ಮಂಗಳೂರು : ಕರಾವಳಿ ಲೇಖಕಿಯರ, ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಇವರು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸಿದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ಅಪರಾಹ್ನ 1.30ರಿಂದ ಮಂಗಳೂರಿನ ಬಲ್ಮಠದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಡಾ. ಜಗದೀಶ್ ಬಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾರ್ರು ಸ್ವಾಗತ ಮತ್ತು ಪ್ರಸ್ತಾವನೆ ಗೈಯ್ಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್, ತುಳು ಮತ್ತು ಕನ್ನಡ ಲೇಖಕರಾದ ಶ್ರೀ ಬೆನೆಟ್ ಜಿ. ಅಮ್ಮನ್ನ ಹಾಗೂ ಹಿರಿಯ ಲೇಖಕಿಯಾದ ಶ್ರೀಮತಿ ಮಮತಾ ರಾವ್ ಭಾಗವಹಿಸಲಿದ್ದಾರೆ.
ಈ ಸಾಲಿನ ಡಾ. ಸುನೀತಾ ಶೆಟ್ಟಿ ದತ್ತಿ ನಿಧಿ ‘ತೌಳವ ಸಿರಿ’ ಪ್ರಶಸ್ತಿಯನ್ನು ಹೆಚ್. ಶಕುಂತಲಾ ಭಟ್ ಹಳೆಯಂಗಡಿ, ನಾಡೋಜ ಡಾ. ಸಾರಾ ಅಬೂಬಕರ್ ದತ್ತಿ ನಿಧಿ ‘ಸಾರಾ ದತ್ತಿ ಪ್ರಶಸ್ತಿ’ಯನ್ನು ‘ಹಲವು ನಾಡು ಹೆಜ್ಜೆ ಹಾಡು’ ಪ್ರವಾಸ ಕಥನಕ್ಕಾಗಿ ಜಯಶ್ರೀ ದೇಶಪಾಂಡೆ ಹಾಗೂ ಚಂದ್ರಾಭಾಗಿ ರೈ ದತ್ತಿನಿಧಿ ‘ಚಂದ್ರಾಭಾಗಿ ರೈ ದತ್ತಿ ಬಹುಮಾನ’ವನ್ನು ‘ತೇವ ಕಾಯುವ ನದಿ’ ಅಪ್ರಕಟಿತ ಕವನ ಸಂಕಲನಕ್ಕಾಗಿ ಸ್ಮಿತಾ ಅಮೃತ್ ರಾಜ್ ಇವರಿಗೆ ನೀಡಿ ಗೌರವಿಸಲಾಗುವುದು.
ಸ್ಪರ್ಧೆಯಲ್ಲಿ ತೀರ್ಪುಗಾರರರಾಗಿ ಸಹಕರಿಸಿದ ಸೀತಾರಾಮ್ ಭಟ್ ಇವರು ಪ್ರವಾಸ ಕಥನದ ಬಗ್ಗೆ ಮತ್ತು ಜ್ಯೋತಿ ಗುರುಪ್ರಸಾದ್ ಅಪ್ರಕಟಿತ ಕವನ ಸಂಕಲನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಕೀನಾ ನಾಸಿರ್ ಹಾಗೂ ಬೆಂಗಳೂರಿನ ಕಾಂತಿ ರೈ ಉಪಸ್ಥಿತರಿರುವರು.