ಬೆಂಗಳೂರು: ಖ್ಯಾತ ಕಲಾವಿದ ಗಣೇಶ್ ಕೃಷ್ಣ ಧಾರೇಶ್ವರ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ದಿನಾಂಕ 16-06-2023 ರಿಂದ 21-06-2023ರ ವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನಗೊಂಡಿತು.
ಈ ಕಲಾ ಸೃಷ್ಟಿಯ ಬಗ್ಗೆ ನಮಗೆ ಕುತೂಹಲವಿರುವಂತೆಯೇ ಕಲಾವಿದನ ಬಗ್ಗೆಯೂ ಕೂಡ ಸಾಮಾನ್ಯರಲ್ಲಿ ಸಹಜವಾಗಿ ಕುತೂಹಲವಿರುತ್ತದೆ. ಕಲಾವಿದನೂ ಕೂಡ ಒಬ್ಬ ಸೃಷ್ಟಿಕರ್ತನಂತೆಯೇ ಗೋಚರಿಸುತ್ತಾನೆ. ಕಲಾವಿದ ನಿರ್ಮಿಸುವ ಕಲಾಕೃತಿಗಳ ವಿವಿಧ ವಿಸ್ಮಯಗಳನ್ನು ಅವಲೋಕಿಸಿದಾಗ ನೋಡುಗರಿಗೆ ಸಹಜವಾಗಿ ಕುತೂಹಲ ಕೆರಳುಸುವುದರಲ್ಲಿ ಆಶ್ಚರ್ಯವೇನಿಲ್ಲ. ಹೀಗೇ ಇದು ನಮ್ಮ ನಡುವೆಯೇ ಬೆಳೆದ ಕಲಾವಿದನ ಸ್ವರೂಪದ ಬಗ್ಗೆ ಕುತೂಹಲ ಮತ್ತು ಕಲಾಕೃತಿಯ ಬಗ್ಗೆ ಅವಿನಾಭಾವ ಸಂಬಂಧ ಮೂಡುವುದು. ಕಲಾಕೃತಿಗಳಿಗೆ, ದೃಶ್ಯ ಪ್ರಪಂಚಕ್ಕೆ ಹತ್ತಿರವಾದಾಗ ಅಂತರಂಗದಲ್ಲಿ ಅಲೌಕಿಕ ಆನಂದದ ಅನುಭವವಾಗುವುದು.
ಈ ನಿಟ್ಟಿನಲ್ಲಿ ಶ್ರೀ ಗಣೇಶ ಧಾರೇಶ್ವರರ ಕಲಾಕೃತಿಗಳು ನೋಡುಗರನ್ನು ಚಿಂತನೆಗೆ ಹಚ್ಚುವ ಮತ್ತು ಕಲಾಕ್ಷೇತ್ರದ ಮೇಲೆ ಪರಿಣಾಮ ಬೀರುವ ಕಲಾಕೃತಿಗಳಾಗಿ ಗೋಚರಿಸುತ್ತವೆ. ಕಲಾಪ್ರಯೋಗಗಳು ವಿಭಿನ್ನ ರೀತಿಯಲ್ಲಿ ತೆರೆದು ಕೊಳ್ಳುತ್ತಿರುವ ಮತ್ತು ಬದಲಾಗುತ್ತಿರುವ ಒಲವು ನಿಲುವುಗಳ ವೈವಿಧ್ಯತೆಯಿಂದಾಗಿ ಹೊಸ ಅನುಭವಗಳು ಹುಟ್ಟಿಕೊಂಡು ದೃಶ್ಯ ಪ್ರಜ್ಞೆಯ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಿವೆ.
ಮಣ್ಣು, ಮರ, ಕಲ್ಲು, ಲೋಹ, ಫೈಬರ್, ಕಾಗದ, ಬಟ್ಟೆ, ಚರ್ಮ, ಕ್ಯಾನ್ವಾಸ್ ಪ್ರಕೃತಿಯಲ್ಲಿನ ಸಂಪತ್ತನ್ನು ಕಲಾಸಂಪತ್ತಾಗಿ ಉಪಯೋಗಿಸಿರುವುದು ಕಲಾವಿದನ ಅಂತ:ಸತ್ವ ಮತ್ತು ವಿವಿಧ ಅಭಿರುಚಿಗಳಿಗೆ ಹಿಡಿದ ಕನ್ನಡಿಯಾಗಿದೆ. ಕೈಯಲ್ಲಿ ವೃಕ್ಷ ಹಿಡಿದು ಧ್ಯಾನಸ್ಥಿತಳಾದ ಪ್ರಕೃತಿ ದೇವತೆಗೆ ತನ್ನೊಡಲಿನ ಜೀವಿಗಳ ಭಯಾನಕ ಭವಿಷ್ಯ ನೆನೆದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಶಿಲ್ಪ ಗಮನ ಸೆಳೆಯುತ್ತದೆ.
ಸಹನೆ, ತಾಳ್ಮೆ ಕಾಯುವಿಕೆ ಇರಬೇಕು. ಬೀಜ ಉತ್ತು, ಬಿತ್ತು, ನೆಟ್ಟು ಬೆಳೆಯುವ ಹಾಗೆ ಕಾಲ ಬೇಕೆ ಬೇಕು ಪ್ರಕೃತಿಯು ತನ್ನದೇ ಕಾಲ ತೆಗೆದುಕೊಳ್ಳುವ ಹಾಗೆ ಕಾಲ ಎನ್ನುವುದು ನಮ್ಮ ಇಚ್ಛೆಗೆ ಮೀರಿದ್ದು. ಕಾಯುವಿಕೆಗಿಂತ ತಪವು ಇಲ್ಲ. ಹಾಗೆ ನಮ್ಮ ಆಸೆಗಳು ಕೂಡ ಮೊಳಕೆಯೊಡೆದು ಪ್ರೇರೇಪಿಸುತ್ತಲೇ ಇರುತ್ತದೆ. ಅದಕ್ಕೆ ಸಹನೆ ಬೇಕು. ಸಹನೆ ದೌರ್ಬಲ್ಯ ಅಲ್ಲ. ಈ ದಿಶೆಯಲ್ಲಿ Sprouts of roots ಕಲಾಕೃತಿ ನೋಡುಗನನ್ನು ಹಿಡಿದಿಡುತ್ತದೆ. ಆಕರ್ಷಣೆಯ ಈ ಜಗತ್ತಿನಲ್ಲಿ ಯಾವತ್ತೂ ಕ್ರಿಯಾಶೀಲರಾಗಿ ಸದಾ ಹುಡುಕಾಟ ನಮ್ಮದು ಎನ್ನುವ “Finding my pearl” Installation ನಿಮ್ಮನ್ನು ಎದುರುಗೊಳ್ಳುತ್ತದೆ.
ಮೌನ ಚಿನ್ನ. ಮೌನದ ಮಹತ್ವ ತಿಳಿಸುವ ಹಾಗೆ, ನಿಶ್ಯಬ್ದವು ಅಷ್ಟೇ ಮುಖ್ಯ ಅನ್ನುವ ಹಾಗೆ 36 ಡಗ್ಗಾ, 56 ತಬಲಾ ಸಂಯೋಜನೆಯ “Rhythm Infinity” ಕಲಾಕೃತಿಯಿಂದಾಗಿ ಇಡಿ ಗ್ಯಾಲರಿಯಲ್ಲಿ ಸಂಗೀತದ ಅಲೆ ಇದೆ ಎನ್ನುವ ಹಾಗೆ ಭಾಸವಾಗುವಂತಹುದು.
ಕುಂಚದ ಎಳೆತ ಸೆಳೆತ ಮತ್ತು ರೇಖೆಗಳಿಂದ ಕೂಡಿದ ನೂರಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳು, ನೇಯ್ಗೆಯ ಕಲಾಕೃತಿಗಳು ಗಮನ ಸೆಳೆಯುತ್ತದೆ. ಮರದ 15 ಖುರ್ಚಿಗಳಲ್ಲಿ ಮನುಷ್ಯನ ಬದುಕಿನ ಅವಸ್ಥೆಗಳು ಮತ್ತು ಷೋಡಶ ಕರ್ಮಗಳು. ಈ ಬಂಧನದಿಂದ ಬಿಡುಗಡೆ ಪಡೆಯುವ ಕೊನೆಯಲ್ಲಿ ಪ್ರಕೃತಿಯೊಂದಿಗೆ ಲೀನವಾಗುವ cycle of life ಪ್ರತಿಷ್ಠಾಪನಾ ಕಲಾಕೃತಿ ಬದುಕಿನ ಭಾವದಲ್ಲಿ ತೇಲುವಂತೆ ಮಾಡಿದೆ. ಬಳಸುವ Turning Inward, Elements, On the way, Equilibrium ಕಲಾಕೃತಿಗಳು ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ಬಳಸುವ ಸಾಮಗ್ರಿಗಳಿಂದ ಹಲವು ಚಿಂತನೆಗಳಿಂದ ಎಷ್ಟೆಲ್ಲ ಚೆಲುವು, ಲಾಲಿತ್ಯ,ಬೆಡಗು,ತೋರಿಸಬಹುದೋ ಅಷ್ಟನ್ನು ಕಲಾಕೃತಿಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹೊರ ನೋಟದ ಚೆಲುವಿನಷ್ಟೆ ಆಂತರಿಕ ಸೊಗಸು ಕೂಡ ಮಹತ್ವದ್ದಾಗಿದೆ. ಕಲಾತಂತ್ರಗಳ ಮೇಲೆ ಕಲಾವಿದನಿಗೆ ಇರುವ ಹಿಡಿತ ನೋಡುಗರಿಗೆ ತೃಪ್ತಿಯನ್ನು ನೀಡುತ್ತದೆ.
- ಗಣಪತಿ ಎಸ್. ಹೆಗ್ಡೆ
ಕಲಾವಿದ ಗಣೇಶ್ ಕೃಷ್ಣ ಧಾರೇಶ್ವರ
1981ರಲ್ಲಿ ಶಿರಸಿಯಲ್ಲಿ ಜನಿಸಿದ ಗಣೇಶ್ ಕೃಷ್ಣ ಧಾರೇಶ್ವರ ಇವರು ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ದಾವಣಗೆರೆಯ ಲಲಿತ ಕಲಾ ವಿಶ್ವವಿದ್ಯಾನಿಲಯದಲ್ಲಿ ಪಡೆದರು. ನವ್ಯ ಸಮಕಾಲೀನ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು 2019ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಅನ್ಬೌಂಡ್ ವಿಷನ್’ ಹಾಗೂ ಮೈಸೂರಿನ ರವಿವರ್ಮ ಚಿತ್ರಕಲಾ ಸಂಸ್ಥೆಯಲ್ಲಿ ‘ಅನ್ಬೌಂಡ್ ವಿಷನ್ -2’ ಎಂಬ ಶೀರ್ಷಿಕೆಯಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಚಿತ್ರಕಲೆಗಳು 2020ರಲ್ಲಿ ನವ ದೆಹಲಿಯ ಲಲಿತಕಲಾ ಅಕಾಡಮಿಯ 60ನೇ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ, ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡಮಿಯ 46 ಮತ್ತು 47ನೇ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ, 2022ರ ಕಲ್ಕತ್ತಾ ಸಿನಿ ಅವಾರ್ಡಿನಲ್ಲಿ, ಬಾಂಗ್ಲಾ ದೇಶದ 19ನೇ ಎಷ್ಯನ್ ಆರ್ಟ್ ಬಿಯನೇಲ್ ಹಾಗೂ 2023ರಲ್ಲಿ ದೆಹಲಿಯ ಲಲಿತಕಲಾ ಅಕಾಡಮಿಯ 63ನೇ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟಿದೆ. ಬೆಂಗಳೂರಿನ ಲಲಿತಕಲಾ ಅಕಾಡಮಿ ಏರ್ಪಡಿಸಿದ ಯುವ ಕಲಾಮೇಳ, ಕನ್ನಡ ಕಾವ್ಯಕುಂಚ ಸಂಚಯ 2003, ಹೊಸದುರ್ಗದ 11ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಕಲಾ ಪ್ರತಿಭೋತ್ಸವ, ಬೆಂಗಳೂರು ಹಬ್ಬ ಮತ್ತು ದಾವಣಗೆರೆಯ ಯುವ ಚಿತ್ರಕಲಾ ಶಿಬಿರ ಹೀಗೆ ರಾಜ್ಯದ ನಾನಾ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
2003-04ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್) ಪದವಿಯನ್ನು ಚಿತ್ರಕಲೆಯಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂ ಕ್ ನಲ್ಲಿ ತೇರ್ಗಡೆ, ವಿಶ್ವವಿದ್ಯಾನಿಲಯ ಲಲಿತ ಕಲಾ ಕಾಲೇಜು ದಾವಣಗೆರೆ ಇಲ್ಲಿ ‘ಉತ್ತಮ ಪ್ರತಿಕೃತಿ ಪ್ರಶಸ್ತಿ’ (ಬೆಸ್ಟ್ ಪೋಟ್ರೈಟ್ ಅವಾರ್ಡ್), ‘ಯುವ ಕಲಾಮೇಳ ಪ್ರಶಸ್ತಿ’ 2003, 2003ರ ವಿಭಾಗ ಮಟ್ಟದ ‘ಕಲಾ ಪ್ರತಿಭೋತ್ಸವ ಪ್ರಶಸ್ತಿ’ ಗಳಿಸಿದ್ದು ಇವರ ಪ್ರತಿಭೆಗೆ ಸಂದ ಗೌರವ