ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಹಾಗೂ ಸ್ವಸ್ತಿಕ್ ಕಲಾ ಕೇಂದ್ರ ಜಲ್ಲಿಗುಡ್ಡೆ ಬಜಾಲ್ ಪ್ರಾಯೋಜಕತ್ವದಲ್ಲಿ, ಪುಟ್ಟಣ್ಣ ಕುಲಾಲ್’ ಪ್ರತಿಷ್ಠಾನ ಪಡೀಲ್ ಸಹಕಾರದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 08-10-2023ರಂದು ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಇವರಿಗೆ 2023-24ನೇ ಸಾಲಿನ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ಇಂದಿನ ಯುವಕರು ಮೊಬೈಲ್ ಯುಗದಲ್ಲಿದ್ದು, ಅವರಿಗೆ ಯಕ್ಷಗಾನ ಅಷ್ಟೊಂದು ಆಕರ್ಷಿತವಾಗುತ್ತಿಲ್ಲ. ಆದರೆ ಸ್ವಸ್ತಿಕ್ ಕಲಾ ಕೇಂದ್ರವು ಯಕ್ಷಗಾನವನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ನನಗೂ ಯಕ್ಷಗಾನ ತುಂಬಾ ಇಷ್ಟ. ಬಾಲ್ಯದಲ್ಲಿ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದೆ. ಹಲವು ಯಕ್ಷಗಾನ ಪ್ರಸಂಗ ವೀಕ್ಷಿಸುವ ಹವ್ಯಾಸ ನನ್ನಲ್ಲಿತ್ತು” ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, “ವೇಣೂರು ಸದಾಶಿವ ಕುಲಾಲ್ ಅವರು ಸಮಾಜಕ್ಕೆ ನೀಡಿದ ಸೇವೆ ಅನನ್ಯ. ಅವರ ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು. ಅದೇ ರೀತಿ, ದಿ. ಬಾಬು ಕುಡ್ತಡ್ಕ ಅವರು ಧೀಮಂತ ವ್ಯಕ್ತಿ. 14 ವರ್ಷದಿಂದ ನಿರಂತರವಾಗಿ ತನ್ನ ಜೀವನವನ್ನು ಯಕ್ಷಗಾನಕ್ಕೆ ಸಮರ್ಪಿಸಿದ್ದಾರೆ” ಎಂದರು.
ಪ್ರಶಸ್ತಿ ಸ್ವೀಕರಿಸಿದ ವೇಣೂರು ಸದಾಶಿವ ಕುಲಾಲ್ ಮಾತನಾಡಿ, “ಮೂರನೇ ತರಗತಿಯಲ್ಲಿದ್ದಾಗ ನಾನು ಯಕ್ಷಗಾನ ಕ್ಷೇತ್ರದತ್ತ ಆಕರ್ಷಿತನಾದೆ. ಸುರತ್ಕಲ್ ಮೇಳದಲ್ಲಿ ಟೆಂಟ್‌ನ ಕೆಲಸ ಮಾಡುತ್ತಿದ್ದೆ. ಆಗ ಚೌಕಿಗೆ ಹೋಗುಲು ಕೂಡ ಹೆದರಿಕೆ. ಟೆಂಟಿನ ಹೊರಗಿನ ನೆರಳನ್ನು ನೋಡಿ ಹಂತ ಹಂತವಾಗಿ ಅಭ್ಯಾಸ ಮಾಡಿದೆ. ಶಿವರಾಮ ಜೋಗಿ ಅವರ ಮಾರ್ಗದರ್ಶನವೂ ಆರಂಭದಲ್ಲಿ ಸಿಕ್ಕಿತ್ತು. ದಿ. ಬಾಬು ಕುಡ್ತಡ್ಕ ಸಹಿತ ಕಲಾವಿದರೆಲ್ಲರೂ ಜಾತೀಯತೆಯನ್ನು ಮರೆತು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ” ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಟ್ರಸ್ಟಿ ಡಾ. ಅಣ್ಣಯ್ಯ ಕುಲಾಲ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಬಿ. ಪ್ರಕಾಶ್ ಪೈ, ಉದ್ಯಮಿ ಬಿ. ಪ್ರಸಾದ್ ಕುಡ್ಡಡ್ಕ, ಶ್ರೀ ಅಂಬಾ ಭವಾನಿ ಭಜನ ಮಂದಿರ ಜಲ್ಲಿಗುಡ್ಡೆ ಅಧ್ಯಕ್ಷ ಸುಧಾಕರ ರಾವ್ ಪಾಟೀಲ್, ಸಮಾಜ ಸೇವಕಿ ಗಾಯತ್ರೀ ದೇವಿ, ಬಂಟರ ಸಂಘ ಕಂಕನಾಡಿ ಮಾಜಿ ಅಧ್ಯಕ್ಷೆ ವತ್ಸಲಾ ಮಲ್ಲಿ, ಪ್ರಮುಖರಾದ ಪ್ರತಿಭಾ ಕುಡ್ತಡ್ಕ, ರಾಮ ನಾಯ್ಕ್, ಹರಿಕೇಶವ ರಾವ್, ಅರ್ಷಿಯ ತನು ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ನಿರೂಪಕಿ ಡಾ. ಪ್ರಿಯಾ ಹರೀಶ್ ಅಭಿನಂದನ ಭಾಷಣಗೈದರು. ಆನಂದ್ ರಾವ್ ಸ್ವಾಗತಿಸಿ, ಸಂತೋಷ್ ಪಡೀಲ್ ಕಲಾ ಕೇಂದ್ರ ನಡೆದು ಬಂದ ಹಾದಿ ವಿವರಿಸಿದರು. ಸ್ವಸ್ತಿಕ್ ಕಲಾ ಕೇಂದ್ರದ ಅಧ್ಯಕ್ಷ ಕೆ.ಸಿ. ಹರಿಶ್ಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಜಲ್ಲಿಗುಡ್ಡೆಯ ಶ್ರೀ ಅಂಬಾಭವಾನಿ ಯಕ್ಷಗಾನ ಕಲಾಮಂಡಳಿಯ ಸದಸ್ಯರಿಂದ ದಿನಕರ್ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ‘ಶ್ರೀ ದೇವಿ ಮಹಿಷಮರ್ಧಿನಿ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು.