ಕೋಟ : ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಉಸಿರು ಕೋಟ ಸಹಕಾರದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ದಿನಾಂಕ 02 ನವೆಂಬರ್ 2025ರಂದು ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕ ಡಾ. ಬಾಲಕೃಷ್ಣ ಶೆಟ್ಟಿ ಇವರು ಮಾತನಾಡಿ “ಒಬ್ಬ ಕವಿಯಾದವನು ಗುಣಗ್ರಾಹಿಯಾಗಿರಬೇಕು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರಬೇಕು. ಜೊತೆಗೆ ಇತರ ಕವಿಗಳ ಕವಿತೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಒಂದು ಪರಿಪಕ್ವವಾದಂತಹ ಕೃತಿ ಮೂಡಬಲ್ಲದು. ಆ ದಿಸೆ ಯಲ್ಲಿ ಎಲ್ಲ ಕವಿಗಳು ಜಾಗೃತ ರಾಗಬೇಕು” ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಕುಂದರ್ ಬಾರಿಕೆರೆಯವರು “ಇದೊಂದು ಅಪೂರ್ವವಾದ ಕಾರ್ಯಕ್ರಮ ಬೆಳಿಗ್ಗೆ 6-00 ಗಂಟೆಗೆ ಕವಿಗೋಷ್ಠಿ ನಡೆಯುತ್ತಿರುವುದು ಇದೇ ಮೊದಲ ಬಾರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮವನ್ನು ನಿರೂಪಿಸಿದರು. ಚೇಂಪಿ ದಿನೇಶ್ ಆಚಾರ್ಯ, ರವೀಂದ್ರ ಶೆಟ್ಟಿ ಕಾರ್ಯಕ್ರಮವನ್ನು ಸಂಘಟಿಸಿದರು.
ಬಳಿಕ ಕವಿಗಳಾದ ಅಲ್ತಾರು ನಾಗರಾಜ್, ಅಶೋಕ್ ತೆಕ್ಕಟ್ಟೆ, ಲಿಖಿತ ಶೆಟ್ಟಿ ಬೂದಾಡಿ, ಮಂಜುನಾಥ ಗುಂಡ್ಮಿ, ಮಂಜುನಾಥ ಮರವಂತೆ, ಮಂಜುನಾಥ ಕಾರ್ತಟ್ಟು ವಾಣಿಶ್ರೀ ಅಶೋಕ ಐತಾಳ್, ನಾಗೇಂದ್ರ ಆಚಾರ್ ಚಿತ್ರಪಾಡಿ, ರವಿಕಿರಣ್ ಕೋಟ, ಆಶಾ ನೇರಳಕಟ್ಟೆ, ಕೆ.ಜಿ. ಸೂರ್ಯನಾರಾಯಣ ಚಿತ್ರಪಾಡಿ, ಕುಸುಮಾವತಿ ಸಿ. ಶೆಟ್ಟಿ ನೇರಳಕಟ್ಟೆ, ಸುಪ್ರೀತಾ ಪುರಾಣಿಕ್, ತನುಜಾ ಎನ್. ಕೋಟೇಶ್ವರ, ಕಾ. ಶ್ರೀ ಶಾಂಭವಿ ರಂಜಿತ್ ಕಮಲಶಿಲೆ ಮೊದಲಾದವರು ಕವನವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ರವೀಂದ್ರ ಶೆಟ್ಟಿ ಮತ್ತು ಅನಂತಕೃಷ್ಣ ಐತಾಳ್ ಸಹಕರಿಸಿದರು.

