4 ಫೆಬ್ರವರಿ 1938 ರಲ್ಲಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರ ಸುಪುತ್ರಿಯಾಗಿ ಭಾರ್ಗವಿಯವರು ಜನಿಸಿದರು. ಬಿ. ಎಸ್ಸಿ. ಪದವೀಧರೆಯಾದ ಇವರು ಮುಂದೆ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಈ. ಎಸ್. ಐ. ಕಾರ್ಪೊರೇಷನ್ ನಲ್ಲಿ ವ್ಯವಸ್ಥಾಪಕವಾಗಿ ಸೇವೆ ಸಲ್ಲಿಸಿದರು. ರಂಗಭೂಮಿಯ ಬಗ್ಗೆ ಎಳವೆಯಲ್ಲಿಯೇ ಆಸಕ್ತಿ ಹೊಂದಿದ್ದ ಇವರು ಶಾಲಾ-ಕಾಲೇಜುಗಳ ನಾಟಕಗಳಲ್ಲಿ ಅಭಿನಯಿಸಿ ಎರಡು ಬಾರಿ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಮಕ್ಕಳಿಗಾಗಿ ನಾಟಕ ರಚನೆ ಇವರ ಹವ್ಯಾಸವಾಗಿತ್ತು. ಸಿನಿಮಾದಲ್ಲಿ ಮತ್ತು ಕಿರುತೆರೆಯಲ್ಲೂ ತಮ್ಮ ಸಹಜ ನಟನೆಗೆ ಜನ ಮೆಚ್ಚುಗೆ ಪಡೆದವರು ಭಾರ್ಗವಿ ನಾರಾಯಣ್. ನಟನೆಯ ಜೊತೆಗೆ ಚಿತ್ರಕಥೆ ಸಂಭಾಷಣೆ ಬರೆದ ಹೆಗ್ಗಳಿಕೆ ಇವರದು.
ಮೇಕಪ್ ನಾಣಿಯೆಂದೇ ಪ್ರಸಿದ್ಧರಾಗಿದ್ದ, ಸೌಂದರ್ಯವರ್ಧಕ ಕಲಾವಿದ ಹಾಗೂ ಕನ್ನಡ ಚಲನಚಿತ್ರ ನಟರಾದ ಬೆಳವಾಡಿ ನಂಜುಂಡಯ್ಯ ನಾರಾಯಣರನ್ನು ಮದುವೆಯಾದರು. ಅವರ ನಾಲ್ಕು ಮಂದಿ ಮಕ್ಕಳಲ್ಲಿ, ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಪ್ರಸಿದ್ಧ ಚಲನಚಿತ್ರ ನಟರಾಗಿದ್ದಾರೆ. ಸುಜಾತ ಬೆಳವಾಡಿಯವರು ಅಧ್ಯಾಪಕಿ ಮತ್ತು ಯೋಗ ಸಾಧಕಿಯಾಗಿದ್ದು, ಪ್ರದೀಪ್ ಬೆಳವಾಡಿಯವರು ಇಂಜಿನಿಯರ್ ಆಗಿದ್ದಾರೆ.
‘ಎರಡು ಕನಸು’, ‘ಪಲ್ಲವಿ ಅನುಪಲ್ಲವಿ’, ‘ಬಾ ನಲ್ಲೆ ಮಧುಚಂದ್ರಕೆ’, ‘ಅಂತಿಮ ಘಟ್ಟ’, ‘ಜಂಬೂ ಸವಾರಿ’ ಸೇರಿ ಸುಮಾರು 22ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟನೆ ಮತ್ತು ಕಿರುತೆರೆಯ ಧಾರವಾಹಿಗಳಲ್ಲಿಯೂ ನಟಿಸಿ ಜನ ಮೆಚ್ಚುಗೆ ಪಡೆದ ಅನುಭವಿ. ನಟನೆ ಮಾತ್ರವಲ್ಲದೆ ಲೇಖಕಿಯೂ ಆಗಿರುವ ಇವರು ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಟಿಸಿದ ‘ನಾ ಕಂಡ ನಮ್ಮವರ’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದಾರೆ.
‘ನಾನು, ಭಾರ್ಗವಿ’ ಇವರ ಆತ್ಮ ಚರಿತ್ರೆ. ಇದು 2021 ರಲ್ಲಿ ಬಿಡುಗಡೆಯಾದ ಮತ್ತು ಅನೇಕ ಮುದ್ರಣಗಳನ್ನು ಕಂಡ ಕೃತಿ.
ರಂಗಭೂಮಿಯ ಪ್ರಸಿದ್ಧ ಕಲಾವಿದೆಯಾದ ಇವರ ಸಹಜ ಹಾಗೂ ಸೃಜನಶೀಲ ನಟನೆಗೆ ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡ ಕಲಾವಿದೆ.
ಕನ್ನಡ ರಂಗ ಭೂಮಿ ಕಂಡ ಪ್ರತಿಭಾವಂತ ಕಲಾವಿದೆಯಾದ ಭಾರ್ಗವಿ ನಾರಾಯಣ್ ಅವರ ಹೆಸರು ಜನಮನದಲ್ಲಿ ಅಚ್ಚರಿಯದೆ ನಿಂತಿದೆ, ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಪ್ರೇಕ್ಷಕರ ಮನಗೆದ್ದ ಪ್ರತಿಭೆ. ಇವರು ವಯೋಸಹಜ ಸಮಸ್ಯೆಗಳಿಂದ ತಮ್ಮ ಎಂಬತ್ತನಾಲ್ಕನೆಯ ವಯಸ್ಸಿನಲ್ಲಿ ನಟನಾ ಲೋಕದಿಂದ ದೂರವಾದರು. ಅದ್ಭುತ ಪ್ರತಿಭೆಯ ಚೇತನಕ್ಕೆ ಅನಂತ ನಮನಗಳು.
-ಅಕ್ಷರೀ