ಶಂಭೂರು : ಮಕ್ಕಳ ಕಲಾ ಲೋಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇದರ ಆಶ್ರಯದಲ್ಲಿ 18ನೇ ವರ್ಷದ ಬಂಟ್ವಾಳ ತಾಲೂಕು ‘ಮಕ್ಕಳ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 19 ನವೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಗೆ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9-05 ಗಂಟೆಗೆ ಶೇಡಿಗುರಿಯಿಂದ ಹೊರಡುವ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಚಾಲನೆ ನೀಡುವರು. ಇಲ್ಲಿನ ಏಳನೇ ತರಗತಿ ವಿದ್ಯಾರ್ಥಿನಿ ಪ್ರೇಕ್ಷಾ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, 17ನೇ ಸಮ್ಮೇಳನಾಧ್ಯಕ್ಷೆ ಕಡೇಶಿವಾಲಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ.
ಬೆಳಗ್ಗೆ 9-50 ಗಂಟೆಗೆ ಸ್ವರಚನೆ ವಿಷಯ ಪ್ರಕಟಣೆ. ಉದ್ಘಟನಾ ಸಮಾರಂಭದಲ್ಲಿ ಮಕ್ಕಳ ಸ್ವರಚಿತ ಕೃತಿಗಳನ್ನು ಸಾಹಿತಿ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಇವರು ಬಿಡುಗಡೆಗೊಳಿಸುವರು. ಸಭಾ ಕಾರ್ಯಕ್ರಮದ ಬಳಿಕ ಕಿರು ನಾಟಕ ಸ್ಪರ್ಧೆ, ಕಲಾ ರಂಗ ಸಂಗಮ, ಮಾತುಕತೆ, ಸಾಹಿತ್ಯ ಗೋಷ್ಠಿ ನಡೆಯಲಿದೆ.
3-00 ಗಂಟೆಗೆ ನಡೆಯಲಿರುವ ಸಮಾರೋಪದಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಹನ್ಸಿಕಾ ಎಸ್.ಡಿ. ಪೂಜಾರಿ ಸಮಾರೋಪ ಭಾಷಣ ಮಾಡುವರು. ನಿವೃತ್ತ ಮುಖ್ಯಶಿಕ್ಷಕಿ ನೀಲಮ್ಮ, ನೆಟ್ಟ ಮೂಡ್ನೂರು ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಸಚ್ಚಿದಾನಂದ ಭಾಗವಹಿಸುವರು. ಓಜಾಲ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ‘ಸಾಹಿತ್ಯ ತಾರೆ’ ಪ್ರಶಸ್ತಿ, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಸಹಾಯಕ ಶಿಕ್ಷಕಿ ಶ್ರೀಮತಿ ಸುಧಾ ನಾಗೇಶ್ ಇವರಿಗೆ ‘ಬಾಲ ಬಂಧು’ ಪ್ರಶಸ್ತಿ ಪ್ರದಾನ ನಡೆಯಲಿದೆ.