ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ‘ಭ್ರಮರ-ಇಂಚರ ನುಡಿಹಬ್ಬ’ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ 01-12-2023ರಂದು ಪ್ರಾರಂಭಗೊಂಡಿತು.
ಈ ಸಮ್ಮೇಳನದ ಸರ್ವಾಧ್ಯಕ್ಷದಾಗಿದ್ದ ಸಾಹಿತಿ, ಚಿಂತಕ, ಕಂಪ್ಯೂಟರ್ ಕನ್ನಡ ತಂತ್ರಾಂಶದ ರೂವಾರಿ ನಾಡೋಜ ಡಾ. ಕಿನ್ನಿಕಂಬಳ ಪದ್ಮನಾಭ ರಾವ್ “ಕನ್ನಡ ಮತ್ತು ಸ್ಥಳೀಯವಾಗಿ ಸಿಕ್ಕುವ ಎಲ್ಲ ಭಾಷೆಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳು ಸಮಷ್ಠಿಯಾಗಿ ದಾಖಲೀಕರಣಗೊಳ್ಳುವುದು ಭವಿಷ್ಯದ ಹಿತದೃಷ್ಟಿಯಿಂದ ಬಹಳ ಅಗತ್ಯ. ಆ ಸಲುವಾಗಿ ಲಭ್ಯ ತಂತ್ರಜ್ಞಾನ-ತಂತ್ರಾಂಶಗಳ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಈ ದಿಸೆಯಲ್ಲಿ ಪರಿವರ್ತನೆ ಮತ್ತು ಪರಿಷ್ಕರಣೆಯ ಪ್ರಯತ್ನಗಳೂ ಆಗಬೇಕು” ಎಂದು ಹೇಳಿದರು. ನಿಕಟಪೂರ್ವ ನುಡಿಹಬ್ಬ ಸಮ್ಮೇಳನಾಧ್ಯಕ್ಷ ಡಾ. ಪಾದೆಕಲ್ಲು ವಿಷ್ಣು ಭಟ್ ಸಮ್ಮೇಳನ ಉದ್ಘಾಟಿಸಿದರು. ಆನಂದ ಸಿ. ಕುಂದರ್ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಸಮ್ಮೇಳನಾರಂಭದ ಪೂರ್ವದಲ್ಲಿ ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜುವರೆಗೂ ನಡೆದ ಸಾಲಂಕೃತ ಮೆರವಣಿಗೆಯನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದು ಅತ್ಯಾಕರ್ಷಕವಾಗಿತ್ತು. ದೇಗುಲದ ಆನೆ ಮಹಾಲಕ್ಷ್ಮೀ, ಭುವನೇಶ್ವರಿ ತಾಯಿಯ ಸ್ತಬ್ಧಚಿತ್ರ, ಭಗವದ್ಗೀತೆ ಹೊತ್ತ ಪಲ್ಲಕಿ, ತೆರೆದ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕೆ.ಪಿ. ರಾವ್, ವಿದ್ಯಾರ್ಥಿಗಳ ನಾನಾ ವಸ್ತ್ರಸಂಹಿತೆಯ ಕುಣಿತ ಭಜನೆಗಳು, ಮಕ್ಕಳೇ ವೇಷ ಧರಿಸಿ, ಮಕ್ಕಳೇ ಹಿಮ್ಮೇಳ ಸಂಯೋಜಿಸಿದ ಹುಲಿವೇಷ ತಂಡಗಳು, ಕಲಶ ಕನ್ನಡಿ ಹಿಡಿದ ಸಾಲಂಕೃತ ಕನ್ಯೆಯರು ಮೆರವಣಿಗೆ ಮೆರುಗು ನೀಡಿತು. ವಿಷಾರಗೋಷ್ಠಿಯಲ್ಲಿ ಖ್ಯಾತ ಚಿಂತಕ ರೋಹಿತ್ ಚಕ್ರತೀರ್ಥ ‘ನಮ್ಮ ನಾಡಿನ ಹೆಮ್ಮೆಯ ಇತಿಹಾಸ’ ಮತ್ತು ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ‘ನಮ್ಮ ಕನ್ನಡ ಇಂದು ನಿನ್ನೆ ನಾಳೆ’ಯ ಬಗ್ಗೆ ಮಾತನಾಡಿದರು.
ಸಾಹಿತಿ ಯು.ಬಿ. ಪವನಜ, ದೇವಳದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯನ್, ಕಿರಣ್ ಕುಮಾರ್ ಶೆಟ್ಟಿ, ಗ್ರೆಗರಿ ತಾವ್ರೋ, ಪಿಯು ಕಾಲೇಜಿನ ಪ್ರಿನ್ಸಿಪಾಲ್ ಕುಸುಮಾವತಿ, ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಚಂದ್ರಶೇಖರ ಭಟ್ ಉಪಸ್ಥಿತರಿದ್ದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣ ಕಾಂಚನ್ ವಂದಿಸಿ, ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ರಾಜ್‌ಶೇಖರ್ ಕಾರ್ಯಕ್ರಮ ನಿರೂಪಿಸಿದರು.
ದಿನಾಂಕ 02-12-2023ರಂದು ನಡೆದ ವಿಚಾರಗೋಷ್ಠಿಯಲ್ಲಿ ಅಷ್ಟಾವಧಾನಿ ಕಬ್ಬಿನಾಲೆ ಡಾ. ವಸಂತ ಭಾರಧ್ವಾಜ್ ಇವರು ‘ಯಕ್ಷಗಾನ ಮತ್ತು ಸಂಸ್ಕಾರ’ ಎಂಬ ವಿಷಯ ಬಗ್ಗೆ ಮಾತನಾಡಿ “ಭಾರತೀಯ ಸಂಸ್ಕಾರದ ಪುರಾಣ ಜ್ಞಾನವನ್ನು, ಶುದ್ಧ ಕನ್ನಡವನ್ನು, ಅನೇಕ ಪದಗಳನ್ನು, ಯಕ್ಷಗಾನದಿಂದ ಪಡೆಯಲು ಸಾಧ್ಯವಿದೆ. ಚಿಕ್ಕಂದಿನಿಂದಲೇ ಯಕ್ಷಗಾನವನ್ನು ನೋಡುತ್ತ ಕೇಳುತ್ತ ಪುರಾಣ ಜ್ಞಾನವನ್ನು ಕೇಳುತ್ತ ಬಂದಿದ್ದೇವೆ. ಚಿಕ್ಕ ಮಕ್ಕಳೂ ಕೂಡ ಸೀತೆಯ ಪಾತಿವೃತ್ಯ, ಭರತನ ಭ್ರಾತೃಪ್ರೇಮವನ್ನು ಅರಿಯುವುದು ಸಾಧ್ಯವಾಗಿದೆ. ಕಾವ್ಯ ಸಂಸ್ಕಾರವನ್ನು ಯಕ್ಷಗಾನದಿಂದ ತಿಳಿಯುವಂತಾಗಿದೆ. ಪುರಾಣದ ಅಂತರಂಗದ, ಧರ್ಮ ಅಧರ್ಮಗಳ ವಿವೇಚನವನ್ನು ಮಾಡಲು ಯಕ್ಷಗಾನದ ಸಂಸ್ಕಾರದಿಂದ ನಮ್ಮವರಿಗೆ ಸಾಧ್ಯವಾಗಿದೆ. ಯಕ್ಷಗಾನದಲ್ಲಿ ಕೇವಲ ಅರ್ಥ, ಪದ್ಯಗಳನ್ನು ಕೇಳುವುದಷ್ಟೇ ಅಲ್ಲದೆ ಅರ್ಥಾಂತರಗಳನ್ನು ಮನಸ್ಸಿಗೆ ತಂದುಕೊಳ್ಳುವ ಸಹೃದಯ ಮನೋವ್ಯಾಪಾರ ಸಾಧ್ಯವಾಗುತ್ತದೆ. ಭಾರತೀಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲು ಯಕ್ಷಗಾನದಿಂದ ಸಾಧ್ಯವಾಗಿದೆ. ಯಕ್ಷಗಾನದ ನೃತ್ಯ ವಿಧಾನದ ಮೂಲಕ ನಮ್ಮ ದೇಹಕ್ಕೆ ಬೇಕಾದ ವ್ಯಾಯಾಮದಿಂದ ಆರೋಗ್ಯ ಭಾಗ್ಯವನ್ನೂ ನೀಡುತ್ತದೆ” ಎಂದು ಹೇಳಿದರು.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ‘ಸಂಸ್ಕೃತ ಸಂಸ್ಕೃತಿ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಡಾ. ಕೆ.ಪಿ. ರಾವ್, ಮಾತನಾಡಿ, ಯಕ್ಷಗಾನ ಕಲಾಮಾಧ್ಯಮದ ಜೊತೆಗೆ ಮನೋರಂಜನೆಯ ಮಾಧ್ಯಮವೂ ಆಗಿದೆ. ಕಟೀಲು, ಧರ್ಮಸ್ಥಳ, ಮ೦ದಾರ್ತಿಯಂತಹ ಮೇಳಗಳ ಹೊರತಾಗಿ ಅನೇಕ ಮೇಳಗಳು ಪುರಾಣ ಪ್ರದರ್ಶನ ನೀಡದೆ ಯಕ್ಷಗಾನದ ಮಹತ್ವವನ್ನು ಅರ್ಥಮಾಡಿಕೊಳ್ಳದೆ ನೀಡುತ್ತಿರುವ ಪ್ರದರ್ಶನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. ಈ ತಲೆಮಾರಿಗೆ ಯಾವ ಸಂಸ್ಕಾರವನ್ನು ನೀಡುತ್ತಿದ್ದೇವೆ ಎಂದು ಯೋಚಿಸುವಂತಾಗಿದೆ” ಎಂದರು.
ಭಟ್ ಆ್ಯಂಡ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಸೆಲೆಬ್ರಿಟಿಯಾಗಿರುವ ಸುದರ್ಶನ್ ಬೆದ್ರಾಡಿ, ಹೋಳಿಗೆ ಉದ್ಯಮದ ಮೂಲಕ ಸಾಧನೆ ಮಾಡಿರುವ ಸುಧಾಕರ ಅಸೈಗೋಳಿ, 25 ವರುಷಗಳಿಂದ ಕಮ್ಮಾರಿಕೆ ಕಾಯಕದಿಂದ ಯಶಸ್ಸನ್ನು ಕಂಡಿರುವ ಲೀಲಾವತಿ ಆಚಾರ್ಯ ಗುತ್ತಿಗಾರು ಮತ್ತು ಯಶೋದಾ ಲಾಯಿಲ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಪಚ್ಚನಾಡಿ ನುಡಿಹಬ್ಬದಲ್ಲಿ ಜನಸಾಮಾನ್ಯ ಸಾಧಕರು ಗೋಷ್ಠಿಯಲ್ಲಿ ಮಾತನಾಡಿದರು. ಖ್ಯಾತನಾಮರ ಹಸ್ತಾಕ್ಷರ, ಅಂಚೆ ಚೀಟಿ ಮುಂತಾದ ತನ್ನ ಸಂಗ್ರಹದ ವೈಶಿಷ್ಟ್ಯಗಳನ್ನು ರಾಮಕೃಷ್ಣ ಮಲ್ಯ ಪ್ರದರ್ಶಿಸಿದರು.
ಕಟೀಲು ವಿದ್ಯಾ ಸಂಸ್ಥೆಯ ಹಳೆವಿದ್ಯಾರ್ಥಿಗಳಾದ ಸುಂದರ ಪೂಜಾರಿ ನಿಡ್ಡೋಡಿ, ಸುದೀಪ್ ಶೆಟ್ಟಿ ಶಿಬರೂರು, ತಾರಾನಾಥ ಶೆಟ್ಟಿ ಕೊಡೆತ್ತೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಟೀಲು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪೃಥ್ವಿರಾಜ ಕವತ್ತಾರು ಕಲ್ಪನೆಯ ಲಕ್ಷಣ ಮರಕಡ ನಿರ್ದೇಶನದಲ್ಲಿ ಪ್ರದರ್ಶಿತ ‘ಚಕ್ರವ್ಯೂಹ’ ಯಕ್ಷಗಾನ ನೋಡುಗರನ್ನು ರಂಜಿಸಿತು. ಒಂದೇ ಕಾಲಕ್ಕೆ ಇಬ್ಬರು ಭಾಗವತರು ಆರು ಚೆಂಡೆ, ಮೂರು ಮದ್ದಲೆ, ಮೂರು ಚಕ್ರತಾಳಗಳ ಹಿಮ್ಮೇಳಕ್ಕೆ ನಲವತ್ತು ಕಲಾವಿದರು ಪ್ರದರ್ಶಿಸಿದ ಚಕ್ರವ್ಯೂಹದಲ್ಲಿ ಪರಂಪರಯ ಪಾಂಡವರ ವೇಷ ಮತ್ತು ಒಡ್ಡೋಲಗ, ಸಂಶಪಕ್ತರ ಒಡ್ಡೋಲಗ, ಪರಂಪರೆಯ ದ್ರೋಣ, ಸುಭದ್ರೆಯ ವಿಶಿಷ್ಟ ಪ್ರವೇಶವಲ್ಲದ ಚಕ್ರವ್ಯೂಹದ ವಿಶಿಷ್ಠ ಸಂಯೋಜನೆಯಿಂದ ನಡೆದ ಯಕ್ಷಗಾನ ಆಕರ್ಷಕವಾಗಿ ಪ್ರೇಕ್ಷಕರ ಮನಸೂರೆಗೊಂಡಿತು.
ದಿನಾಂಕ 03-12-2023ರಂದು ಸಮಾರೋಪಗೊಂಡ ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ “ಕಟೀಲು ದೇಗುಲವು ದಶಕಗಳಿಂದ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯಲ್ಲೂ ಉತ್ತೇಜಿಸುತ್ತಾ ಬಂದಿದೆ. ದೇಗುಲ ವಾರ್ಷಿಕ ಒಂಭತ್ತೂವರೆ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿರುವುದು ಅಭಿನಂದನೀಯ” ಎಂದರು.
ನುಡಿಹಬ್ಬ ಸಮಾರೋಪದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷ ಕೆ.ಪಿ ರಾವ್ ಹಾಗೂ ಸಂಸ್ಥೆಯ ಸಾಧಕ ಹಿರಿಯ ವಿದ್ಯಾರ್ಥಿಗಳಾದ ಚಂದ್ರಶೇಖರ ಬೆಳ್ಚಡ ಮತ್ತು ಸೀತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಸನತ್ ಕುಮಾರ ಶೆಟ್ಟಿ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಜೆ.ಸಿ ಕುಮಾರ್, ಯೂನಿಯನ್ ಬ್ಯಾಂಕಿನ ಮಹೇಶ್ ಬಿಪಿನ್ ಪ್ರಸಾದ್ ಶೆಟ್ಟಿ, ಡಾ. ಸುರೇಶ್ ರಾವ್ ಮತ್ತಿತರರಿದ್ದರು. ಕ.ಸಾ.ಪ. ಅಧ್ಯಕ್ಷ ಡಾ. ಶ್ರೀನಾಥ್, ವಿದ್ಯಾರ್ಥಿ ಅನಿಕೇತ್ ಬರೆದ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಶೈಲಜಾ ನಿರೂಪಿಸಿದರು. ಚಂದ್ರಶೇಖರ ಭಟ್ ವಂದಿಸಿದರು.
ವಿಚಾರಗೋಷ್ಟಿಯಲ್ಲಿ ‘ಭ್ರಷ್ಟಾಚಾರ ವಿರುದ್ಧದ ಹೋರಾಟ’ದ ಬಗ್ಗೆ ಹನುಮಂತ ಕಾಮತ್, ‘ಪರಿಸರ ಹೋರಾಟ’ದ ಬಗ್ಗೆ ದಿನೇಶ್ ಹೊಳ್ಳ ಮತ್ತು ಜೈ ಭಾರತ ಜನನಿಯ ತನುಜಾತೆ ಗೋಷ್ಠಿಯಲ್ಲಿ ಸೈನಿಕ ಕ್ಯಾಪ್ಟನ್ ನವೀನ್ ನಾಗಪ್ಪ ಕಾರ್ಗಿಲ್ ಯುದ್ದ ಹಾಗೂ ಸೇನೆಯ ಕುರಿತು ವಿಚಾರ ಮಂಡನೆ ಮಾಡಿದರು.
‘ರಂಗಭೂಮಿ ಮತ್ತು ಸಿನಿಮಾ’ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಿನಿಮಾ ನಟಿ ರಚಿತಾ ರಾಮ್ “ವಿದ್ಯಾರ್ಥಿಗಳು ಹೆತ್ತವರನ್ನು ಮತ್ತು ಕಲಿಸುವ ಗುರುಗಳನ್ನು ಗೌರವದಿಂದ ಕಾಣಬೇಕು. ಅವಕಾಶ ಸಿಕ್ಕಾಗಲೆಲ್ಲ ಮಿಸ್ ಮಾಡದೆ ಸದುಪಯೋಗ ಪಡಿಸಿಕೊಳ್ಳಿ. ಅದುವೇ ನಮ್ಮ ಬದುಕಿನ ದಾರಿ ದೀಪವಾಗಬಹುದು” ಎಂದು ಹೇಳಿದರು. ನಟ ರಮೇಶ್ ಭಟ್ ಮಾತನಾಡಿ, ಎಲ್ಲಾ ಜನರಲ್ಲಿ ಒಬ್ಬೊಬ್ಬ ಕಲಾವಿದನಿದ್ದು, ಅದು ಬೇರೆ ಬೇರೆ ರೀತಿಯದ್ದಾಗಿರಬಹುದು, ಆಸಕ್ತಿದಾಯಕ ಕೆಲಸದಲ್ಲಿ ತೊಡಗಿಸಿಕೊಂಡು ಅದರ ಜೊತೆ ಕೇಂದ್ರೀಕತಗೊಳಿಸಿ. ಆಗ ಸಾಧನೆ ಸಾಧ್ಯ. ಮಕ್ಕಳು ಪಾಠ ಮಾತ್ರವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ” ಎಂದು ಹೇಳಿದರು.
ಉದ್ಯಮಿಗಳಾದ ಮೋಹನ್ ಕುಮಾರ್ ಮಂಗಳೂರು, ಗಿರೀಶ್ ಶೆಟ್ಟಿ ಕಟೀಲು, ಪ್ರಶಿಲ್ ಶೆಟ್ಟಿ ಕುಡ್ತಿಮಾರುಗುತ್ತು, ವೃಂದಾ ಹೆಗ್ಡೆ, ಕಮಲಾದೇವಿ ಪ್ರಸಾದ್ ಅಸ್ರಣ್ಯ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ರಾಜಶೇಖರ್ ನಿರೂಪಿಸಿದರು. ನಾಲ್ಕು ವಿದ್ಯಾರ್ಥಿಗಳು ರಚಿತಾ ರಾಮ್ ಅವರ ಬೇರೆ ಬೇರೆ ರೀತಿಯ ಭಾವಚಿತ್ರ ರಚಿಸಿದ್ದು, ಸ್ವತಃ ರಚಿತಾ ರಾಮ್, ಮಕ್ಕಳನ್ನು ವೇದಿಕೆಗೆ ಕರೆದು ಅವರೊಂದಿಗೆ ಚಿತ್ರ ಬಿಡಿಸಿದ ಬಗ್ಗೆ ವಿವರಣೆ ಕೇಳಿದರು. ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆಸಿ ಹಾಡು ಹಾಡುವಂತೆ ಪ್ರೇರೇಪಿಸಿ ಹಾಡಿಸಿದರು.
ಇದೇ ಸಂದರ್ಭದಲ್ಲಿ ಕಟೀಲು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ನಡೆದ ನೃತ್ಯ ವೈವಿಧ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ವಿದ್ಯಾರ್ಥಿಗಳು ಗಾದೆ ಮಾತು, ನುಡಿಮುತ್ತು, ನದಿಗಳ ಹೆಸರು, ಪುಟಾಣಿ ಮಕ್ಕಳು ರಾಶಿಗಳ, ನಕ್ಷತ್ರಗಳ ಹೆಸರು, ಸಂವತ್ಸರಗಳು ಹೀಗೆ ವಿಚಾರ ವೈವಿಧ್ಯಗಳನ್ನು ಹೇಳಿ ಪ್ರತಿಭೆ ಪ್ರದರ್ಶಿಸಿದರು. ಪಿಯುಸಿ ವಿದ್ಯಾರ್ಥಿಗಳು ಸಂಗೀತ ಪ್ರಕಾರದ ವೈವಿಧ್ಯಗಳನ್ನು ಹಾಡಿ ತೋರಿಸಿದರು. ರಂಗಗೀತೆ, ಭಾವಗೀತೆ, ಜನಪದ, ಯಕ್ಷಗಾನ, ಭಕ್ತಿಗೀತೆ, ಕೀರ್ತನೆ, ವಚನ ಹೀಗೆ ನಾನಾ ಗೀತಾವೈವಿಧ್ಯ ಕೇಳುಗರನ್ನು ಮುದಗೊಳಿಸಿತು.