ಮಂಗಳೂರು : ಕಾಂತಾವರ ಕನ್ನಡ ಸಂಘದ 2023ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ‘ಶ್ರೀಮತಿ ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನ’ದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಗೆ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಮೂರ್ಕಜೆಯಲ್ಲಿರುವ ಮೈತ್ರೇಯಿ ಗುರುಕುಲವನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಭಾಷಾ ತಜ್ಞ ಯು.ಪಿ.ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಉಜಿರೆಯ ಡಾ. ಎಸ್.ಡಿ. ಶೆಟ್ಟಿ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಚೆನೈಯ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರಿಗೆ ಮತ್ತು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ‘ಮಂಜನಬೈಲ್ ರಂಗಸನ್ಮಾನ್’ ಪ್ರಶಸ್ತಿಯನ್ನು ಬೆಂಗಳೂರಿನ ವೈ.ವಿ. ಗುಂಡೂರಾವ್ ಅವರಿಗೆ ನೀಡಲಾಗುವುದು.
ಪ್ರೊ. ಎ. ಕೃಷ್ಣಪ್ಪ ಪೂಜಾರಿ
ಡಾ. ಬಿ.ಭಾಸ್ಕರ ರಾವ್
ವಿವೇಕಾನಂದ ಕಾಮತ್
ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವಾಣಿ ಬಿ. ಆಚಾರ್ ಅವರು ಕನ್ನಡ ಸಂಘದಲ್ಲಿ ಸ್ಥಾಪಿಸಿದ ದತ್ತಿನಿಧಿಯ ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ಬೆಳ್ತಂಗಡಿಯ ಪ್ರೊ. ಎ. ಕೃಷ್ಣಪ್ಪ ಪೂಜಾರಿ ಅವರಿಗೆ, ಕನ್ನಡ ಸಂಘದಲ್ಲಿ ಮೊಗಸಾಲೆ ಕುಟುಂಬದವರು ಸ್ಥಾಪಿಸಿದ ದತ್ತಿನಿಧಿಯ ‘ಕಾಂತಾವರ ಅಂಕಣ ಸಾಹಿತ್ಯ ಪ್ರಶಸ್ತಿ’ಯನ್ನು ಉಡುಪಿಯ ಡಾ. ಬಿ.ಭಾಸ್ಕರ ರಾವ್ ಅವರಿಗೆ ಮತ್ತು ಕನ್ನಡ ಸಂಘದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಧ್ಯಾಪಿಕೆ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಅವರು ಸ್ಥಾಪಿಸಿದ ದತ್ತಿನಿಧಿಯ ‘ಕಾಂತಾವರ ಕಾದಂಬರಿ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ಕಾದಂಬರಿಕಾರ ವಿವೇಕಾನಂದ ಕಾಮತ್ ಅವರಿಗೆ ನೀಡಲಾಗುವುದು.
ಪ್ರಶಸ್ತಿ ಯು ತಲಾ ರೂ.10,000/- ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನಗಳನ್ನು ಒಳಗೊ೦ಡಿದೆ. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ನವೆಂಬರ್ 1ರಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ‘ಕಾಂತಾವರ ಉತ್ಸವ’ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.