ಬಂಟ್ವಾಳ : ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ‘ಶ್ರಾವಣ ಮಾಸದ ತಾಳಮದ್ದಳೆ ಸೇವೆ’ಯು ದಿನಾಂಕ 10-09-2023ರಂದು ಸಮಾರೋಪಗೊಂಡಿತು. ಸಮಾರೋಪ ಸಂದರ್ಭ ವಾರ್ಷಿಕೋತ್ಸವ, ಸನ್ಮಾನ, ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ನೆರವೇರಿತು.
ಇದೇ ಸಂದರ್ಭದಲ್ಲಿ ಕಲಾಪೋಷಕ, ಸಂಘಟಕ, ಕಲಾವಿದ ಶ್ರೀ ವಾಸುದೇವ ರಾವ್ ಸುರತ್ಕಲ್ ಮತ್ತು ಸ್ನೇಹಶೀಲ ಭಾಗವತರಾದ ಶ್ರೀ ಸೀತಾರಾಮ ಸಾಲೆತ್ತೂರು ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಹವ್ಯಾಸಿ ಭಾಗವತರಾದ ಮಂಗಳೂರು ಆಕಾಶವಾಣಿ ಎ ಗ್ರೇಡ್ ನಾಟಕ ಕಲಾವಿದೆ ಮಲ್ಲಿಕಾ ಅಜಿತ್ ಶೆಟ್ಟಿಯವರು ಸನ್ಮಾನ ಪತ್ರ ವಾಚಿಸಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ವಾಸುದೇವ ರಾವ್ ಸುರತ್ಕಲ್, ತನ್ನ ಜೀವನದಲ್ಲಿ ಯಕ್ಷಗಾನದ ನಂಟನ ವಿಷಯವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಮಾತನಾಡಿ, ಶ್ರಾವಣ ಮಾಸದ ಮಹತ್ವದ ಬಗ್ಗೆ ವಿವರಿಸಿದರು. ದೇಗುಲದ ಮೊಕ್ತೇಸರರಾದ ಭಾಮಿ ನಾಗೇಂದ್ರ ಶೆಣೈ ಉಪಸ್ಥಿತರಿದ್ದರು. ನಾಗೇಂದ್ರ ಪೈ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಅರ್ಲ ಯೋಗೀಶ ಪ್ರಭು ವರದಿ ವಾಚಿಸಿದರು. ರೋಟೀರಿಯನ್ ಪಿ. ವಸಂತ ಪ್ರಭು ವಂದಿಸಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಹವ್ಯಾಸಿ ಅರ್ಥದಾರಿ ಶ್ರೀ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಹಿರಿಯ ಕಲಾವಿದರಿಂದ ‘ಕೃಷ್ಣಾರ್ಜುನ ಕಾಳಗ’ ತಾಳಮದ್ದಳೆ ಪ್ರಸ್ತುತಗೊಂಡಿತು.