ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 08-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅರ್ಚನ ಹೆಚ್.ಆರ್. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವಿದುಷಿ ಶ್ರೀಮತಿ ಅರ್ಚನಾರವರು ತಮ್ಮ 6ನೇ ವಯಸ್ಸಿನಲ್ಲೇ ಗುರುಗಳಾದ ಶ್ರೀರಂಜಿತಾ ನಾಗೇಶ್ ಹಾಗೂ ಜಿ.ಎಸ್. ನಾಗೇಶ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯದ ಕಲಿಕೆ ಆರಂಭಿಸಿದ್ದು, ನಂತರ ವಿವಿಧ ಕಾರ್ಯಾಗಾರಗಳ ಮೂಲಕ ತಮ್ಮ ಕಲಿಕೆ ಹಾಗೂ ಆಸಕ್ತಿಯನ್ನು ಮುಂದುವರಿಸುತ್ತಿದ್ದಾರೆ. 2016ರಲ್ಲಿ ತಮಿಳ್ ಯೂನಿವರ್ಸಿಟಿಯಿಂದ ಡಿಸ್ಟೆನ್ಸ್ ಎಜುಕೇಶನ್ ಮೂಲಕ ಭರತನಾಟ್ಯದಲ್ಲಿ ಮಾಸ್ಟರ್ಸ್ ಪದವಿಯನ್ನು ಹೊಂದಿದ್ದಾರೆ. ಇದರಲ್ಲಿ “ದೇವದಾಸಿ ವ್ಯವಸ್ಥೆ ಮತ್ತು ಅದು ಕಲಾರೂಪಕ್ಕೆ ಹೇಗೆ ಸಹಾಯ ಮಾಡಿತು” ಎಂಬ ಸಂಶೋಧನಾ ಕೆಲಸವನ್ನು ಸಲ್ಲಿಸಿದ್ದಾರೆ. 2014ರಲ್ಲಿ ರಂಗಪ್ರವೇಶವನ್ನು ಮುಗಿಸಿ, 2018ರಲ್ಲಿ ಗುರುಗಳಾದ ಕಿರಣ್ ಸುಬ್ರಮಣ್ಯಮ್ ಮತ್ತು ಸಂದ್ಯಾ ಕಿರಣ್ ಇವರ ಮಾರ್ಗದರ್ಶನದಲ್ಲಿ ಪೂರ್ಣ ಪ್ರಮಾಣದ ‘ಮಾರ್ಗಂ’ ಎಂಬ ಸೋಲೋ ಪ್ರದರ್ಶನವನ್ನು ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದು, ಐ.ಐ ಸಿ.ಆರ್.ನ ಎಂಪಾನೆಲ್ಡ್ ಕಲಾವಿದೆಯಾಗಿಯೂ ಸಹ ಆಯ್ಕೆಯಾಗಿದ್ದಾರೆ. ಕಳೆದ 7 ವರ್ಷಗಳಿಂದ ರಸಿಕ ಸಂಸ್ಥೆಯ ಮುಖ್ಯ ನೃತ್ಯ ಸಮೂಹದ ಭಾಗವಾಗಿ ಗುರುಗಳ ಎಲ್ಲಾ ಪ್ರಮುಖ ನೃತ್ಯರೂಪಕದಲ್ಲಿ ಭಾಗವಹಿಸಿದ್ದು, ಭಾರತದ ಹಲವಾರು ಕಡೆ ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಇವರು ಟಿ.ಸಿ.ಎಸ್. ಹಾಗೂ ಐ.ಬಿ.ಎಂ.ನ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ನೃತ್ಯ ಸಂಯೋಜನೆ ಮಾಡಿರುವ ಕೀರ್ತಿ ಇವರದ್ದಾಗಿದೆ. ಪ್ರಸ್ತುತ ಐ.ಬಿ.ಎಂ. ಸಂಸ್ಥೆಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದಾರೆ.