ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 04 ಜನವರಿ 2026ರಂದು ಬೆಳಗ್ಗೆ 9-00 ಗಂಟೆಗೆ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 9-30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್‌ಬಿರ್ರ್ ಶಾಲಾ ಆವರಣದಿಂದ ಪ್ರಾರಂಭವಾಗುವ ಮೆರವಣಿಗೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಂ.ಎಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸುವರು. ಗಂಟೆ 10-15ಕ್ಕೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ವಿವಿಧ ಅಕಾಡೆಮಿಗಳ ಅಧ್ಯಕ್ಷರು ಭಾಗವಹಿಸುವರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಮೀಮಾ ಕುತ್ತಾರ್ ಇವರ ‘ಪಡಿಞ್ಞಾರ್ರೋ ಪೂ’ (ಕಥಾ ಸಂಕಲನ), ಹಸೀನ ಮಲ್ನಾಡ್ ಇವರ ‘ಮಿನ್ನಾಂಪುಲು’ (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಇವರ ‘ಸಂಪುಕಾತ್’ (ಕವನ ಸಂಕಲನ). ಬಶೀರ್ ಅಹ್ಮದ್ ಬೆಳ್ಳಾಯಿರು ಇವರ ‘ಬೆಲ್‌ಚ’ (ಕವನ ಸಂಕಲನ) ಮತ್ತು ಹೈದರಲಿ ಕಾಟಿಪಳ್ಳ ಇವರ ‘ನಸೀಅತ್’ (ಕವನ ಸಂಕಲನ) ಬ್ಯಾರಿ ಕೃತಿಗಳು ಬಿಡುಗಡೆಗೊಳ್ಳಲಿವೆ.
ಮಧ್ಯಾಹ್ನ 12-00ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದಫ್ ತಂಡದಿಂದ ದಫ್ ಹಾಡು ಮತ್ತು ಬ್ಯಾರಿ ಹಾಡುಗಾರರ ತಂಡದಿಂದ ಹಾಡುಗಳ ಪ್ರಸ್ತುತಿ, ಸಂಜೆ 4-00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡುವರು. ಸಂಜೆ ಗಂಟೆ 6-30ಕ್ಕೆ ಇಸ್ಮಾಯಿಲ್ ಮೂಡುಶೆಡ್ಡೆ ಇವರ ನಿರ್ದೇಶನದಲ್ಲಿ ‘ಬ್ರೋಕರ್ ಪೋಕರ್’ ಬ್ಯಾರಿ ನಾಟಕ ಮತ್ತು ಗುರುಪುರದ ಎಂ.ಜಿ.ಎಂ. ತಂಡದಿಂದ ತಾಲೀಮು ಪ್ರದರ್ಶನ ನಡೆಯಲಿದೆ.

