Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು, ಆಸಕ್ತ ಲೇಖಕರು/ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮ್ಮೇಳನವು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ವಿವರಗಳಿಗೆ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಕುಂಬ್ಳೆ ಸಂಪರ್ಕ 8310300875 ಇವರನ್ನು 22 ಜನವರಿ 2025ರ ಮುಂಚಿತವಾಗಿ ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ಮಂಗಳೂರು : ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಚಾಡಿಯ ಶ್ರೀ ರಾಮ ಯಕ್ಷ ವೃಂದದ ಕಲಾವಿದರಿಂದ ‘ವೀರ ವೀರೇಶ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 18 ಜನವರಿ 2025 ರಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಅಶೋಕ್ ಬಿ, ಶಿವಪ್ರಸಾದ ಪ್ರಭು, ಶ್ರೀ ವತ್ಸರಾವ್, ರವಿ ಅಲೆವೂರಾಯ, ವಿಜಯ ಲಕ್ಷ್ಮೀ ಎಲ್. ಎನ್. ಹಾಗೂ ಗಂಗಾಧರ ಕಿರೋಡಿಯನ್ ಸಹಕರಿಸಿದರು. ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ್ ಉಪಸ್ಥಿತರಿದ್ದರು.
ಬೆಂಗಳೂರು : ನಾಡಿನ ಪ್ರಸಿದ್ಧ ಚಿತ್ರಕಲಾವಿದರಾದ ಕೆ.ಜಿ. ಲಿಂಗದೇವರು ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ದಿನಾಂಕ 21 ಜನವರಿ 2025ರಿಂದ 30 ಜನವರಿ 2025ರವರೆಗೆ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ‘ಶೋಧ’ ಶೀರ್ಷಿಕೆಯಡಿ ನಡೆಯುತ್ತಿರುವ ಈ ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 63 ಕಲಾಕೃತಿಗಳಿರಲಿವೆ. ಕೆ.ಜಿ. ಲಿಂಗದೇವರು ಕ್ಯಾನ್ಸಾಸ್‌ನಲ್ಲಿ ಮೂಡಿದ ಹತ್ತು ಹಲವು ರೇಖೆಗಳು ಅಸಂಗತ ಆಕೃತಿಗಳಾಗಿ ಬಣ್ಣ ತುಂಬಿಕೊಂಡು ವಿಶಿಷ್ಟ ಚಿತ್ರಗಳಾಗಿ ಹೊರಹೊಮ್ಮಿವೆ. ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ರೀತಿಯ ಶೋಧದಲ್ಲಿ ತೊಡಗಿರುವುದು ಸಹಜ ಮತ್ತು ಅದು ನಮಗೆ ಅನಿವಾರ್ಯ. ಈ ಸರಣಿಯಲ್ಲಿ ಬರುವ ಚಿತ್ರಗಳಲ್ಲಿ ಹುಟ್ಟಿನಿಂದ ಶುರುವಾಗುವ ಹುಡುಕಾಟವಿದೆ. ಬಳಿಕ ಅಧ್ಯಾತ್ಮಿಕ ದೀಪದಿಂದ ಮಾಡುವ ತನ್ನೊಳಗಿನ ಶೋಧವೂ ಇದೆ. ಲಿಂಗದೇವರು ಇವರ ಈ ಸರಣಿಯಲ್ಲಿ ಕಾಣಿಸುವ ಎರಡು ಆಕೃತಿಗಳಲ್ಲಿ ಒಂದು ಪಂಚಮಹಾಭೂತಗಳಿಂದಾದ ಅರಿಷಡ್ವರ್ಗಗಳ ತೊಗಲು ಹೊತ್ತ ದೇಹವಾದರೆ ಇನ್ನೊಂದು ಚಿತ್ರವು ಅವೆಲ್ಲವನ್ನು ಮೀರಿ…
ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಮೌಲ್ಯಾಧಾರಿತ ಸಮಾಜವನ್ನು ಪೋಷಿಸುವ ದೃಢವಾದ ಬದ್ಧತೆಯಿಂದ ಹುಟ್ಟಿಕೊಂಡ ಸಂಸ್ಥೆ. 1989ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯು 1991ರಲ್ಲಿ ದತ್ತಿಸಂಸ್ಥೆಯಾಗಿ ನೋಂದಾಯಿತವಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಜಾನಪದಕ್ಕೆ ಸಕ್ರಿಯ ಬೆಂಬಲ ನೀಡುವ ಹಾಗೂ ರಾಜ್ಯದ ಜನರಲ್ಲಿ ಸಾಮರಸ್ಯ ಮತ್ತು ಸರ್ವಾಂಗೀಣ ಗುಣಮಟ್ಟವನ್ನು ಉತ್ತೇಜಿಸುವ ಸೇವೆಗೆ ಬದ್ಧವಾಗಿದೆ. ಇದೀಗ ಬಹುನಿರೀಕ್ಷಿತ 2025ರ ‘ಸಂದೇಶ ಪ್ರಶಸ್ತಿ’ಗಳನ್ನು ಕೊಡಮಾಡುವ ಕೈಂಕರ್ಯದಲ್ಲಿ ತೊಡಗಿದೆ. ಸಂಗೀತ, ನೃತ್ಯ, ಕಲೆ, ಚಿತ್ರಕಲೆ, ಪತ್ರಿಕೋದ್ಯಮ, ಮಾಧ್ಯಮ ಶಿಕ್ಷಣ, ಸಾರ್ವಜನಿಕ ಭಾಷಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾನವು ಜೀವನವನ್ನು ರೂಪಿಸುವ ಕಾಯಕವನ್ನು ನಡೆಸುತ್ತ ಬಂದಿದೆ. ಹೆಚ್ಚುವರಿಯಾಗಿ, ನಾಟಕ, ಕವನ, ಮಾಧ್ಯಮ ಮತ್ತು ಜೀವನದ ವಿವಿಧ ಹಂತದ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಕ್ರಿಯಾತ್ಮಕ ವೇದಿಕೆಗಳನ್ನು ರಚಿಸಿದೆ. ಇತ್ತೀಚೆಗೆ, ಸಂದೇಶವು ಕರ್ನಾಟಕ ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲಾ ವಿಶ್ವವಿದ್ಯಾಲಯದೊಂದಿಗೆ ಮಾನ್ಯತಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ…
ಮಮತಾ ಜಿ. ಸಾಗರ್ ಇವರು ಕವಯಿತ್ರಿ, ಅನುವಾದಕಿ ಮತ್ತು ಸುಂದರವಾದ ನಾಟಕಗಳನ್ನು ರಚಿಸುವವರು. 19 ಜನವರಿ 1966ರಲ್ಲಿ ಜನಿಸಿದ ಇವರ ತಂದೆ ಎನ್. ಗಿರಿರಾಜ್, ತಾಯಿ ಎಸ್. ಶೇಖರಿ ಬಾಯಿ. ಸ್ತ್ರೀವಾದ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸುತ್ತಲಿನ ಸಮಸ್ಯೆಗಳೇ ಇವರ ಬರಹಗಳ ವಸ್ತು. ಕವಿತೆ ಗದ್ಯ ಮತ್ತು ವಿಮರ್ಶಾತ್ಮಕ ಬರಹಗಳನ್ನು ಕನ್ನಡ ಮತ್ತು ಇಂಗ್ಲೀಷಿಗೆ ಅನುವಾದಿಸುವ ಸೃಜನಶೀಲ ಅನುವಾದಕಿ. ಇವರ ಕವನಗಳು ಅನೇಕ ಭಾಷೆಗೆ ಅನುವಾದಗೊಂಡಿದ್ದು, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಮತ್ತು ಕೇರಳ ವಿಶ್ವವಿದ್ಯಾಲಯಗಳು ಪಠ್ಯಪುಸ್ತಕಗಳಿಗೆ ಸೇರಿಸಿಕೊಂಡಿರುವುದು ಇವರ ಪ್ರೌಢ ಸಾಹಿತ್ಯ ರಚನೆಗೆ ಸಾಕ್ಷಿಯಾಗಿದೆ. ಇವರ ಕೆಲವು ಕವನಗಳಿಗೆ ವಾಸು ದೀಕ್ಷಿತ್ ಅವರು ಸಂಗೀತವನ್ನೂ ಅಳವಡಿಸಿದ್ದಾರೆ. ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದು, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಮಣಿಪಾಲದ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಶೈಕ್ಷಣಿಕ ಮತ್ತು ಸೃಜನಶೀಲ ಬರವಣಿಗೆಯ ಪ್ರಾಧ್ಯಾಪಕರಾಗಿದ್ದಾರೆ. ದಿ ಹಿಂದು, ಬಿಸಿನೆಸ್ ಲೈನ್ ಮತ್ತು ಇಂಡಿಯನ್ ಎಕ್ಸ್…
ಕನ್ನಡದ ಹೆಸರಾಂತ ಹಾಸ್ಯ ಬರಹಗಾರರು ಮತ್ತು ಪ್ರಸಿದ್ಧ ನಾಟಕ ತರಬೇತುದಾರರು ದಾಶರಥಿ ದೀಕ್ಷಿತ್. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾದ ದೀಕ್ಷಿತರು ಬಾಲಾಜಿ ದೀಕ್ಷಿತ್ ಹಾಗೂ ಗಂಗೂಬಾಯಿ ದಂಪತಿಗೆ 18 ಜನವರಿ 20 21ರಲ್ಲಿ ಜನಿಸಿದ ಸುಪುತ್ರ. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮಾಡಿ, ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ಮುಗಿಸಿ, ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸದೆ, ಕರ್ನಾಟಕ ಸರ್ಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ, ಮತ್ತೆ ಬೆಂಗಳೂರಿನ ವಿಮಾನ ಕಾರ್ಖಾನೆಯೊಂದರಲ್ಲಿ ದುಡಿಯಲಾರಂಭಿಸಿದರು. ಆಗಲೇ ಬರವಣಿಗೆಯನ್ನು ಆರಂಭಿಸಿದ ಇವರು ತಮ್ಮ ಬರಹದ ಒಂದು ಕಥೆಯನ್ನು ‘ಪ್ರಜಾಮತ’ ದಿನಪತ್ರಿಕೆಗೆ ನೀಡಿದ್ದು, ಅದು ಪ್ರಕಟಗೊಂಡಿತು. ಗಂಭೀರ ಬರಹದ ಬದಲಿಗೆ ಲಘು ಬರಹದ ಕಡೆಗೆ ಗಮನ ಕೊಡುವಂತೆ ಇವರ ಬರಹಗಳನ್ನು ಓದಿದ ಪ್ರಸಿದ್ಧ ಲೇಖಕ ತ. ರಾ. ಸುಬ್ಬರಾವ್ ಸೂಚಿಸಿದರು. ಅವರ ಸಲಹೆಯನ್ನು ಸ್ವೀಕರಿಸಿದ ದಾಶರಥಿಯವರು ಹಾಸ್ಯ ಬರಹಗಳ ಕಡೆ ಗಮನಹರಿಸಿದರು. ತಂದೆ ಬಾಲಾಜಿ ದೀಕ್ಷಿತರು ಶಿರಸ್ತೇದಾರರಾಗಿದ್ದರಿಂದ…
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್‌ನ ಸಹಯೋಗದಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ. ಎಂ. ವೀರಪ್ಪ ಮೊಯಿಲಿಯವರ ‘ವಿಶ್ವಸಂಸ್ಕೃತಿ ಮಹಾಯಾನ’ – ಸಂಪುಟ-2, ಗದ್ಯ ಮಹಾಕಾವ್ಯ ಲೋಕಾರ್ಪಣೆ ಸಮಾರಂಭವು ದಿನಾಂಕ 12 ಜನವರಿ 2025ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಜರುಗಿತು. ಮಹಾಕಾವ್ಯವನ್ನು ಲೋಕಾರ್ಪಣೆಗೊಳಿಸಿದ ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೊ. ನಾಗಣ್ಣ ಇವರು ಮಾತನಾಡಿ “ಮೊಯಿಲಿಯವರ ಸಂಕಲ್ಪಕ್ಕೂ ಅದರ ಸಾಕ್ಷಾತ್ಕರಕ್ಕೂ ಅಂತರವೇ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಬರ್ಹಿಲೋಕದಲ್ಲಿ ಜನಕಲ್ಯಾಣದಲ್ಲಿ ತೊಡಗಿರುವಂತೆ, ಅಂತರಂಗದಲ್ಲಿ ಹಲವಾರು ವಿಚಾರಗಳಿಗೆ ಅಕ್ಷರ ರೂಪ ಕೊಡುವಲ್ಲಿ ಧ್ಯಾನಸ್ಥರಾಗಿರುತ್ತಾರೆ. ಇವರು ಅಪರೂಪದ ಚೈತನ್ಯವೇ ಸರಿ. ವೀರಪ್ಪ ಮೊಯಿಲಿಯವರ ‘ವಿಶ್ವಸಂಸ್ಕೃತಿ ಮಹಾಯಾನ’ದ ಹೋಲಿಕೆ ಏನಾದರೂ ಇದ್ದರೆ, ಅಮೇರಿಕಾದ ಇತಿಹಾಸತಜ್ಞ ವಿಲ್ ಡ್ಯೂರಾಂಟ್ ಬರೆದಿರುವ ‘ನಾಗರೀಕತೆಯ ಕಥೆ’ ಎನ್ನುವ 11…
ಪಡುಬಿದ್ರೆ : ಕಟೀಲು ಮೇಳದ ಭಾಗವತ ಅಂಡಾಲ ದೇವಿ ಪ್ರಸಾದ ಆಳ್ವ ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಇವರಿಗೆ ಈ ವರ್ಷದ ‘ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 14 ಜನವರಿ 2025ರಂದು ನಡೆದ ಪಡುಬಿದ್ರೆ ಕಲ್ಲಟೆಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳು ಆಯೋಜಿಸಿದ ಶ್ರೀ ಕಟೀಲು ಮೇಳದ 28ನೇ ವರ್ಷದ ಸೇವೆ ಬಯಲಾಟದ ವೇದಿಕೆಯಲ್ಲಿ ವಿತರಿಸಲಾಯಿತು. ಸಮಾರಂಭದಲ್ಲಿ ಪರಾಧೀನವಾಗಿದ್ದ ಕಟೀಲು ಮೂಲ ಕುದುರನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠ್ಠಲ ಶೆಟ್ಟಿ ಪರಿವಾರದ ಸೇವೆಯನ್ನು ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಸ್ಮರಿಸಿದರು. ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ “ಅಂಡಾಲ ದೇವೀ ಪ್ರಸಾದರು ಕಳೆದು ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು. ತೆಂಕು ಹಾಗೂ ಬಡಗು ತಿಟ್ಟಿನ ಟೆಂಟ್…
ಧಾರವಾಡ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ.) ಇದರ ವತಿಯಿಂದ ‘ಹೆಸರಾಯಿತು ಕರ್ನಾಟಕ’ ಸುವರ್ಣ ಮಹೋತ್ಸವ ಪ್ರಯುಕ್ತ ಕವಿಗೋಷ್ಠಿ, ಕಾವ್ಯ ಗಾಯನ, ನೃತ್ಯ ನಮನ, ಸುವರ್ಣ ಸಿರಿ ಸನ್ಮಾನ ಸಮಾರಂಭವನ್ನು ದಿನಾಂಕ 19 ಜನವರಿ 2025 ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ಮನ್ಸೂರು ಶ್ರೀ ರೇವಣಸಿದ್ಧೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ರೇವಣಸಿದ್ಧೇಶ್ವರ ಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಇವರ ದಿವ್ಯ ಸಾನಿಧ್ಯದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಇದರ ಅಧ್ಯಕ್ಷರಾದ ವೇ. ಪಂ. ಪಕ್ಕೀರೇಶ್ವರ ಶಾಸ್ತ್ರಿಗಳು ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯ ಅಗಡಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿರುವರು. ‘ಹೆಸರಾಯಿತು ಕರ್ನಾಟಕ’ ಎಂಬ ವಿಷಯದ ಬಗ್ಗೆ ನಿವೃತ್ತ ಉಪನ್ಯಾಸಕರಾದ ಶ್ರೀ ಸುರೇಶ ಕಡೆಮನಿ ಇವರು ಉಪನ್ಯಾಸ ನೀಡಲಿದ್ದಾರೆ. ಧಾರವಾಡದ ಆಕಾಶವಾಣಿ ದೂರದರ್ಶನ ಕಲಾವಿದರಾದ ಶ್ರೀಮತಿ ಡಾ. ಸುಮಾ ಬಸವರಾಜ ಹಡಪದ ಮತ್ತು ಶ್ರೀಗುರು ಕುಮಾರೇಶ್ವರ ವಿದ್ಯಾ ಸೇವಾ ಸಂಸ್ಥೆಯ ಸಂಗೀತ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ “ಸಿನ್-1999 ಶ್ವೇತಯಾನ -98” ಕಾರ್ಯಕ್ರಮದ ಅಂಗವಾಗ “ಅರ್ಥಾಂಕುರ-12 ” ಕಾರ್ಯಕ್ರಮವು ದಿನಾಂಕ 12 ಜನವರಿ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನದ ಪ್ರಸಿದ್ದ ಅರ್ಥದಾರಿ ಜಬ್ಬಾರ್ ಸಮೋ ಮಾತನಾಡಿ “ಅತ್ಯಂತ ತ್ವರಿತ ಗತಿಯಿಂದ ಕಲಾ ವಲಯದಲ್ಲಿ ಪ್ರಜ್ವಲಿಸಲು ಹಿರಿಯ ಕಲಾವಿದರ ಸಾಂಗತ್ಯದ ಜೊತೆಗೆ ಅರ್ಥಗಾರಿಕೆಯ ಒಡನಾಟ ಹೆಚ್ಚು ಪೂರಕ. ಹಿರಿಯ ಕಲಾವಿದರಿಂದ ಕಿರಿಯರೂ, ಕಿರಿಯ ಕಲಾವಿದರಿಂದ ಹಿರಿಯರೂ ಕಲಿಯುವಂತದ್ದು ಬಹಳ ಇರುತ್ತದೆ. ಯಾರೂ ಕಡಿಮೆಯಲ್ಲ ಯಾರೂ ಹೆಚ್ಚಲ್ಲ. ಹಿರಿಯ ಕಲಾವಿದರು ಕಿರಿಯರನ್ನು ತೆಕ್ಕೈಸಿಕೊಂಡು ನಡೆಸಿದರೆ ಭವಿಷ್ಯ ರೂಪಿಸುವ ಕಿರಿಯ ಕಲಾವಿದರು ಮುಂದಿನ ವೇದಿಕೆಗೆ ಅರ್ಥದಾರಿಗಳಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ” ಎಂದರು. ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್, ಕಾರ್ಯಕ್ರಮದ ನೇತಾರ ಡಾ. ಜಗದೀಶ್ ಶೆಟ್ಟಿ, ಸತೀಶ್ ಶೆಟ್ಟಿ ಅಂಪಾರು, ಭಾಗವತ ದರ್ಶನ್ ಗೌಡ, ಕಿಶನ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ವಾಮನ ಚರಿತ್ರೆ’ ರಂಗ ಪ್ರಸ್ತುತಿಗೊಂಡಿತು.