ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಂಸ್ಥೆಯ ‘ಸಿನ್ಸ್ 1999 ಶ್ವೇತಯಾನ-48’ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಸಹಯೋಗದೊಂದಿಗೆ ಬಿ. ಎಮ್. ರಾಮಕೃಷ್ಣ ಹತ್ವಾರ್ ಸಂಸ್ಮರಣೆ ಕಾರ್ಯಕ್ರಮವು 04 ಆಗಸ್ಟ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ‘ಸಿನ್ಸ್ 1999 ಶ್ವೇತಯಾನ’ದ ಉಪ ಕಾರ್ಯಾಧ್ಯಕ್ಷ ಕೊಮೆ ಗೋಪಾಲ ಪೂಜಾರಿ ಮಾತನಾಡಿ “ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಜಗತ್ತಿಗೆ ಬಹು ದೊಡ್ಡ ಕೊಡುಗೆ ಇತ್ತ ಬಿ. ಎಮ್. ರಾಮಕೃಷ್ಣ ಹತ್ವಾರ್‌ರ ಕಾಯ ಅಳಿದು ಕೀರ್ತಿ ಉಳಿದಿದೆ. ಅದೆಷ್ಟೋ ಶಾಲಾ ಕಾಲೇಜುಗಳ ಕೊಠಡಿಗಳು ಹತ್ವಾರರ ಹೆಸರಿನಲ್ಲಿ ಉಳಿದಿವೆ. ಸಾಂಸ್ಕೃತಿಕವಾಗಿ ತೆಕ್ಕಟ್ಟೆಯ ಬೆಟ್ಟಿನ ಮನೆಯಲ್ಲಿ ವರ್ಷಂಪ್ರತೀ ಪ್ರಸಿದ್ಧ ಕಲಾವಿದರನ್ನು ಜಮಾಯಿಸಿ, ಅದ್ದೂರಿಯ ತಾಳಮದ್ದಳೆ ಏರ್ಪಡುವಂತೆ ಮಾಡಿದ ಕಲಾ ಪ್ರೇಮಿಗಳು ಹತ್ವಾರರು. ಗತ ಕಾಲದಲ್ಲಿ ತೆಕ್ಕಟ್ಟೆಯಲ್ಲಿ ತಾಳಮದ್ದಳೆಯ ಸಂಘಟಕರಾಗಿ ಹೆಸರಾದ ಹತ್ವಾರರು ಜೀವಿತ ಕಾಲದಲ್ಲಿ ತೆಂಕು ಬಡಗಿನ ಅನೇಕ ಯಕ್ಷಗಾನವನ್ನು ಆ ಕಾಲದಲ್ಲಿ ಏರ್ಪಡಿಸಿ ಜನಾನುರಾಗಿಯಾಗಿದ್ದರು. ಇಂತಹ ಹತ್ವಾರರು ಸಮಾಜದ ಎಲ್ಲಾ ವಿಭಾಗದಲ್ಲೂ ತಮ್ಮ ಕೊಡುಗೆಯನ್ನಿತ್ತು ಸರ್ವ ಶ್ರೇಷ್ಠರಾದರು. ದಾನಿಗಳ ನೆರವನ್ನು ಸಂಘ ಸಂಸ್ಥೆಗಳು ನೆನಪಿಸಿಕೊಳ್ಳಬೇಕಾದದ್ದು ಆದ್ಯ ಕರ್ತವ್ಯ.” ಎಂದರು.
ಕಾರ್ಯಕ್ರಮದಲ್ಲಿ ಹತ್ವಾರ್ ಸಹೋದರ ಬೆಟ್ಟಿನ ಮನೆ ವಾದಿರಾಜ ಹತ್ವಾರ್, ರೋಟರಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ಉಪನ್ಯಾಸಕ ಮೋಹನಚಂದ್ರ ಪಂಜಿಗಾರು, ಯಶಸ್ವೀ ಕಲಾ ವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಕೇಂದ್ರದ 24 ವಿದ್ಯಾರ್ಥಿಗಳು ‘ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರಸಂಗವನ್ನು ‘ಗಾನ ತಾಳಮದ್ದಳೆ’ಯಾಗಿ ರಂಗದಲ್ಲಿ ಪ್ರದರ್ಶಿಸಿದರು.