ಬೆಳಗಾವಿ: ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 22-05-2023 ರಂದು ಪ್ರದರ್ಶನವಾದ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ತುಂಬಿದ ರಂಗಮಂದಿರದಲ್ಲಿಯ ಪ್ರೇಕ್ಷಕರಿಗೆ 90 ನಿಮಿಷಗಳು ಸತತವಾಗಿ ನಗಿಸುತ್ತಾ ಹಾಸ್ಯದ ಔತಣ ಕೊಡುವಲ್ಲಿ ಯಶಸ್ವಿಯಾಯಿತು.
ನಾಟಕದ ನಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ ಬೆಳಗಾವಿಯವರು ನಾಟಕದ ನಿರ್ದೇಶಕ ಡಾ.ಅರವಿಂದ ಕುಲಕರ್ಣಿ ಮತ್ತು ಶ್ರೀಮತಿ ಪ್ರತಿಭಾ ಕಳ್ಳಿಮಠ ಇವರನ್ನು ಸನ್ಮಾನಿಸಿ ನಾಟಕದ ಬಗ್ಗೆ ತುಂಬಾ ಅಭಿಮಾನದ ಮಾತುಗಳನ್ನು ಆಡಿದರು. “ತಮ್ಮ ಜೀವನದಲ್ಲಿ ಈ ರೀತಿಯ ಸತತವಾಗಿ ನಗಿಸುವ ಅತ್ಯುತ್ತಮವಾಗಿ ಅಭಿನಯಿಸಿದ ಮತ್ತು ನಿರ್ದೇಶನದ ನಾಟಕವನ್ನು ಪ್ರಥಮ ಬಾರಿ ನೋಡಿದ್ದೇನೆ” ಎಂದು ಹೇಳಿದರು. ಈ ನಾಟಕವನ್ನು ಬೇರೆ ಕಡೆಗೆ ಸಹ ಪ್ರದರ್ಶನಕ್ಕೆ ಅನುವು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಜೈಶೀಲಾ ಬ್ಯಾಕೋಡಿ ಮತ್ತು ಶ್ರೀಮತಿ ಶೈಲಜಾ ಭಿಂಗೆ ಅವರೂ ಸಹ ನಾಟಕದ ಉತ್ತಮ ಪ್ರದರ್ಶನ ಹಾಗೂ ಅಭಿನಯದ ಕುರಿತು ಮೆಚ್ಚಗೆಯ ಮಾತುಗಳನ್ನಾಡಿದರು. ಶೈಲಜಾ ಭಿಂಗೆ ಅವರು ಸತತವಾಗಿ ಎರಡನೇ ಸಲ ಈ ನಾಟಕ ನೋಡಿ ಆನಂದಿಸಿದ್ದಾಗಿ ಹೇಳಿದರು. ನಾಟಕದ ಪ್ರಾಯೋಜಕರಾದ ಅಭಿಷೇಕ ಅಲಾಯ್ಸ ಪ್ರೈ ಲಿ ಇದರ ಮಾಲಕರನ್ನು ಸನ್ಮಾನಿಸಲಾಯಿತು.
ನಿರ್ದೇಶನದ ಜೊತೆಗೆ ಈ ಸಲ ಮುದ್ದಣ್ಣನ ಪಾತ್ರ ಮಾಡಿದ ಡಾ. ಅರವಿಂದ ಕುಲಕರ್ಣಿ ಅವರ ಅಭಿನಯ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.
‘ರಂಗಸಂಪದ’
ಬೆಳಗಾವಿಯಲ್ಲಿ ಮರಾಠಿ ಹಾವಳಿ ನಡುವೆ ಕನ್ನಡ ನಾಟಕಗಳನ್ನು ಆಡಲು ಸಾಧ್ಯವೇ ಇಲ್ಲದಂತಹ ಕಾಲದಲ್ಲಿ ಬೆಳಗಾವಿಗೆ ಕಾಲಿಟ್ಟವರು ರಂಗಕರ್ಮಿ ಶ್ರೀ ಶ್ರೀಪತಿ ಮಂಜನಬೈಲು ಅವರು, ಆಗ 1978ರ ಕಾಲ ಅಂತಹ ಸಂದರ್ಭದಲ್ಲಿ ಕನ್ನಡ ನಾಟಕಗಳ ಮೂಲಕ ಕನ್ನಡ ನುಡಿಯ ಅಸ್ಮಿತೆಯನ್ನು ಕಟ್ಟುವ ಯತ್ನ ಆರಂಭಿಸಿದರು. ಆದಾಯಕರ ಅಧಿಕಾರಿ ಶ್ರೀ ಡಿ.ಟಿ. ಚೆನ್ನಕೇಶವಮೂರ್ತಿ ಅವರು ಕೈಜೋಡಿಸಿದರು. ಇವರ ಯಶಸ್ಸು 1978ರಲ್ಲಿ ‘ರಂಗಸಂಪದ’ ತಂಡದ ಸ್ಥಾಪನೆಗೆ ಕಾರಣವಾಯಿತು.
1978 ರಿಂದ 1981ರವರೆಗೆ ಪ್ರದರ್ಶಿಸಿದ ನಾಟಕಗಳು ಲಂಕೇಶರ ‘ತೆರೆಗಳು’ ‘ನನ್ನ ತಂಗಿಗೊಂದು ಗಂಡು ಕೋಡಿ’ ‘ಹಿಂಗೊಂದು ರಾಗ’ ‘ಪಾರ್ಟಿ’ ‘ಆನಿ ಬಂತಾನಿ’ ’ಖರೋ ಖರ’ ‘ಬದುಕ ಮನ್ನಿಸು ಪ್ರಭುವೆ’ ಮತ್ತು ಬಂಗಾರದ ಕೊಡ’ ಅಕಾಡಮಿ ಸಹಯೋಗದಲ್ಲಿ 1981ರ ಮೇನಲ್ಲಿ ಅಶೋಕ ಬಾದರದಿನ್ನಿ ಅವರ ನೇತೃತ್ವದಲ್ಲಿ 40 ದಿನಗಳ ರಂಗ ಕಾರ್ಯಾಗಾರ ನಡೆಸಲಾಯಿತು. ಆಗ ಅಕಾಡಮಿಯ ಅಧ್ಯಕ್ಷರಾಗಿದ್ದ ಡಾ. ಚಂದ್ರಶೇಖರ ಕಂಬಾರರು ಅಕಾಡಮಿಯ 5 ದಿನಗಳ ನಾಟಕೋತ್ಸವ ಮತ್ತು ಸರ್ವ ಸದಸ್ಯರ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಿದರು ನಾಟಕೋತ್ಸವದ ಹೊಣೆಯನ್ನು ‘ರಂಗ ಸಂಪದ’ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿತು.
1987ರ ಏಪ್ರಿಲ್‌ನಲ್ಲಿ ಸಾಂಗ್ಲಿಯಲ್ಲಿ ‘ಮರಾಠಿ ನಾಟ್ಯ ಸಮ್ಮೇಳನ’ದಲ್ಲಿ ಕನ್ನಡ ನಾಟಕ ಪ್ರದರ್ಶನದ ಅವಕಾಶ ಲಭ್ಯವಾದುದು, 1989ರಲ್ಲಿ ಗೋವಾದ ವಾಸ್ಕೋ, ಮಡಗಾಂವಗಳಲ್ಲಿ ನಡೆದ ಕದಂಬ ನಾಟಕೋತ್ಸವದಲ್ಲಿ ಕನ್ನಡ ನಾಟಕಗಳ ಪ್ರದರ್ಶನಗಳಿಂದ ಆರಂಭವಾಗಿ ಕನ್ನಡ ರಂಗಭೂಮಿಯ ಸಮೃದ್ಧ ಹಸಿರು ಪಲ್ಲವಿಸಿತು.
ರಂಗಸಂಪದವು 43 ವರ್ಷಗಳಿಂದ ನಿರಂತರವಾಗಿ ಕ್ರಿಯಾಶೀಲವಾಗಿದೆ. ಸಂಸ್ಥೆಯ ಈಗಿನ ಅಧ್ಯಕ್ಷ ಡಾ. ಅರವಿಂದ ಎಲ್ ಕುಲಕರ್ಣಿ ಜೊತೆಯಲ್ಲಿ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ವಾಮನ ಯಾಳಗಿ, ಪದ್ಮಾ ಕುಲಕರ್ಣಿ, ಶಿರೀಷ ಜೋಶಿ, ಇತರರು ಸಾಥ್ ನೀಡಿದ್ದಾರೆ.