ಮಂಗಳೂರು : “ನಮ್ಮ ಸಂಸ್ಕೃತಿ… ನಮ್ಮ ಹೆಮ್ಮೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ನಾಲ್ಕು ದಶಕಗಳಿಂದ ತನ್ನ ಸದಸ್ಯರ ಮಕ್ಕಳ ಮತ್ತು ವಿವಿಧ ಶಾಲಾ ಮಕ್ಕಳ ಭಾರತೀಯ ಕಲೆ, ಸಂಗೀತ, ನೃತ್ಯ ಕಲೆ, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ಅಭ್ಯಾಸ, ಪ್ರದರ್ಶನ, ಸ್ಪರ್ಧೆಗಳಿಗೆ ಸೂಕ್ತ ವೇದಿಕೆ ನಿರ್ಮಾಣದ ಮೂಲಕ ಪ್ರಸಿದ್ಧವಾದ ಸಂಸ್ಥೆ ರಾಗ ತರಂಗ (ರಿ.) ಮಂಗಳೂರು. 2024-25ನೇ ಸಾಲಿನ ಉಡುಪಿ, ಮಂಗಳೂರು ಮತ್ತು ಕಾಸರಗೋಡು ವ್ಯಾಪ್ತಿಯ ಶಾಲಾ ಮಕ್ಕಳ ಅಂತರ್ ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳು ದಿನಾಂಕ 13 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಜರುಗಿದ್ದು, ಇವುಗಳ ಬಹುಮಾನ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ಮತ್ತು ವಿಜೇತ ಮಕ್ಕಳ ಪ್ರತಿಭಾ ಪ್ರದರ್ಶನದ ‘ಬಾಲ ಪ್ರತಿಭೋತ್ಸವ’ ಕಾರ್ಯಕ್ರಮವು ದಿನಾಂಕ 05 ಜನವರಿ 2025ನೇ ಆದಿತ್ಯವಾರ ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ಜರುಗಿತು.
ಸಮಾರಂಭದಲ್ಲಿ ಮುಖ್ಯ ಆಹ್ವಾನಿತರಾಗಿ 92.7 Big FMನ ಪ್ರಖ್ಯಾತ RJ ನಯನಾ ಶೆಟ್ಟಿ ಭಾಗವಹಿಸಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ನಿರಂತರವಾಗಿ ವೇದಿಕೆ ಕಲ್ಪಿಸಿಕೊಡುತ್ತಿರುವ ರಾಗ ತರಂಗದ ಕಾರ್ಯವನ್ನು ಪ್ರಶಂಸಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಸಲಹಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ದೇವರಾಜ್ ಕೆ., ಅನಂತ ಕೃಷ್ಣ ಉಡುಪ, ವಾಮನ್ ಮೈoದನ್ ಹಾಗೂ ರಾಗ ತರಂಗದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಆಶಾ ಹೆಗ್ಡೆಯವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ್ ಕೆ.ಎನ್., ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ದೈತೋಟ ಮತ್ತು ಶ್ರೀ ಕೃಷ್ಣ ಶೆಟ್ಟಿ ಎ. ತಾರೆಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಗ ತರಂಗದ ಪರಂಪರೆಯಂತೆ ಪ್ರತಿಭಾಶಾಲಿ ಮಕ್ಕಳನ್ನೇ ಸಮಾರಂಭದ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿದ್ದು, ಈ ವರ್ಷ ಕುಮಾರಿ ಮನ್ವಿತಾ ಕೆ. ಶೆಟ್ಟಿ ತಾರೆಮಾರ್ ಅಧ್ಯಕ್ಷರಾಗಿ ಮತ್ತು ಮಾಸ್ಟರ್ ವೈಭವ್ ನರಸಿಂಹ ಉಪಾಧ್ಯಕ್ಷರಾಗಿ ಗೌರವಿಸಲ್ಪಟ್ಟರು. ಸದಸ್ಯೆ ಶ್ರೀಮತಿ ಮಂಜೇಶ್ವರಿ ಹೊಳ್ಳ, ಕುಮಾರಿ ಭೂಮಿಕಾ ಮತ್ತು ಕುಮಾರಿ ಶೃದ್ಧಾ ಕಾರ್ಯಕ್ರಮ ನಿರ್ವಹಣೆಗೈದರು. ಆರಂಭದಲ್ಲಿ ಕುಮಾರಿ ವಿಧಾತ್ರಿ ಮಯ್ಯ ಪ್ರಾರ್ಥನಾ ಗೀತೆ ಹಾಡಿದಳು. ಕಾರ್ಯಕ್ರಮದ ಪೂರ್ವಾರ್ಧ ಮತ್ತು ಉತ್ತರಾರ್ಧದಲ್ಲಿ ನಡೆದ ಬಹುಮಾನ ವಿಜೇತ ಮಕ್ಕಳ ಪ್ರತಿಭಾ ಪ್ರದರ್ಶನ ಎಲ್ಲರ ಮನಗೆದ್ದಿತು.
ಸಾರ್ವಜನಿಕ ಸಂಪರ್ಕಾಧಿಕಾರಿ ಪಾಂಡುರಂಗ ರಾವ್, ಕಾರ್ಯದರ್ಶಿ ಶ್ರೀ ಪಿ.ಸಿ. ರಾವ್, ಜೊತೆ ಕಾರ್ಯದರ್ಶಿ ಶ್ರೀ ಜಯಪ್ರಕಾಶ ಶೆಟ್ಟಿ ಮತ್ತು ಶ್ರೀಮತಿ ಮಮತಾ ರಾಜೀವ, ಕೋಶಾಧಿಕಾರಿ ಶ್ರೀಮತಿ ಸೌಮ್ಯ ರಾವ್, ಜೊತೆ ಕೋಶಾಧಿಕಾರಿ ಶ್ರೀಮತಿ ಸಂಜನಾ ಭಟ್, ಸದಸ್ಯರಾದ ಶ್ರೀಮತಿ ಸುಪ್ರಭಾ ಸುರೇಶ್, ಶ್ರೀಮತಿ ಶಿಲ್ಪಾ ರಾಮಚಂದ್ರ, ಶ್ರೀಮತಿ ಚೇತನಾ ನರೇಂದ್ರ, ಶ್ರೀಮತಿ ವೀಣಾ ವಾಣಿ ಶೆಟ್ಟಿ ಮತ್ತು ಶ್ರೀಮತಿ ಗೀತಾ ಮೈoದನ್ ಸಹಕರಿಸಿದರು.