ಕೋಟೇಶ್ವರ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಂಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಯ ಸಹಕಾರದೊಂದಿಗೆ ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಶ್ವೇತಯಾನ’ ಸರಣಿ ಕಾರ್ಯಕ್ರಮದ ಅಂಗವಾಗಿ 9ನೇ ಕಾರ್ಯಕ್ರಮ ‘ಭಕ್ತಿ ಭಾವಾಮೃತ- ಯಕ್ಷಗಾನಾಮೃತ’ ಜುಗಲ್‌ಬಂದಿ ಕಾರ್ಯಕ್ರಮವು ದಿನಾಂಕ 15-03-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಕಲಾಪೋಷಕರಾದ ಸತ್ಯನಾರಾಯಣ ಮಂಜ ಮಾತನಾಡಿ “ಸಂಸ್ಥೆಯು ವಿಭಿನ್ನವಾದ ಕಾರ್ಯಕ್ರಮದಲ್ಲಿ ತೊಡಗಿದಾಗ ಉತ್ತುಂಗಕ್ಕೇರುವಲ್ಲಿ ಹೆಚ್ಚು ಫಲಕಾರಿಯಾಗುತ್ತದೆ. ಹಿಂದೂಸ್ಥಾನಿ ಸಂಗೀತದೊಂದಿಗೆ ಯಕ್ಷ ಸಾಹಿತ್ಯದ ಗಾನ ಲಹರಿ ಬೆರತಾಗ ಔನತ್ಯವನ್ನು ಸಾಧಿಸುವುದಕ್ಕಾಗುತ್ತದೆ. ಪ್ರಸಿದ್ಧರಾದ ಪಂಡಿತ್ ನಾಗಭೂಷಣ ಹೆಗಡೆಯವರ ಸಂಗೀತ, ಯಕ್ಷ ಗಾಯನದೊಂದಿಗೆ ಬೆರೆತು ಹೊಸ ಹುಡುಕಾಟ ಮತ್ತು ಹೆಚ್ಚು ಹೆಚ್ಚು ಯೋಚಿಸುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ‘ಶ್ವೇತಯಾನ’ ಕಾರ್ಯಕ್ರಮದುದ್ದಕ್ಕೂ ಹೊಸ ಹೊಸ ಸಾಧ್ಯತೆಯನ್ನು ಶೋಧಿಸಲಿ.” ಎಂದು ಶುಭಹಾರೈಸಿದರು.
ಕೋಟೇಶ್ವರ ಮಂಜರ ಮನೆಯ ಗೃಹಪ್ರವೇಶದ ಸಂದರ್ಭ ‘ಜುಗಲ್‌ಬಂದಿ’ ಕಾರ್ಯಕ್ರಮ ನಡೆಸಲು ಅನುವುಮಾಡಿಕೊಟ್ಟ ರಮೇಶ್ ಮಂಜ ಹಾಗೂ ಸರೋಜ ದಂಪತಿಗಳನ್ನು ಆರ್.ಎಸ್.ಎಸ್. ಮುಖಂಡ ಸುಬ್ರಹ್ಮಣ್ಯ ಹೊಳ್ಳ ಗೌರವಿಸಿದರು.
ಕಾರ್ಯದರ್ಶಿ ವೆಂಕಟೇಶ ವೈದ್ಯ, ಭಾಗವತರಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುಜನ್ ಹಾಲಾಡಿ, ರವಿ ಕಾರಂತ್, ರಾಮಕೃಷ್ಣ ಆಚಾರ್ಯ ಬಸ್ರೂರು, ಶಂಕರನಾರಾಯಣ ಉಪಾಧ್ಯಾಯ, ಪಂಚಮಿ ವೈದ್ಯ ಮತ್ತು ಮಂಜರ ಕುಟುಂಬದವರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭಕ್ತಿ ಭಾವಾಮೃತ- ಯಕ್ಷಗಾನಾಮೃತ ‘ಜುಗಲ್‌ಬಂದಿ’ ರಂಗದಲ್ಲಿ ಪ್ರಸ್ತುತಿಗೊಂಡಿತು.