ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಬನ್ನೂರು ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ 12 ಕಾರ್ಯಕ್ರಮವು ದ.ಕ.ಜಿ.ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರಲ್ಲಿ ದಿನಾಂಕ 27-01-2024ರಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸ್ಮಿತಾ ಎನ್. ಉದ್ಘಾಟಿಸಿ “ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚು ಇರುವುದರಿಂದ ಇಂದು ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿದೆ. ಅಲ್ಲದೇ ಸಾಹಿತ್ಯ ಪರಿಷತ್ತಿನ ಈ ಗ್ರಾಮ ಸಾಹಿತ್ಯ ಸಂಭ್ರಮ ಅದಕ್ಕೆ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯ ಎ. ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ನಳಿನಿ ಕೆ. ಸಂದರ್ಭೋಚಿತವಾಗಿ ಮಾತನಾಡಿದರು. ಸರ್ವಾಧ್ಯಕ್ಷತೆ ವಹಿಸಿದ ಮಾ. ಹರೀಕ್ಷಿತ್ ಕೆ.ಸಿ. “ಸಾಹಿತ್ಯ ಸಮ್ಮೇಳನದಂತಹ ರೂಪ ಪಡೆದು ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆಯಂತಹ ಜವಾಬ್ದಾರಿ ನೀಡಿ ಗ್ರಾಮೀಣ ಮಕ್ಕಳನ್ನು ಪ್ರೋತ್ಸಾಹಿಸುವ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ಕಾರ್ಯ ಶ್ಲಾಘನೀಯ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಮಾತನಾಡಿ “ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಇಂತಿಷ್ಟೇ ಜನರಿಗೆ ವೇದಿಕೆ ಒದಗಿಸಲು ಅವಕಾಶ, ಗ್ರಾಮೀಣ ಭಾಗದ ಮಕ್ಕಳು ಅವಕಾಶ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಜನಸಾಮಾನ್ಯರಲ್ಲಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಗ್ರಾಮ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ಬನ್ನೂರು ಗ್ರಾಮಕ್ಕೆ ಸಂಬಂಧಪಟ್ಟಂತೆ ಶ್ರೀ ತಿಮ್ಮಪ್ಪ ಪೂಜಾರಿ -ರಂಗಭೂಮಿ, ಶ್ರೀಮತಿ ಗಿರಿಜಾ -ನಾಟಿವೈದ್ಯ, ಶ್ರೀಮತಿ ರಶ್ಮಿತಾ ಸುರೇಶ್ -ಸಾಹಿತ್ಯ, ದೇವಿಕಾ ಜೆ.ಜಿ. ಬನ್ನೂರು -ಶಿಕ್ಷಣ ಮತ್ತು ಸಾಹಿತ್ಯ, ಶ್ರೀ ಸತೀಶ್ ಬಲ್ಯಾಯ -ನಾಟಕ ಮತ್ತು ಚಲನಚಿತ್ರ ನಟ, ಶ್ರೀಮತಿ ಪ್ರತಿಭಾ ಅರಿಯಡ್ಕ -ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲಿಯುಗ ಸೇವಾ ಸಮಿತಿ ಚಿಕ್ಕಮುಡ್ನೂರು ಇದರ ಸಂಚಾಲಕರಾದ ಶ್ರೀ ಸಂಪತ್ ಕುಮಾರ್ ಜೈನ್ ಇವರು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಶುಭ ಹಾರೈಸಿದರು.
ಗ್ರಾಮ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷರಾದ ಮಾ. ಹರೀಕ್ಷಿತ್ ಕೆ.ಸಿ.ಯವರಿಗೆ ಕನ್ನಡ ಪೇಟ, ಸಮಾರೋಪ ಭಾಷಣಕಾರರಾದ ಕು. ಮಣಿಯವರಿಗೆ ಕನ್ನಡ ಶಾಲು ಹಾಕಿ ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ದ.ಕ.ಜಿ.ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರು ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರು ಇಲ್ಲಿನ ಮುಖ್ಯ ಗುರುಗಳಾದ ಶ್ರೀಮತಿ ಪುಷ್ಪ ಕೆ. ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಗುರೆಲೆ ಸಾಹಿತ್ಯ ಬಳಗದ ನಿರ್ವಹಕರಾದ ಕು. ಅಪೂರ್ವ ಕಾರಂತ್ ದರ್ಬೆ ವಂದಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯರಾದ ಕು. ಸೌಜನ್ಯ. ಬಿ.ಎಂ. ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು, ಶ್ರೀ ಚಂದ್ರಮೌಳಿ ಕಡಂದೇಲು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ಬನ್ನೂರು ಗ್ರಾಮದ ಕೊಡುಗೆ ವಿಷಯ ಕುರಿತು ನಾಟಕ ಕರ್ತೃ, ಗ್ರಾಮ ಪಂಚಾಯತ್ ಬನ್ನೂರು ಸದಸ್ಯರಾದ ಶ್ರೀ ತಿಮ್ಮಪ್ಪ ಪೂಜಾರಿ ಮಾತನಾಡಿದರು. ತದನಂತರ ‘ಕನ್ನಡದಲ್ಲೂ ಐ.ಎ.ಎಸ್. ಬರೆಯಿರಿ ಅಭಿಯಾನ’ ವಿಷಯ ಮಾಹಿತಿಯನ್ನು ಕ.ಸಾ.ಪ. ಪುತ್ತೂರು ಐ.ಎ.ಎಸ್. ದರ್ಶನ ಇದರ ಪ್ರೇರಕ ಭಾಷಣಕಾರರಾದ ಶ್ರೀ ಪ್ರಣವ್ ಭಟ್ ನೀಡಿದರು. ವಿದ್ಯಾರ್ಥಿಗಳಿಂದ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಾಲ ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀ ರಾಮ ಪ್ರಥಮ ದರ್ಜೆ ಉಪನ್ಯಾಸಕರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಬಾಲ ಕಥಾಗೋಷ್ಠಿ ಅಧ್ಯಕ್ಷತೆಯನ್ನು ಚಲನಚಿತ್ರ ನಟ, ನಾಟಕ ಕಲಾವಿದರಾದ ಶ್ರೀ ಸತೀಶ್ ಬಲ್ಯಾಯ ಹಾಗೂ ಸಾರ್ವಜನಿಕ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷರಾದ ಶ್ರೀಮತಿ ಶ್ರೀಕಲಾ ಕಾರಂತ್ ಅಳಿಕೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಸುನೀತಾ ಶ್ರೀರಾಮ್ ಕೊಯಿಲ, ಭರತ್ ವಳಾಲು, ಚಂದ್ರು ಬಿ. ತಗೊಂಡ, ಪ್ರಣವ್ ಭಟ್, ಪ್ರಿಯಾ ಸುಳ್ಯ, ಸೌಜನ್ಯ ಬಿ.ಎಂ. ಕೆಯ್ಯೂರು, ಅಪೂರ್ವ ಕಾರಂತ್ ದರ್ಬೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಹರ್ಷಿತ ಹರೀಶ್ ಕುಲಾಲ್ ಐವರ್ನಾಡು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸ.ಉ.ಹಿ.ಪ್ರಾ. ಶಾಲೆ ಪಡ್ನೂರು ಇದರ ವಿದ್ಯಾರ್ಥಿನಿ ಕು. ಮಣಿ ಮಾತನಾಡಿ “ಕನ್ನಡ ಕೇವಲ ಭಾಷೆ ಮಾತ್ರವಲ್ಲ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಮಾರ್ಗ, ಇದು ಕನ್ನಡ ಕೇಂದ್ರೀಕೃತವಾದ ಸಮ್ಮೇಳನವಾಗಿದೆ” ಎಂದರು ವಿವಿಧ ಗೋಷ್ಠಿಗಳ ನಿರೂಪಣೆಯನ್ನು ಪ್ರಿಯಾ ಸುಳ್ಯ, ಹರ್ಷಿತ ಹರೀಶ್ ಕುಲಾಲ್ ಐವರ್ನಾಡು, ನವ್ಯ ಪುತ್ತೂರು, ವಿಂಧ್ಯಾ ಎಸ್. ರೈ ನಿರ್ವಹಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.