ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ತಂಡ ಜಂಟಿಯಾಗಿ ಆಯೋಜಿಸಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹವು ದಿನಾಂಕ 07 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಉದ್ಘಾಟನೆಗೊಂಡಿತು.
ಈ ಸಪ್ತಾಹವನ್ನು ಉದ್ಘಾಟಿಸಿದ ಕಂಕನಾಡಿಯ ಶ್ರೀ ಬ್ರಹ್ಮ ಬೈದ್ಯರ್ಕಳ ಗರೋಡಿಯ ಅಧ್ಯಕ್ಷ ಚಿತ್ತರಂಜನ್ ಕೆ. “ಐವತ್ತೈದು ವರ್ಷಗಳಿಂದ ಈ ತುಳು ಕೂಟವು ತುಳು ಭಾಷೆ, ಸಾಹಿತ್ಯ, ನಾಟಕ ಕೃತಿಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಸರಿ ಸುಮಾರು ಮೂವತ್ತು ವರ್ಷಗಳ ಕಾಲ ತುಳುಕೂಟವನ್ನು ಮುನ್ನಡೆಸಿ ಕೂಟಕ್ಕೆ ಮೆರುಗನ್ನು ತಂದುಕೊಟ್ಟವರು ಮರೋಳಿ ಬಿ. ದಾಮೋದರ ನಿಸರ್ಗ. ಗರೋಡಿಯಲ್ಲೂ ಉಪಾಧ್ಯಕ್ಷರಾಗಿ ಧಾರ್ಮಿಕ ಕಾರ್ಯಕ್ರಮಗಳಲೆಲ್ಲಾ ಸಕ್ರಿಯವಾಗಿ ಭಾಗವಹಿಸಿ ಮುನ್ನಡೆದವರು. ಅವರ ನೆನಪಲ್ಲಿ ಇಲ್ಲಿ ತುಳು ತಾಳಮದ್ದಳೆ ನಡೆಸುತ್ತಿರುವುದು ಸಂತಸದ ವಿಷಯ” ಎಂದು ಶುಭ ಹಾರೈಸಿದರು.
ಖಚಾಂಚಿ ನಾರಾಯಣ ಬಿ.ಡಿ.ಯವರು ಅಗಲಿದ ದಿವ್ಯ ಚೇತನವಾದ ಮರೋಳಿ ಬಿ. ದಾಮೋದರ ನಿಸರ್ಗರ ಸಂಸ್ಮರಣೆ ಮಾಡಿದರು. ತುಳು ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗರು ಸಭಾಧ್ಯಕ್ಷತೆ ವಹಿಸಿದ್ದರು. ಕಲಾವಿದ, ಸಂಘಟಕ ಭಾಸ್ಕರ ಬಾರ್ಯ, ಸರಯೂ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ಸಂದೀಪ್ ಗರೋಡಿ, ರೋಹಿಣಿ ಟೀಚರ್, ಪೆಲತ್ತಡಿ ಪದ್ಮನಾಭ ಕೋಟ್ಯಾನ್, ಕದ್ರಿ ನಾಗೇಶ್ ದೇವಾಡಿಗ, ಮಧುಸೂದನ ಎ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಆಂಜನೇಯ ಯಕ್ಷಗಾನ ಮಂಡಳಿ, ಪುತ್ತೂರು ಇವರಿಂದ ‘ಪಗರಿದ ಸಂಕ’ ಎಂಬ ತುಳು ತಾಳಮದ್ದಲೆ ಜರಗಿತು.
