ಗಾಯನ ಸಮಾಜದ ವೇದಿಕೆಯ ಮೇಲೆ ಅಂದು ಮಧುಮಿತ ರವೀಂದ್ರ ವೀರಾಂಜನೇಯನ ಪ್ರತಿರೂಪವಾಗಿ, ಕೆಚ್ಚೆದೆಯ ಕಲಿ ಆತ್ಮವಿಶ್ವಾಸದಿಂದ ಸಮುದ್ರಲಂಘನ ಮಾಡಿ ಸೀತಾಮಾತೆಯನ್ನು ದರ್ಶಿಸಿ, ರಾವಣನ ಸಮ್ಮುಖ ತನ್ನ ಬಾಲವನ್ನು ಸುತ್ತಿ ಸಿಂಬಿ ಹೆಣೆದು ತನ್ನದೇ ಆದ ಸಿಂಹಾಸನ ನಿರ್ಮಿಸಿಕೊಂಡು ಎದೆಯುಬ್ಬಿಸಿ, ಅವನಿಗೆ ಸರಿಮಿಗಿಲಾಗಿ ಕುಳಿತು, ರಾವಣನ ಹತ್ತುತಲೆಗಳನ್ನು ನೋಡಿ ಲೇವಡಿಮಾಡಿ, ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಇಡೀ ಲಂಕೆಯನ್ನು ಸುಟ್ಟು, ಚೈತನ್ಯಪೂರ್ಣವಾದ ತನ್ನ ವ್ಯಕ್ತಿತ್ವವನ್ನು ಸಾಬೀತುಪಡಿಸಿದ. ಶ್ರೀರಾಮನ ಭಕ್ತಿ ತಾದಾತ್ಮ್ಯತೆಯಿಂದ ಮೈಮರೆತು ಕುಣಿದು, ಮಂಡಿ ಅಡವುಗಳಿಂದ ರಂಗಾಕ್ರಮಣದಲ್ಲಿ ವಿಜ್ರುಂಭಿಸಿದ ವೀರಹನುಮನ ಯೋಗದ ಭಂಗಿಗಳಿಂದ ರೋಮಾಂಚಗೊಳಿಸಿ, ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ ಮಧುಮಿತಳ ನುರಿತ ನಾಟ್ಯಾಭಿನಯ ಕಲಾರಸಿಕರಲ್ಲಿ ವಿಸ್ಮಯವನ್ನುಂಟು ಮಾಡಿತು.
ಕಣ್ಮನ ಸೆಳೆದ ಪ್ರಸ್ತುತಿ ಅವಳ ರಂಗಪ್ರವೇಶದ ಮೊದಲಹೆಜ್ಜೆಗಳು ಅನಿಸಲೇ ಇಲ್ಲ. ಕಿರುತೆರೆ ಅಭಿನೇತ್ರಿ ಹಾಗೂ ನೃತ್ಯಾಚಾರ್ಯ ವಿ. ನಮಿತಾ ದೇಸಾಯಿ ಅವರ ಮನೋಹರ ನೃತ್ಯ ಸಂಯೋಜನೆಯಲ್ಲಿ ರೂಪುಗೊಂಡ ಕೃತಿಗಳನ್ನು ಅಂಗಶುದ್ಧವಾಗಿ ಯಾವ ಅರೆಕೊರೆಯಿಲ್ಲದೆ, ಮಿಂಚಿನ ಸಂಚಾರದ ನೃತ್ತ-ಮನೋಹರ ‘ಕರಣ’ಗಳಿಂದ ಸಾಕ್ಷಾತ್ಕರಿಸಿ ಮಿಂಚಿದ್ದಳು. ನಗುಮೊಗ ಹಾಗೂ ಆತ್ಮವಿಶ್ವಾಸದಿಂದ ಕಲಾವಿದೆ, ರಂಗವನ್ನು ಪ್ರವೇಶಿಸಿದ ಬಗೆಯೇ ವಿಶಿಷ್ಟವಾಗಿತ್ತು. ‘ಮಾರ್ಗಂ’ ಸಂಪ್ರದಾಯದಲ್ಲಿ ಸಾಗಿದ ಮಧುಮಿತಳ ನರ್ತನ ಝೇಂಕಾರ ಅಷ್ಟದಿಕ್ಪಾಲಕ ವಂದನ, ಗಣೇಶ ಶ್ಲೋಕದ ಮನಮೋಹಕ ಅರ್ಪಣೆಯಿಂದ ಶುಭಾರಂಭಗೊಂಡಿತು. ನಂತರ ‘ಆನಂದನರ್ತನ ಗಣಪತಿ’ಯನ್ನು ಆತನ ವಿವಿಧ ಭಾವ ಹಾಗೂ ಭಂಗಿಗಳಿಂದ ಕಣ್ಮುಂದೆ ತಂದು ಪ್ರತಿಷ್ಠಾಪಿಸಿದಳು. ಮುಂದೆ ಆರ್. ಕೆ. ಪದ್ಮನಾಭ ರಚಿಸಿದ ಆಂಜನೇಯ ಕೃತಿಯನ್ನು ತನ್ನ ಶಕ್ತಿಶಾಲಿ ಆಂಗಿಕಾಭಿನಯ, ಪ್ರೌಢ ಅಭಿನಯ, ನೃತ್ತಪ್ರಾವೀಣ್ಯದ ಯೋಗದ ಭಂಗಿಗಳಿಂದ ಸಹೃದಯರ ಪ್ರತಿಹೃದಯಗಳಲ್ಲೂ ಭಕ್ತಿಸಂಚಲನವನ್ನುಂಟು ಮಾಡಿದಳು.
ಆಪ್ತವಾದ, ವಿರಳವಾದ ಕನ್ನಡ ‘ವರ್ಣ’- ವಾಗ್ಗೇಯಕಾರ್ತಿ ವಿದುಷಿ ದ್ವಾರಕೀ ಕೃಷ್ಣಸ್ವಾಮಿ ರಚಿಸಿದ ‘ಭುವನ ಸುಂದರನ ಕರೆತಾರೆ ಸಖಿ’ ಎಂದು ವಿರಹಾರ್ತ ಭಾವನೆಗಳಿಂದ ತಲ್ಲಣಕ್ಕೊಳಗಾದ ನಾಯಕಿ, ತನ್ನಿನಿಯ ಕೃಷ್ಣನನ್ನು ಕರೆತರಲು ಸಖಿಯನ್ನು ಆರ್ತಳಾಗಿ ಬೇಡಿಕೊಳ್ಳುವ ಸೊಗಸಾದ ‘ವರ್ಣ’ವನ್ನು ಮಧುಮಿತಾ, ಪರಕಾಯಪ್ರವೇಶ ಮಾಡಿ ಪಾತ್ರವನ್ನು ತಲ್ಲೀನತೆಯಿಂದ ನಿರೂಪಿಸುವಲ್ಲಿ ಯಶಸ್ವಿಯಾದಳು. ದ್ರೌಪದಿಗೆ ಅಕ್ಷಯವಸ್ತ್ರವನ್ನು ಕರುಣಿಸಿದ ಮೃದುಹೃದಯಿ ಕೃಷ್ಣ ತನ್ನ ಬಗ್ಗೆ ಏಕಿಷ್ಟು ಕಠಿಣನಾದ ಎಂಬ ಅಳಲು ನಾಯಕಿಯದು. ವಿವಿಧ ಸಂಚಾರಿ ಕಥಾನಕಗಳಲ್ಲಿ ಶ್ರೀಕೃಷ್ಣನ ಕರುಣಾಮಯ ವ್ಯಕ್ತಿತ್ವವನ್ನು ಕಲಾವಿದೆ, ತನ್ನ ಭಾವಪೂರ್ಣ ಅಭಿನಯ-ನಿರರ್ಗಳ ಜತಿಗಳ ಚಮತ್ಕಾರ, ನೃತ್ತಸಾಗರದಲ್ಲಿ ಸುಲಲಿತವಾಗಿ ಕ್ರೀಡಿಸಿದಳು. ಗುರು ನಮಿತರ ನಿಖರ ನಟುವಾಂಗದ ಝೇಂಕಾರಕ್ಕೆ ಮಾರ್ದನಿಯಾಗುತ್ತ ಮಧುಮಿತ, ತನ್ನಿನಿಯ ಗೋಪಾಲಕೃಷ್ಣನ ರಾಸಕ್ರೀಡೆಯ ಗತ ಮಧುರಕ್ಷಣಗಳನ್ನು ನೆನೆಯುತ್ತ, ಉತ್ಸಾಹ ಚಿಮ್ಮುವ ಆಂಗಿಕ ಚಲನೆ-ಗಾಢ ಅಭಿನಯದಿಂದ ಚಿತ್ರವತ್ತಾಗಿ ನೋಡುಗರ ಕಣ್ಮುಂದೆ ತಂದಳು. ಗಾಯಕ ಶ್ರೀವತ್ಸರ ಭಾವಪೂರ್ಣ ಹೃದ್ಯಧ್ವನಿ ಇಡೀಕೃತಿಯ ಜೀವಾಳವಾಗಿ ಹೃದಯಸ್ಪರ್ಶಿಸಿತು.
ಅನಂತರ- ಶ್ರೀಆದಿ ಶಂಕರಾಚಾರ್ಯರ ರಾಜರಾಜೇಶ್ವರಿ ಅಷ್ಟಕ ‘ಅಂಬಾ ಶಾಂಭವಿ’ಯನ್ನು ತನ್ನ ಪ್ರಜ್ವಲ ವರ್ಚಸ್ಸು, ವೀರೋನ್ಮತ್ತ ಚಲನೆಗಳಿಂದ ಮೈದುಂಬಿ ಆವಾಹಿಸಿಕೊಂಡು, ಮಹಿಷಾಸುರಮರ್ಧಿನಿಯಾಗಿ ದುಷ್ಟ ರಕ್ಕಸರನ್ನು ಸದೆಬಡಿಯುತ್ತ, ಹೂಂಕರಿಸಿ ಪ್ರೇಕ್ಷಕರ ಮೈ ಜುಮ್ಮೆನಿಸುವಂತೆ ದೈವೀಕವಾಗಿ ಸಾಕಾರಗೊಳಿಸಿದಳು. ಕುವೆಂಪು ಅವರ ‘ಮುಚ್ಚು ಮರೆಯಿಲ್ಲದೆಯೇ ನಿನ್ನ ಮುಂದೆ ಎಲ್ಲವನು ಬಿಚ್ಚಿಡುವೆ..’ ಆಧ್ಯಾತ್ಮಿಕ ಆಯಾಮದ ಭಾವಗೀತೆಯನ್ನು ಮಧುಮಿತ, ಮಧುರಾನುಭೂತಿ ಹೊಮ್ಮುವಂತೆ ಸಮರ್ಪಣಾಭಾವದಿಂದ ಅಭಿನಯಿಸಿ, ಕೊನೆಯಲ್ಲಿ ಉತ್ಸಾಹದ ಕಾರಂಜಿಯಾಗಿ ‘ತಿಲ್ಲಾನ’ದಿಂದ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.