ಉಡುಪಿ : ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ 2024ನೇ ಸಾಲಿನ ಪ್ರಶಸ್ತಿಗೆ ತುಳುಭಾಷೆ ಹಾಗೂ ಸಂಸ್ಕೃತಿ ಚಿಂತಕ ಶ್ರೀ ಬೆನೆಟ್ ಜಿ. ಅಮ್ಮನ್ನ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ 20,000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಬೆನೆಟ್ ಜಿ. ಅಮ್ಮನ್ನ ಉಡುಪಿ ತಾಲೂಕಿನ ಪಾಂಗಾಳದವರು. ಅವರು 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ವಿಭಾಗದಲ್ಲಿ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ತುಳುನಾಡಿನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ವಿದೇಶಿಯರ ಕೊಡುಗೆಗಳು ಹಾಗೂ ತುಳುನಾಡು ಚರಿತ್ರೆ ಇವರ ಆಸಕ್ತಿಯ ಕ್ಷೇತ್ರಗಳು. ಇದಕ್ಕೆ ಸಂಬಂಧಿಸಿದ ಸಂಶೋಧನೆ, ದಾಖಲೀಕರಣ, ಹಸ್ತಪ್ರತಿ, ಸಂರಕ್ಷಣೆ, ಭಾಷಾಂತರ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೊಡುಗೆಯನ್ನು ನೀಡಿದ್ದಾರೆ.
‘ಚಿಗುರಿದ ಬದುಕು’ (ಕಿರು ಕಾದಂಬರಿ), ‘ಕ್ರೈಸ್ತರು ಮತ್ತು ಬಾಸೆಲ್ ಮಿಶನ್’, ‘ಜಾನ ಜೇಮ್ಸ್’, ‘ಬ್ರಿಗೆಲ್’, ‘ಬದ್‌ಕ್ ಬೊಕ್ಕ ಬರವು’, ‘ಕಾರ್ಕಳದಲ್ಲಿ ಕ್ರೈಸ್ತರು’- ಒಂದು ಅಧ್ಯಯನ ಮುಂತಾದವು ಇವರ ಪ್ರಕಟಿತ ಕೃತಿಗಳು. ‘ಕೋಟಿಚೆನ್ನಯ’, ‘ಅಪ್ರಕಟಿತ ತುಳು ಪಾಡ್ದನಗಳು’, ‘ತುಳು ವಿಕ್ರಮಾರ್ಕ ಕಥೆ’, ‘ತುಳು ಪಂಚತಂತ್ರ’, ‘ತುಳುಗಾದೆಗಳು’ ಮುಂತಾದ ಪುಸ್ತಕಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ. ಸಂಪಾದಕರಾಗಿಯೂ
ಇವರ ‘ಬಾಸೆಲ್ ಮಿಶನ್ ಪ್ರೆಸ್‌ನ ಪಿತಾಮಹ ಗಾಡ್ ಫ್ರೆಡ್ ವೈಗ್ಲೆ’, ‘ಉಡುಪಿಯ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನದ ಹೆಜ್ಜೆಗಳು’ ಮತ್ತು ‘ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತರು’, ‘ರೈಟ್ ರೆವೆರೆಂಡ್ ಡಾ. ಸಿ. ಡಿ. ಜತ್ತನ್ನ’ (ಬದುಕು ಸಾಧನೆ) ಕೃತಿಗಳು ಪ್ರಕಟಣೆಯ ಹಾದಿಯಲ್ಲಿವೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಶೋಧನೆ ಹಾಗೂ ಪತ್ರಾಗಾರ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಗಿದೆ. ಹಂಪಿ ಕನ್ನಡ ವಿ. ವಿ. ಹಾಗೂ ಸುದಾನ-ಕಿಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್, ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ 18ನೇ ಕರ್ನಾಟಕ ಹಸ್ತಪ್ರತಿ ಸಮ್ಮೇಳನ 2022ರಲ್ಲಿ ಇವರು ಸಮ್ಮಾನಿತರಾಗಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಡೆಯವರೆಂದೇ ಪ್ರಸಿದ್ಧರಾದ ನಂದಳಿಕೆ ಅಮ್ಮುಂಜೆಗುತ್ತು ಶೀನಪ್ಪ ಹೆಗ್ಗಡೆಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಗಾಂಧೀಜಿ ಚಳುವಳಿಯಲ್ಲಿ ಹಲವಾರು ಬಾರಿ ಕಾರಾಗೃಹ ವಾಸವನ್ನೂ ಅನುಭವಿಸಿದವರು. ಶ್ರೀಯುತರ ಹಲವಾರು ಕೃತಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ’ ಮತ್ತು ‘ಭೂತಾಳ ಪಾಂಡ್ಯರಾಯನ ಅಳಿಯಕಟ್ಟು’ ಮುಖ್ಯವಾದುವು. ಅವರ ಮಗ ಶ್ರೀ ಸೀತಾರಾಮ ಹೆಗ್ಡೆಯವರು (1943-2014) ಎಸ್. ಆರ್. ಹೆಗ್ಡೆ ಎಂದೇ ಪರಿಚಿತರು. ಇವರ ಮಡದಿ ಇಂದಿರಾ ಹೆಗ್ಡೆಯವರೊಂದಿಗೆ ಸೇರಿ ರಚಿಸಿದ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ವಿದ್ವಾಂಸರ ಮೆಚ್ಚುಗೆ ಗಳಿಸಿದೆ. ಇವರು ಸೈನಿಕರಾಗಿ, ಪತ್ರಿಕಾ ನಿರ್ವಹಣಾಧಿಕಾರಿಯಾಗಿ, ತುಳುಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಜಂಟಿ ಹೆಸರಲ್ಲಿ ಈ ಪ್ರಶಸ್ತಿ.