ಮೈಸೂರು : ನಟನ ರಂಗಶಾಲೆಯ ವತಿಯಿಂದ 2025-26ನೇ ಸಾಲಿನ ರಂಗಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಭಾಸ ಮಹಾಕವಿಯ ಐದು ನಾಟಕಗಳ ಸಂಕಲಿತ ರೂಪ ‘ಭಾಸ ಪಂಚಕ’ ನಾಟಕ ಪ್ರದರ್ಶನವನ್ನು ದಿನಾಂಕ 29 ಮತ್ತು 30 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕದ ಕನ್ನಡಾನುವಾದ ಡಾ. ಕೆ. ಕೃಷ್ಣಮೂರ್ತಿ ಇವರು ಮಾಡಿದ್ದು, ದಿಶಾ ರಮೇಶ್ ಸಂಗೀತ ಹಾಗೂ ಮೇಘ ಸಮೀರ ರಂಗಪಠ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಖ್ಯೆಗಳನ್ನು ಸಂಪರ್ಕಿಸಿರಿ.

ನಟನ ರಂಗಶಾಲೆಯ ಈ ವರ್ಷದ ವಿದ್ಯಾರ್ಥಿಗಳು ಅಭಿನಯಿಸುತ್ತಿರುವ ನಾಟಕ ಭಾಸ ಮಹಾ ಕವಿಯ ಐದು ಪ್ರಸಿದ್ಧ ನಾಟಕಗಳ ಸಂಕಲಿತ ರೂಪ ‘ಭಾಸಪಂಚಕ’ ! ಭಾರತೀಯ ನಾಟಕಕಾರರಲ್ಲಿ ಪುರಾಣದ ವಸ್ತುಗಳನ್ನು ಆಧುನಿಕ ಪ್ರಜ್ಞೆಯಲ್ಲಿ ನೋಡಿದ ಬಹು ಅಪರೂಪದ ಶ್ರೇಷ್ಠ ನಾಟಕಕಾರ. ವಸ್ತು, ಸಂವಿಧಾನ, ಭಾಷೆ, ನವೀನ ದೃಷ್ಟಿಕೋನ ಮತ್ತು ಪ್ರಸ್ತುತಿಗೆ ಆತ ನೀಡುವ ರಂಗಚಲನೆಗೆ ನಿರ್ದೇಶಿತ ಗುಣಗಳು. ಈ ಎಲ್ಲದರ ನಡುವೆ ಕಾವ್ಯಮಯತೆ ಎಲ್ಲವೂ ಅಡಕವಾಗಿ ನಟನ ತಯಾರಿಗೆ ಸದಾ ಸವಾಲೊಡ್ಡುತ್ತಲೇ ಬರುತ್ತಿವೆ. ನಿರಂತರ ರಂಗ ತರಬೇತಿಯಲ್ಲಿ ನಟನ ಶಕ್ತಿ ಪ್ರವಾಹವನ್ನು, ಸೂಕ್ಷ್ಮತೆಗಳನ್ನು ರಂಗದ ಮೇಲೆ ಸಮತೋಲನಗೊಳಿಸಿ ಜೊತೆಗೆ ರಂಗಭೂಮಿಯ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ನಾಟಕ ಕಟ್ಟುವ ಕ್ರಿಯೆ ಸದಾ ಹಸಿರು. ಅದೂ ಮತ್ತಷ್ಟು ಚಂದ ಕೂಡ.! ದಿನದಿಂದ ದಿನಕ್ಕೆ, ಕ್ಷಣ ಕ್ಷಣಕ್ಕೆ ನಟ ರಂಗದಲ್ಲಿ ಅರಳಿಕೊಳ್ಳುವ ಪ್ರಕ್ರಿಯೆಯನ್ನು ಗಮನಿಸುವುದೇ ನನಗಂತೂ ಸದಾ ಕುತೂಹಲ..!
ಪ್ರದರ್ಶನದ ಪ್ರಸವ ರಂಗಕರ್ಮಿಗಳಿಗೊಂದು ಆವ್ಯಕ್ತ ಅಧ್ಯಾತ್ಮದ ಸಂತಸವಾದರೆ, ಪ್ರೇಕ್ಷಕರಿಗೆ ಪ್ರಯೋಗ ತಾಯಿ ಮಗುವನ್ನು ಮುದ್ದಾಡಿದಷ್ಟು ಸಂಭ್ರಮ. ‘ಭಾಸಪಂಚಕ’ ಮತ್ತು ನಟನದ ಹೊಸ ನಟರು ನಿಮಗೆ ಖಂಡಿತ ಸಂತೋಷ ಕೊಡುತ್ತಾರೆ.
