ಮಂಗಳೂರು : ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 04-02-2024ರಂದು ಕಲಾಸಕ್ತರಿಗೆ ಸರದೌತಣ ನೀಡುವ ಇಬ್ಬರು ಕಲಾವಿದರ ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರಿನ ನೃತ್ಯಗುರು ವಿದ್ವಾನ್ ಪ್ರವೀಣ್ ಕುಮಾರ್ ಅವರ ಶಿಷ್ಯೆ ನವ್ಯಶ್ರೀ ಕೆ.ಎನ್. ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು. ಮೊದಲಿಗೆ ಕಾಂಭೋಜಿ ರಾಗ-ಆದಿತಾಳದಲ್ಲಿ ‘ವರ್ಣಂ’ ಪ್ರದರ್ಶಿಸಿದ ಅವರು ಬಳಿಕ ‘ಜಗದೋದ್ಧಾರನ ಆಡಳಿಸಿದಳು ಯಶೋದೆ’ ಎಂಬ ಪುರಂದರದಾಸರ ಕೃತಿಯನ್ನು ಉತ್ತಮವಾಗಿ ಸಾದರಪಡಿಸಿದರು.
ಬಳಿಕ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿ ಹಾಗೂ ನೃತ್ಯಗುರುಗಳಾದ ವಿದುಷಿ ರಾಧಿಕಾ ಶೆಟ್ಟಿ ‘ಮಾನುಷಿ’ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿದರು. ಸರಸ್ವತಿ ನದಿಯ ಅನ್ವೇಷಣೆಯಿಂದ ಆರಂಭವಾಗುವ ಈ ಪ್ರಸ್ತುತಿಯು ನದಿಯ ಹುಟ್ಟಿನಿಂದ ಹರಿವಿನವರೆಗೆಯ ಕುತೂಹಲಕಾರಿ ವ್ಯಾಖ್ಯಾನಗಳನ್ನು ಒಳಗೊಂಡಿತ್ತು. ಸರಸ್ವತಿ ಇನ್ನೂ ಹರಿಯುತ್ತಾಳೆಯೇ? ಅವಳು ಉತ್ಸಾಹಭರಿತಳೇ? ಎಂಬ ಪ್ರಶ್ನೆಗಳೊಂದಿಗೆ ಅನ್ವೇಷಣೆಯ ಪಥವನ್ನು ಮುಂದುವರಿಸುತ್ತ, ಮೀರಾಬಾಯಿಯ ಕಡೆಗೆ ಹೊರಳಿದರು. ಆಕೆಯ ಕೃಷ್ಣಾನ್ವೇಷಣೆಗೆ ಸಾಂತ್ವನ ಲಭಿಸಿತೇ ಎಂಬ ಪ್ರಶ್ನೆ ಎದುರಾಗುತ್ತ, ಮತ್ತೊಂದೆಡೆ ತಾಯ್ತನದ ವರ್ಣನಾತೀತ ಅನುಭವದಿಂದ ದೇವಕಿ ವಂಚಿತಳಾದ ಬಗ್ಗೆ ಕಲಾವಿದೆ ಬೆಳಕು ಚೆಲ್ಲುತ್ತಾರೆ. ಕೊನೆಗೆ ವಚನಕಾರ್ತಿ ಅಕ್ಕ ಮಹಾದೇವಿ, ಚೆನ್ನಮಲ್ಲಿಕಾರ್ಜುನನ ಜತೆ ಐಕ್ಯವನ್ನು ಬಯಸುತ್ತಾಳೆ. ಆಕೆಯ ಉದ್ದೇಶ ಈಡೇರಬಹುದೇ? ಎಂಬ ಅನ್ವೇಷಣೆಯ ಪ್ರಶ್ನೆಗಳ ಉತ್ತರಗಳಿಗಾಗಿ ಮಾನುಷಿ ಹುಡುಕಾಡುತ್ತಳೇ ಇರುತ್ತಾಳೆ ಎಂಬುದನ್ನು ರಾಧಿಕಾ ಶೆಟ್ಟಿ ನೃತ್ಯದಲ್ಲಿ ಬಿಂಬಿಸಿದ್ದಾರೆ.
ಹಿಮ್ಮೇಳದಲ್ಲಿ, ವಿದ್ಯಾಶ್ರೀ ರಾಧಾಕೃಷ್ಣ (ನಟುವಾಂಗ), ರೋಹಿತ್ ಭಟ್ ಉಪ್ಪೂರು (ಗಾಯನ), ವಿನಯ್ ನಾಗರಾಜನ್ (ಮೃದಂಗ) ಹಾಗೂ ನಿತೀಶ್ ಅಮ್ಮಣ್ಣಾಯ (ಕೊಳಲು) ಸಹಕರಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಾಂಗನ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.