ಬೆಂಗಳೂರು : ಖ್ಯಾತ ‘ಕಲಾನಿಧಿ ಆರ್ಟ್ಸ್ ಅಕಾಡೆಮಿ’ಯ ಹಿರಿಯ ನೃತ್ಯಗುರು ವಿದುಷಿ ಪವಿತ್ರ ಶ್ರೀಧರ್ ನೃತ್ಯ ಕಲಾವಿದೆ, ಗಾಯಕಿ, ನೃತ್ಯ ಸಂಯೋಜಕಿ ಮತ್ತು ನಟುವನ್ನಾರ್ ಆಗಿ ಅಪಾರ ಜ್ಞಾನ- ನೃತ್ಯ ನೈಪುಣ್ಯವನ್ನು ಹೊಂದಿರುವ ಅವರು, ನೃತ್ಯಕ್ಷೇತ್ರದಲ್ಲಿ ಬದ್ಧತೆಯ ಶಿಕ್ಷಣ ಮತ್ತು ಅಪೂರ್ವ ನೃತ್ಯಸಂಯೋಜನೆಗೆ ಹೆಸರಾದವರು.
ಇವರ ನುರಿತ ಗರಡಿಯಲ್ಲಿ ರೂಹುಗೊಂಡ ನೃತ್ಯ ಕಲಾಶಿಲ್ಪ ಕುಮಾರಿ ವಿಶ್ವನೇತ ಡಿ. ಬಹು ಶಿಸ್ತಿನ ಹಾಗೂ ಪರಿಶ್ರಮ- ಬದ್ಧತೆಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಪ್ರಾಮಾಣಿಕ ವಿದ್ಯಾರ್ಥಿನಿ. ಶ್ರೀ ಧನಶೇಖರ್ ಸಿ. ಮತ್ತು ಹೇಮಾ ದಂಪತಿಗಳ ಮಗಳಾದ ವಿಶ್ವನೇತ ಹದಿನಾಲ್ಕು ವರ್ಷದ ಕನ್ನಿಕೆಯಾಗಿದ್ದು, ಕಳೆದ ಆರು ವರ್ಷಗಳಿಂದ ನೃತ್ಯ ಕಲಿಯುತ್ತಿದ್ದು, ಈಗಾಗಲೇ ತನ್ನ ’ಗೆಜ್ಜೆಪೂಜೆ’ಯನ್ನು ನೆರವೇರಿಸಿಕೊಂಡಿದ್ದಾಳೆ. ಒಂಭತ್ತನೆಯ ತರಗತಿಯಲ್ಲಿ ಓದುತ್ತ ಇರುವ ಇವಳು, ಓದಿನಲ್ಲಿ ಮುಂದಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತಳಾಗಿದ್ದು, ಇಸ್ಕಾನ್ ನಲ್ಲಿ ಭಗವದ್ಗೀತಾ ಸ್ಪರ್ಧೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆದಿರುವುದಲ್ಲದೆ, ಅಬಾಕಸ್ ಫೆಸ್ಟ್ ನಲ್ಲಿ ಡಿಸ್ಟಿಂಕ್ಷನ್, ವೇದಿಕ್ ಪಠಣದಲ್ಲಿ ವಿದ್ವತ್, ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ಶಿಕ್ಷಣ ಮತ್ತು ಎನ್.ಎಸ್.ಓ. ಮತ್ತು ಐ.ಇ.ಓ. ಮುಂತಾದ ಅಕಾಡೆಮಿಕ್ ಸ್ಪರ್ಧೆಗಳಲ್ಲಿ ಮೊದಲಿಗಳಾಗಿದ್ದಾಳೆ. ನೃತ್ಯದ ಬಗ್ಗೆ ಅದಮ್ಯ ಒಲವು ಇರುವ ಇವಳು, ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿದ್ದು, ತಾನು ನೃತ್ಯ ಕಲಿಯುತ್ತಿರುವ ‘ಕಲಾನಿಧಿ ಆರ್ಟ್ಸ್ ಅಕಾಡೆಮಿ’ಯ ಎಲ್ಲ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ.





ಬಹುಮುಖ ಪ್ರತಿಭಾನ್ವಿತಳಾದ ಈ ಉದಯೋನ್ಮುಖ ನೃತ್ಯ ಕಲಾವಿದೆ ದಿನಾಂಕ 01 ಮಾರ್ಚ್ 2026ರ ಭಾನುವಾರ ಸಂಜೆ 6-00 ಗಂಟೆಗೆ ಬೆಂಗಳೂರು ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿದ್ಯುಕ್ತವಾಗಿ ತನ್ನ ‘ಭರತನಾಟ್ಯ ರಂಗಪ್ರವೇಶವನ್ನು’ ನೆರವೇರಿಸಿಕೊಳ್ಳಲಿದ್ದಾಳೆ. ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಪವಿತ್ರ ಶ್ರೀಧರ್, ಹಾಡುಗಾರಿಕೆ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣ, ಮೃದಂಗ ವಾದನ ವಿದ್ವಾನ್ ಧನುಷ್ ನಟಂಪಳ್ಳಿ, ವೀಣಾ ವಾದನ ವಿದ್ವಾನ್ ಶ್ರೀಕಾಂತ್ ನಿಟ್ಟೂರು, ಕೊಳಲು ವಾದನ ವಿದ್ವಾನ್ ಸ್ಕಂದ ಕುಮಾರ್ ಹಾಗೂ ಡ್ರಮ್ ಪ್ಯಾಡ್ ವಿದ್ವಾನ್ ಮಿಥುನ್ ಶಕ್ತಿ ಇವರುಗಳು ಸಹಕರಿಸಲಿದ್ದಾರೆ. ಅವಳ ಸುಮನೋಹರ ನೃತ್ಯ ವಿನ್ಯಾಸವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.



