಿಯ ಮೀನಕಳಿಯದ ನಿವಾಸಿಯಾದ ಇವರೋರ್ವ ಹವ್ಯಾಸಿ ಯಕ್ಷಗಾನ ಕಲಾವಿದ. ತುಳುವಿನಲ್ಲಿ ‘ಮಣ್ಣ್ ದ ಮಗಳ್’, ‘ಸತ್ಯೋದ ಬಾಲೆಲ್’ ಮತ್ತು ಕೈಯಲ್ತ ಗುಳಿಗೆ’ ಹಾಗೂ ಕನ್ನಡದಲ್ಲಿ ‘ನಾಗ ಕನ್ನಿಕೆ’ ಎಂಬ ಯಕ್ಷಗಾನ ಪ್ರಸಂಗಗಳ ಕೃರ್ತ ಇವರಾಗಿದ್ದಾರೆ. ‘ಕಂಚಿಲ್’ (ತುಳು) ‘ವಾಸ್ತವತೆ’ ಮತ್ತು ‘ನಗ್ನ ಸತ್ಯ’ (ಕನ್ನಡ) ಇವು ಇವರ ಕವನ ಸಂಕಲನಗಳು. ‘ಚಿತ್ರಾಪುರೋತ ಸಿರಿದೇವಿ ಉಳ್ಳಾಲ್ದಿ’ (ತುಳು ನಾಟಕ), ‘ಪನ್ನಂಬರೋ’ (ತುಳು ಕಥಾ ಸಂಕಲನ) ಇವೆಲ್ಲಾ ಪ್ರಕಟಿತ ಕೃತಿಗಳು. ಅಪ್ರಕಟಿತ ಅನೇಕ ತುಳು, ಕನ್ನಡ ಕಾದಂಬರಿಗಳು, ಯಕ್ಷಗಾನ ಪ್ರಸಂಗಗಳಿವೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ಸಂದ ಗೌರವ. ಅನೇಕ ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿದ ಇವರ ಬರಹಗಳು ಆಕಾಶವಾಣಿಯಲ್ಲಿ ಬಿತ್ತರವಾಗಿದೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ತುಳು, ಕನ್ನಡಕ್ಕೆ ಸಂಬಂಧಪಟ್ಟ ಕಥೆ, ಕವನ, ಲೇಖನಗಳು ಮತ್ತು ಅಂಕಣ ಬರಹಗಳು ಪ್ರಕಟವಾಗಿವೆ.