ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿ ಡಾ. ಬಿ.ಎಸ್. ಗದ್ದಗಿಮಠ ಅವರು ನಾಡು ಕಂಡ ಅಪೂರ್ವ ಜಾನಪದ ವಿದ್ವಾಂಸರು, ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಜಾನಪದ ಸಾಹಿತ್ಯದ ಬಗ್ಗೆ ಅಧಿಕೃತವಾಗಿ ಮಾತನಾಡಿದ ಧೀಮಂತ ವ್ಯಕ್ತಿ. ಜಾನಪದ ಸಾಹಿತ್ಯವನ್ನು ಉಸಿರಾಗಿಸಿಕೊಂಡಿದ್ದ ಇವರು ಜಾನಪದ ಸಾಹಿತ್ಯದ ಮೌಲಿಕತೆಯನ್ನು ಸಾಂಸ್ಕೃತಿಕ ವಿಕಾಸವನ್ನು ತೋರಿಸಿಕೊಟ್ಟವರು.
07 ಜನವರಿ 1917ರಂದು ಬಿಜಾಪುರ ಜಿಲ್ಲೆ ಕೆರೂರಿನಲ್ಲಿ ಡಾ. ಬಿ.ಎಸ್. ಗದ್ದಗಿಮಠ ಇವರ ಜನನವಾಯಿತು. ಜಾನಪದ ಗೀತೆಗಳನ್ನು ಹಾಡುತ್ತಿದ್ದ ತಮ್ಮ ತಂದೆಯಿಂದ ಪ್ರಭಾವಿತರಾದ ಇವರು ಬೆಳೆಯುತ್ತಾ ಬೆಳೆಯುತ್ತಾ ಜಾನಪದ ಕ್ಷೇತ್ರದೊಂದಿಗೆ ತೀವ್ರವಾದ ಒಲವನ್ನು ಬೆಳೆಸಿಕೊಂಡರು. ಕನ್ನಡದಲ್ಲಿ ಎಂ. ಎ. ಪದವಿ ಪಡೆದ ಇವರು ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸುತ್ತಾ ಜಾನಪದ ಗೀತೆಗಳನ್ನು ಸಂಶೋಧಿಸುತ್ತಾ, ಸಂಗ್ರಹಿಸುತ್ತಾ ಪ್ರೌಢ ಪ್ರಬಂಧವನ್ನು ಬರೆದರು. ‘ಕನ್ನಡ ಜನಪದ ಗೀತೆಗಳು’ ಎಂಬ ಈ ಸಂಶೋಧನಾತ್ಮಕ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ದೊರೆಯಿತು. ಇದು ಜಾನಪದ ಕ್ಷೇತ್ರಕ್ಕೆ ಪ್ರಥಮವಾಗಿ ದೊರೆತ ಪಿ.ಎಚ್.ಡಿ. ಪದವಿಯಾಗಿತ್ತು. ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಗದ್ದಗಿಮಠ ಅವರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಯಾಮ ಶಿಕ್ಷಕರಾಗಿ ಉದ್ಯೋಗ ಮುಂದುವರಿಸಿದರು. ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಸೇವಾವಧಿಯಲ್ಲಿರುವಾಗಲೇ 30 ಅಕ್ಟೋಬರ್ 1960ರಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೂ ಡಾ. ಬಸಯ್ಯ ಸಾವಳಿಗೇಶ ಗದ್ದಗಿಮಠ ಅವರ ಕಾರ್ಯ ಜಾನಪದ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿದಿದೆ.
ಡಾ. ಗದ್ದಗಿಮಠ ಅವರ ಸಂಗ್ರಹದ ಸಾಹಿತ್ಯ ಬಹುಪಾಲು ಪ್ರಕಟಗೊಳ್ಳದೇ ಉಳಿದಿದೆ. ಪ್ರಕಟಗೊಂಡ ಕೃತಿಗಳಲ್ಲಿ ‘ನಾಲ್ಕು ನಾಡ ಪದಗಳು’, ಕಂಬಿಯ ಹಾಡುಗಳು’, ಜನತಾ ಗೀತೆಗಳು’, ‘ಮಲ್ಲ ಮಲ್ಲಾಣಿ’, ‘ಕುಮಾರ ರಾಮನ ದುಂದಮೆ’ ‘ಲೋಕ ಗೀತೆಗಳು’ ಪ್ರಮುಖವು. ಪ್ರಕಟಗೊಳ್ಳಬೇಕಿದ್ದ ಸೋಬಾನ ಹಾಡುಗಳು, ಜೋಗುಳ ಹಾಡುಗಳು, ಜಾನಪದ ಮಹಾಭಾರತ, ಜಾನಪದ ರಾಮಾಯಣ, ಕಲ್ಯಾಣ ಬಸವ, ಕೋಲು ಪದಗಳಂಥ ಪ್ರಮುಖ ಸಂಗ್ರಹಗಳ ಹಸ್ತ ಪ್ರತಿಗಳು ಕಳೆದುಹೋಗಿದೆ.
ಡಾ. ಬಿ.ಎಸ್. ಗದ್ದಗಿಮಠ ಹಾಗೂ ಶ್ರೀಮತಿ ಅನಸೂಯ ದಂಪತಿಗಳ ಅನ್ಯೋನ್ಯ ಪ್ರೀತಿಯ ಕುಸುಮಗಳಾಗಿ ಅರಳಿದ ಪುತ್ರ ರತ್ನರು – ಸಾವಳಿಗೇಶ (ಬಾಬಣ್ಣ), ರವಿ (ರುದ್ರಯ್ಯ) ಪುಲಕೇಶಿ, ನಿಜಗುಣದೇವ ಮತ್ತು ಏಕಮೇವ ಪುತ್ರಿ ಅಕ್ಕಮಹಾದೇವಿ. ಮಕ್ಕಳೆಲ್ಲರೂ ಪ್ರಚಂಡ ಬೌದ್ಧಿಕ ಜ್ಞಾನವನ್ನು ಹೊಂದಿದ್ದು, ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಾಧುರಿ ಶ್ರೀರಾಮ
ವಿಮರ್ಶಕರು