ಕುಳಾಯಿ : ಕರ್ನಾಟಕ ಯಕ್ಷಗಾನ ಅಕಾಡೆಮಿ, ಸರಯೂ ಬಾಲ ಯಕ್ಷವೃಂದ ಕೋಡಿಕಲ್, ಮಕ್ಕಳ ಮೇಳ ಮಂಗಳೂರು ಇದರ ವತಿಯಿಂದ ಯಕ್ಷಗಾನ ಬಯಲಾಟ ಹಾಗೂ ಸಭಾ ಕಾರ್ಯಕ್ರಮವು ಕುಳಾಯಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ 26 ಆಗಸ್ಟ್ 2024ರ ಸೋಮವಾರದಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತಸರ ಕೆ. ಕೃಷ್ಣಹೆಬ್ಬಾರ್ ಮಾತನಾಡಿ “ಯಕ್ಷಗಾನ ಕಲೆಯನ್ನು ಮಕ್ಕಳಿಗೆ ಯಕ್ಷ ಶಿಕ್ಷಣದ ಮೂಲಕ ನೀಡಿ ಬೆಳೆಸುವಲ್ಲಿ ಸರಯೂ ಬಾಲ ಯಕ್ಷವೃಂದದ ರವಿ ಅಲೆವೂರಾಯ ಕೊಡುಗೆ ಅನನ್ಯ.” ಎಂದರು.
ಯಕ್ಷಗಾನ ಸಂಘಟಕ ಹಾಗೂ ಕಲಾವಿದರಾದ ಮಧುಕರ ಭಾಗವತ್ ಮಾತನಾಡಿ “ಯಕ್ಷಗಾನ ಕಲೆ ನಿಧಾನವಾಗಿ ನಶಿಸುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಸರಯೂ, ಪಟ್ಲ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳು ಯಕ್ಷಗಾನ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರು ಈ ಕಲೆಗೆ ಆಕರ್ಷಿತರಾಗುತ್ತಿದ್ದಾರೆ.ಈ ಕಲೆ ಬೆಳೆಯುತ್ತಲೇ ಹೋಗುತ್ತದೆ.” ಎಂದರು.
ಕುಳಾಯಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಸದಾಶಿವ ಎಂ. ಮಾತನಾಡಿ “ಯಕ್ಷಗಾನವು ನೃತ್ಯ, ಸಂಭಾಷಣೆ, ವೇಷಭೂಷಣ, ಹಿಮ್ಮೆಳ ಹೀಗೆ ಎಲ್ಲಾ ರಸವನ್ನು ಒಳಗೊಂಡ ಗಂಡು ಕಲೆಯಾಗಿದೆ.” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ರಾಜೇಶ್ ಕುಳಾಯಿ ಇವರನ್ನು ಗೌರವಿಸಲಾಯಿತು. ಕಲಾವಿದರಾದ ಗೋಪಾಲಕೃಷ್ಣ ಗುತ್ತಿಗಾರ್, ವೇಣು ಮಾಂಬಾಡಿ ಉಪಸ್ಥಿತರಿದ್ದರು.
ಸರೆಯೂ ಬಾಲ ಯಕ್ಷವೃಂದದ ರವಿ ಅಲೆವೂರಾಯ ಸ್ವಾಗತಿಸಿ, ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ವಾಸುದೇವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ‘ಭೂಮಿಪುತ್ರ ಭೌಮಾಸುರ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.