ಮಂಗಳೂರು: “ಜನರಲ್ಲಿ ಕಲಾಭಿರುಚಿ ಬೆಳೆಸಬೇಕಿದೆ” – ಚೇತನಾ ದತ್ತಾತ್ರೇಯ
ಪ್ರಚಲಿತ ವಿದ್ಯಮಾನದಲ್ಲಿ ಮಾನವೀಯ ಸಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ಅಭಿರುಚಿ ಕಲಾಸಕ್ತಿ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ಬೆಂಗಳೂರು ಇದರ ರಾಜ್ಯ ಸಹ ಸಂಚಾಲಕಿ ಚೇತನ ದತ್ತಾತ್ರೇಯ ಅಭಿಪ್ರಾಯ ಪಟ್ಟರು ಅವರು ಇತ್ತೀಚೆಗೆ ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ವಿಪ್ರವೇದಿಕೆ (ರಿ)ಕೊಟ್ಟಾರ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬೆನಕ ಸಭಾಭವನ ಕೋಡಿಕಲ್ ಇಲ್ಲಿ ಹಮ್ಮಿಕೊಂಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರ ಬೊಂಬೆಯಾಟ ಪ್ರದರ್ಶನವನ್ನು ಉದ್ಘಾಟಿಸಿದರು. ಮನುಷ್ಯ ಇಂದು ಒತ್ತಡದ ನಡುವೆ ಬದುಕುವಂತಾಗಿದೆ ಬದುಕಿನ ಜಂಜಾಟದಲ್ಲಿ ಸಂಬಂಧ ಮೌಲ್ಯಗಳು ದೂರವಾಗುತ್ತಿವೆ. ಕಳಚುತ್ತಿರುವ ಸಂಬಂಧಗಳ ಕೊಂಡಿಯನ್ನು ಭಾರತೀಯ ಪುರಾತನ ಲಲಿತ ಕಲೆಗಳಿಂದ ಬೆಳೆಸಲು ಸಾಧ್ಯವಿದೆ. ಯಕ್ಷಗಾನ ಬೊಂಬೆ ಆಟವು ಇಂದು ಅಳಿವಿನ ಅಂಚಿನಲ್ಲಿದೆ ಇಂತಹ ಸಾಧಕ ಕಲೆಯನ್ನು ಪ್ರೋತ್ಸಾಹಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು. ತನ್ನ ಸಮಾಜಮುಖಿ ಚಿಂತನೆಯಿಂದ ಕಲಾ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಭರತಾಂಜಲಿಯ ಕಾರ್ಯ ಶ್ಲಾಘನೀಯ ಎಂದರು ವೇದಿಕೆಯ ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ ಪದಕಣ್ಣಾಯ ಅಧ್ಯಕ್ಷತೆ ವಹಿಸಿದ್ದು ನಿಕಟ ಪೂರ್ವ ಅಧ್ಯಕ್ಷೆ ವಿದ್ಯಾ ರಾವ್ ಮುಖ್ಯ ಅತಿಥಿಯಾಗಿದ್ದರು. ಸ್ಥಾಪಕ ಸದಸ್ಯರಾದ ವೇದಮೂರ್ತಿ ವಿಶುಕುಮಾರ್ ಜೋಯಿಸ್, ಯಕ್ಷ ಗುರು ರವಿ ಅಲೆವುರಾಯ ಭರತಾಂಜಲಿಯ ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್, ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ಸಂಘ ಇದರ ನಿರ್ದೇಶಕ ಕೆ ವಿ ರಮೇಶ್,ವಿಪ್ರ ವೇದಿಕೆಯ ಜತೆ ಕಾರ್ಯದರ್ಶಿ ನಯನ ಹರೀಶ್ ರಾವ್ ಕೋಶಾಧಿಕಾರಿ ಕಿಶೋರ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ವಿಪ್ರ ವೇದಿಕೆಯ ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ ವಂದಿಸಿದರು. ಕೊನೆಯಲ್ಲಿ ನರಕಾಸುರ ವಧೆ ಗರುಡ ಗರ್ವಭಂಗ ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.)
ಭಾರತದ ವಿವಿಧ ಭಾಗಗಳಲ್ಲಿ ಉಳಿದುಕೊಂಡಿರುವ ತೊಗಲು ಬೊಂಬೆಯಾಟ ಅದರ ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು ಮನರಂಜನೆಯ ಸಾಧನವೂ ಆಗಿದೆ. ಆಧುನಿಕ ಯುಗದ ನವೀನ ಮನರಂಜನಾ ಸಾಧನಗಳು ಸಾಂಪ್ರದಾಯಿಕ ಕಲಾ ಪ್ರಕಾರಗಳ ಆಸ್ತಿತ್ವಕೆ ಅಪಾಯವನ್ನು ಉಂಟು ಮಾಡಿದ್ದರೂ, ಇದು ನಶಿಸಿ ಹೋಗಬಾರದೆಂಬ ಹಲವರ ಕಾಳಜಿ ಮತ್ತು ನಿಸ್ವಾರ್ಥ ಪ್ರಯತ್ನವು ಶ್ಲಾಘನೀಯ.
ಕೇರಳದ ಭಾಗವಾಗಿರುವ ಕಾಸರಗೋಡಿನಿಂದ ಬಂದ ಯಕ್ಷಗಾನ ಗೊಂಬೆಯಾಟವೂ ಬಹಳ ಪ್ರಸಿದ್ದವಾದ ಒಂದು ಮನರಂಜನಾ ಮಾಧ್ಯಮ. ಕರ್ನಾಟಕದಲ್ಲಿ ಇದನ್ನು ಗೊಂಬೆಯಾಟ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥಾ ಭಾಗಗಳನ್ನು ಇದು ಆಧರಿಸಿದೆ. ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ನೃತ್ಯ ನಾಟಕವಾದ ಯಕ್ಷಗಾನದ ಮೂಲಕ ತನ್ನ ಪ್ರಸ್ತುತತೆಯನ್ನು ಕಂಡುಕೊಳ್ಳುತ್ತದೆ.
ಸುಮಾರು ಒಂದು ನೂರು ವರ್ಷಗಳ ಹಿಂದೆ 30ಕ್ಕೂ ಹೆಚ್ಚು ಬೊಂಬೆಯಾಟ ತಂಡಗಳಿದ್ದು, ಈಗ ಅದು ಕೇವಲ ಎರಡರ ಸಂಖ್ಯೆಗೆ ಬಂದು ನಿಂತಿದೆ. ಅದು ತೆಂಕು ತಿಟ್ಟಿನಲ್ಲಿ ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಹಾಗೂ ಬಡಗು ತಿಟ್ಟಿನಲ್ಲಿ ಉಪ್ಪಿನಕುದ್ರು ಕೊಗ್ಗ ಕಾಮತರ ಬೊಂಬೆಯಾಟ ತಂಡ.
1981ರಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣಯ್ಯ ಮತ್ತು ಶ್ರೀ ವೆಂಕಟಕೃಷ್ಣಯ್ಯನವರು ಸ್ಥಾಪಿಸಿದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಕಾಸರಗೋಡಿನ ‘ತೆಂಕು ತಿಟ್ಟು’ ಶೈಲಿಯನ್ನು ಅನುಸರಿಸುವ ಏಕೈಕ ಯಕ್ಷಗಾನ ಗೊಂಬೆಯಾಟ ತಂಡವಾಗಿದೆ. ಪ್ರಸ್ತುತ, ಬೊಂಬೆಯಾಟವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಕ್ಕೆ ಹೊರಟವರು ಶ್ರೀ ಕೆ.ವಿ. ರಮೇಶ್. ಇವರು ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಬೊಂಬೆ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ. ಇಲ್ಲಿಯವರೆಗೆ ಅಂತರಾಷ್ಟ್ರೀಯ ಖ್ಯಾತಿಯ ಈ ತಂಡವು ದೇಶ ವಿದೇಶಗಳಲ್ಲಿ ಸುಮಾರು 3000ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನಮನ್ನಣೆ ಪಡೆದಿದೆ. ಶಾಲೆಗಳಲ್ಲಿ ಬೊಂಬೆ ಪ್ರದರ್ಶನಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಬೊಂಬೆಗಳ ಮಹತ್ವ ಮತ್ತು ಸಾಂಪ್ರದಾಯಿಕ ಅಂಶಗಳನ್ನು ತಿಳಿಸುವ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು, ಭವಿಷ್ಯದಲ್ಲಿ ಬೊಂಬೆಯಾಟವನ್ನು ಉಳಿಸಿ ಬೆಳೆಸುವುದಕ್ಕೆ ಪೂರಕವಾಗಿದೆ.
ಪಾಕಿಸ್ತಾನದಲ್ಲಿ ಅಣುಬಾಂಬ್ ಸಿಡಿದ ಎರಡೇ ತಿಂಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಹೋರಿಗೆ ಹೋಗಿ ಪ್ರದರ್ಶನ ನೀಡಿದ ದೃಢಚಿತ್ತರು ಇವರು. ಪ್ರಧಾನಿ ನರೇಂದ್ರ ಮೋದಿಯವರಿಗೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಹಾಗೂ ಶ್ರೀಮತಿ ಸುಧಾಮೂರ್ತಿ ಇವರೆಲ್ಲರಿಗೆ ಬೇರೆ ಬೇರೆ ವೇದಿಕೆಗಳಲ್ಲಿ ಗೌರವಾರ್ಪಣೆ ಮಾಡುವಾಗ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಬೊಂಬೆಗಳನ್ನು ನೀಡಲಾಗಿದೆ. ಇದು ಈ ತಂಡದ ಹೆಗ್ಗಳಿಕೆ. ದೇಶ ವಿದೇಶದಿಂದ ಜನರು ಈ ಸಂಘಕ್ಕೆ ಬಂದು ಬೊಂಬೆಗಳನ್ನು ಹಾಗೂ ಬೊಂಬೆಯಾಟವನ್ನು ವೀಕ್ಷಿಸಿ ಸಂತೋಷಪಟ್ಟಿದ್ದಾರೆ.
ಕೇರಳ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಇದರೊಂದಿಗೆ ‘ಉತ್ತಮ ಸಾಂಪ್ರದಾಯಿಕ ಬೊಂಬೆಯಾಟ ಪ್ರದರ್ಶಕರು ಪ್ರಶಸ್ತಿ’ ಇದು ಇವರಿಗೆ ದೊರೆತ ಅಂತರಾಷ್ಟ್ರೀಯ ಪ್ರಶಸ್ತಿ. ಯಕ್ಷ ಪುತ್ಥಳಿ ಕಲಾ ತಿಲಕ ಪ್ರಶಸ್ತಿ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ – ನವ ದೆಹಲಿಯಿಂದ ಹೀಗೆ ಇವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು. ಸುಧಾಮೂರ್ತಿಯವರು ಗೊಂಬೆಯಾಟ ಪ್ರದರ್ಶನ ವೀಕ್ಷಿಸಿ ಸ್ಪೂರ್ತಿ ಪಡೆದು ‘ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ’ ಎಂಬ ಅಭಿಯಾನದ ಪ್ರಯೋಜಕತ್ವ ವಹಿಸಿದ್ದು ಸಂತಸದ ಸಂಗತಿ. ಆದರೆ ಈ ಕಲೆ ಈಗ ಅಪರೂಪಕ್ಕೆ ಗೋಚರಿಸುವ ಕಲೆಯಾಗಿದೆ. ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಈ ಒಂದು ಸಾಂಪ್ರದಾಯಿಕ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹವಾಗಿದೆ.