20 ಮಾರ್ಚ್ 2023 ಮಂಗಳೂರು: “ಸಂಗ್ರಹ, ಕಾರಕ, ನಿರುಕ್ತಿಗಳಲ್ಲಿ ಬರೆಯಲ್ಪಟ್ಟಿರುವ ಭರತಮುನಿಯ ನಾಟ್ಯಶಾಸ್ತ್ರವು ನಾಟ್ಯ ಕಲೆಗೆ ಚೌಕಟ್ಟು ನೀಡಿದ ಮೊದಲ ಗ್ರಂಥ. ಶಾಸ್ತ್ರಾಧಾರಿತ ಪ್ರಸ್ತುತಿಯಿಂದ ಕಲೆಗೆ ಸಂಸ್ಕಾರ ದೊರೆಯುತ್ತದೆ. ಹೀಗಾಗಿ ಶಾಸ್ತ್ರಾಧ್ಯಯನ ಮುಖ್ಯ” ಎಂದು ಮಂಗಳೂರಿನ “ನಾಟ್ಯಾರಾಧನ” ಮತ್ತು “ಯಕ್ಷ ಆರಾಧನಾ ಕಲಾ ಕೇಂದ್ರ”ದ ನಿರ್ದೇಶಕರಾದ ಮಿದುಷಿ ಸುಮಂಗಲಾ ರತ್ನಾಕರ ರಾವ್ ಅವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು (ರಿ.) ಮಂಗಳೂರು, ಆಯೋಜಿಸಿದ ಭರತಮುನಿ ಜಯಂತಿ ಕಾರ್ಯಕ್ರಮದಲ್ಲಿ ಭರತಮುನಿಗೆ ನುಡಿ ನಮನ ಸಲ್ಲಿಸುತ್ತಾ ತಮ್ಮ ವಿಚಾರವನ್ನು ಮಂಡಿಸಿದರು.
ದಿನಾಂಕ 19-03-2023 ಆದಿತ್ಯವಾರದಂದು ಅತ್ತಾವರದ ಚಕ್ರಪಾಣಿ ಶ್ರೀಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಜರುಗಿದ ಕಾರ್ಯಕ್ರಮವನ್ನು ಮಾಜಿ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೋ. ಎಂ.ಎಲ್.ಸಾಮಗರು ಉದ್ಘಾಟಿಸಿ, ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ನೃತ್ಯ ಕಲಾವಿದರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್, ಕಲಾಶ್ರೀ ಪುರಸ್ಕೃತೆ ವಿದುಷಿ ಗೀತಾ ಸರಳಾಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ ವಿದುಷಿ ಪ್ರತಿಮಾ ಶ್ರೀಧರ್ ಅವರನ್ನು ಸಮ್ಮಾನಿಸಲಾಯ್ತು.
ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲರಾದ ವಿದುಷಿ ಶೈಲ ಸಚಿನ್ ಹಾಗೂ ಚಕ್ರಪಾಣಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಮೋಹನ್ ಕೆ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪರಿಷತ್ತಿನ ಅಧ್ಯಕ್ಷರಾದ ಶ್ರೀ ಯು.ಕೆ. ಪ್ರವೀಣ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಸುಧೀರ್ ರಾವ್ ಕೊಡವೂರು ವಂದಿಸಿದರು. ವಿದುಷಿ ಶಾರದಾಮಣಿ ಶೇಖರ್ ಪ್ರಾರ್ಥಿಸಿದರು. ವಿದ್ವಾನ್ ಶ್ರೀ ರಾಮಕೃಷ್ಣ ಕೊಡಂಚರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುರೇಶ್ ಅತ್ತಾವರ್, ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶ್ರೀವಿದ್ಯಾ ಮುರಳೀಧರ್, ಸುದರ್ಶನ್ ಪ್ರೇಮನಾಥ್, ಶ್ರೀಧರ ಹೊಳ್ಳ ಉಪಸ್ಥಿತರಿದ್ದರು.
ಬಳಿಕ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಶಿಷ್ಯ ವೃಂದ, ಕಲಾನಿಕೇತನ ಡಾನ್ಸ್ ಫೌಂಡೇಶನ್ ರಿ. ಕಲ್ಲಡ್ಕದ ವಿದುಷಿ ವಿದ್ಯಾ ಮನೋಜ್ ಶಿಷ್ಯ ವೃಂದ , ಪದಯಾನ, ಪದ್ಯಾಣದ ವಿದುಷಿ ಪ್ರಣತಿ ಚೈತನ್ಯ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ವಿಶೇಷವಾಗಿ ಗುರು ರಾಮಕೃಷ್ಣ ಕೊಡಂಚರ ಶಿಷ್ಯೆ ಕು.ತನುಶ್ರೀ ಪಿತ್ರೋಡಿಯವರಿಂದ ನಾಟ್ಯಶಾಸ್ತ್ರದ 108 ಕರಣಗಳ ಶಿಲ್ಪ ಪ್ರಸ್ತುತಗೊಂಡಿತು.