ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ‘ಸಿನ್ಸ್ 1999 ಶ್ವೇತಯಾನ-58’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದ ಭಾವಗೀತೆ ಹಾಗೂ ಭಕ್ತಿ ರಸಮಂಜರಿ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2024ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ದ್ರಾವಿಡ ಬ್ರಾಹ್ಮಣ ಪರಿಷತ್ ಇದರ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ ಮಾತನಾಡಿ “ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿರುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ದೇಗುಲದ ಸೋಣೆ ಆರತಿ ಸಂದರ್ಭ ಭಕ್ತಿ ಸುಧೆಯನ್ನು ಹರಿಸಿ ಮನಸ್ಸನ್ನು ಹಗುರಾಗಿಸಿ, ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಪರಿಪಾಟ ಆರೋಗ್ಯಕರ ಲಕ್ಷಣ. ಭಕ್ತಿ ಮಾರ್ಗವು ಮನಸ್ಸಿನ ತುಡಿತಗಳನ್ನು, ಜಂಜಾಟಗಳನ್ನು, ನೋವುಗಳನ್ನು ಮರೆಸುತ್ತದೆ. ಭಕ್ತಿ ಮಾರ್ಗದಲ್ಲಿ ಆನಂದವಿದೆ, ತನ್ಮಯತೆಯ ಭಕ್ತಿಯು ಸರ್ವವನ್ನೂ ಸಮತೋಲನದಲ್ಲಿರಿಸುತ್ತದೆ.” ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ “ಸಂಸ್ಥೆಯ 25ನೇ ವರ್ಷದ ಕಾರ್ಯಕ್ರಮದ ಉದ್ಘಾಟನೆ ಅವಿಸ್ಮರಣೀಯ. ವರ್ಷಕ್ಕೆ 108 ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಹೊರಟ ಸಂಸ್ಥೆ 58 ಕಾರ್ಯಕ್ರಮ ಪೂರೈಸಿಕೊಂಡು ಸಮಾರೋಪಕ್ಕೆ ಅದ್ಧೂರಿಯ ಸಿದ್ಧತೆಯಲ್ಲಿ ತೆರೆದುಕೊಂಡಿದೆ. ಇಂತಹ ಸಂಸ್ಥೆಯನ್ನು ಕಲಾ ಪೋಷಕರು ಬೆಳೆಸಬೇಕು.” ಎಂದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಬೆಟ್ಟಿನ ಮನೆ ವಾದಿರಾಜ ಹತ್ವಾರ್, ಅಮೃತ್ ಕುಮಾರ್ ತೌಳ, ಗಾಯಕ ಜಗದೀಶ್ ಶಣೈ, ಗಾಯಕ ರಾಘವೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಆರ್. ವಿ. ಮೆಲೋಡೀಸ್ ಕೋಟೇಶ್ವರ ತಂಡದವರಿಂದ ಭಾವಗೀತೆ ಹಾಗೂ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.