ಬೆಂಗಳೂರು : ಬೆಂಗಳೂರಿನ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ (ರಿ) ಕೊಡಮಾಡುವ 2023ರ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 14-03-2024 ರಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ನಡೆಯಲಿದೆ.
ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಬಿ.ಎಂ. ಹನೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಿಮರ್ಶಕರಾದ ಶ್ರೀ ಎಸ್.ಆರ್. ವಿಜಯಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಯಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, 2023ರ ‘ಭರತ ಕಲ’ ಕಾದಂಬರಿ ರಚನೆಗಾಗಿ ಡಾ. ಆರ್. ಸುನಂದಮ್ಮ ಇವರಿಗೆ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸ್ಪರ್ಧೆಯ ತೀರ್ಪುಗಾರರರಾದ ಖ್ಯಾತ ಕಾದಂಬರಿಕಾರ ಶ್ರೀ ಕಾ.ತ. ಚಿಕ್ಕಣ ತೀರ್ಪಿನ ಬಗ್ಗೆ ಮಾತನಾದಲಿದ್ದು, ಹಿರಿಯ ಕಾದಂಬರಿಕಾರರಾದ ಶ್ರೀ ದ್ವಾರನಕುಂಟೆ ಪಾತಣ್ಣ ಉಪಸ್ಥಿತರಿರುವರು.
ಪ್ರೊ.ಆರ್.ಸುನಂದಮ್ಮ :
22-08-1960 ರಲ್ಲಿ ಕೋಲಾರ ಜಿಲ್ಲೆಯ ವೆಂಕಟಾಪುರ ಗ್ರಾಮದಲ್ಲಿ ರಾಮಯ್ಯ ಹಾಗೂ ನಾರಾಯಣಮ್ಮ ದಂಪತಿಗಳಿಗೆ ಜನಿಸಿದ ಪ್ರೊ. ಆರ್. ಸುನಂದಮ್ಮ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದುಕೊಂಡರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಎಂ. ಎ. ಪದವಿಯನ್ನು ಪಡೆಡಿದ್ದಾರೆ. ಯು. ಜಿ. ಸಿ. ಸಂಶೋಧನಾ ವೇತನ ಪಡೆದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ‘ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು – ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ಕೈಗೊಂಡು ಪಿ. ಎಚ್. ಡಿ. ಪದವಿ ಪಡೆದರು.
ಯು.ಜಿ.ಸಿ. ವಿಶೇಷ ನೆರವು ಯೋಜನೆಯಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಯೋಜಕರಾಗಿ 4 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ, ರೀಡರ್ ಆಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾನಿಯಲದಲ್ಲಿ ಉತ್ತಮ ಆಡಳಿತಗಾರರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜಕಿಯಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕಿಯಾಗಿ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕಿಯಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿರಾಗಿ, ಆರ್ಥಿಕ ಅಧಿಕಾರಿಯಾಗಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಸಚಿವರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರ ‘ಪರಿವರ್ತನೆ’ ಎಂದ ಕತೆ, ‘ಲೇಬರ್ ವಾರ್ಡಿನಲ್ಲೊಂದು ದಿನ’ ಹಾಗೂ ‘ನೆತ್ತಿ ಸುಟ್ಟ ಕಾಲ’ ಎಂಬ ಕವನ ಸಂಕಲನ, ‘ಮಹಿಳಾ ಸಂಸ್ಕೃತಿ’, ‘ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು’, ‘ಸಂಗಾತಿ ರೂವ್ವ ಬರೆಸೀನಾ’ ಮತ್ತು ‘ಕುರುಬ ಮಹಿಳಾ ಸಂಸ್ಕೃತಿ’ ಎಂಬ ಸಂಶೋಧನಾ ಪ್ರಬಂಧಗಳ ಸಂಗ್ರಹ, 5 ಸಂಪುಟಗಳ ಮಹಿಳಾ ಸಾಂಸ್ಕೃತಿಕ ಕೋಶ’ ಹಾಗೂ ‘ಮಹಿಳಾ ಜನಪದ ಸಾಹಿತ್ಯ ಚರಿತ್ರೆ’ ಹಾಗೂ ‘ಮಹಿಳೆ-ಕಾನೂನು-ಪರಿಹಾರ’ ಎಂಬ ಸಂಪಾದಿಸಿರುವ ಕೃತಿಗಳನ್ನು ರಚಿಸಿದ್ದಾರೆ.
ಇವರ ಸಾಹಿತ್ಯ ಕೃಷಿಗೆ ಎಚ್. ಎಂ. ಟಿ. ಗಡಿಯಾರಗಳ ‘ಉದಯೋನ್ಮುಖ ಲೇಖಕ’ರ ಪ್ರಶಸ್ತಿ, ‘ದ್ವಿತ್ವ’ ಕಾದಂಬರಿಗೆ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ, ಎನ್. ಎಸ್. ಎಸ್. ಕಾರ್ಯಕ್ರಮ ಸಂಯೋಜಕರ ‘ರಾಜ್ಯ ಪ್ರಶಸ್ತಿ’, ಇಂದಿರಾ ‘ಗಾಂಧೀ ವಿಶಿಷ್ಟ ಸೇವಾ ಪ್ರಶಸ್ತಿ’, ಸಮಾಜ ಸೇವೆಗಾಗಿ ಬೆಂಗಳೂರಿನ ಸುವರ್ಣಮುಖಿಧಾಮದವರಿಂದ ‘ಸುವರ್ಣಮುಖಿ’ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್‌ನ ‘ಸಾವಿತ್ರಿ ಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ,’ಕನಕ ಶ್ರೀ’ ಪ್ರಶಸ್ತಿ ಹಾಗೂ ‘ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ’ ಸಂದ ಗೌರವಗಳು.