ವೀಣಾ ಶ್ರೀನಿವಾಸ್ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದಿನಾಂಕ 06 ಸೆಪ್ಟೆಂಬರ್ 1971ರಲ್ಲಿ ಜನಿಸಿದರು. ಇವರು ಮೂವರು ಹೆಣ್ಣುಮಕ್ಕಳಲ್ಲಿ ಎರಡನೆಯವರಾಗಿದ್ದು, ತಾಯಿ ಶ್ರೀಮತಿ ಸಖು ಕಾಮತ್ ಗ್ರಹಿಣಿಯಾಗಿದ್ದರು. ಅವರ ತಂದೆ ಉಡುಪಿಯ ಶ್ರೀ ಜಯವಂತ ಕಾಮತ್ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿದ್ದು ಉಡುಪಿಯಲ್ಲಿ ನೆಲೆಸಿದ್ದಾರೆ.
ಕುಟುಂಬದ ಪ್ರೋತ್ಸಾಹವೇ ಕಲಾತ್ಮಕ ಬೆಳವಣಿಗೆಗೆ ಉತ್ತೇಜನ ನೀಡಿತು. ವೀಣಾ ಶ್ರೀನಿವಾಸ್ ಅವರ ತಂದೆಯ ತಂದೆ ದಿವಂಗತ ವೆಂಕಟರಾಯ ಕಾಮತ್ ಖ್ಯಾತ ಕಲಾವಿದರಾಗಿದ್ದರು. ಅವರು ಮುಂಬೈನ ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ನಲ್ಲಿ ಶಿಕ್ಷಣ ಪಡೆದಿದ್ದು, ಹೆಸರಾಂತ ಚಿತ್ರಕಾರ ಕೆ.ಕೆ. ಹೆಬ್ಬಾರ್ ಅವರ ಸಮಕಾಲೀನರಾಗಿದ್ದರು. ಅಜ್ಜನಲ್ಲಿದ್ದ ಕಲಾ ಪ್ರತಿಭೆ ದೈವದತ್ತವಾಗಿ ವೀಣಾ ಶ್ರೀನಿವಾಸ್ ಅವರಿಗೂ ಒಲಿದು ಬಂದಿತ್ತೆನ್ನಬಹುದು.
ವೀಣಾ ಶ್ರೀನಿವಾಸ್ ಅವರ ಬಾಲ್ಯ ಅನೇಕ ಊರುಗಳಲ್ಲಿ ಕಳೆದಿದೆ. ವೀಣಾ ಶ್ರೀನಿವಾಸ್ ಅವರ ತಂದೆ ಉದ್ಯೋಗ ನಿಮಿತ್ತ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಇವರ ಶಿಕ್ಷಣವು ಬೆಂಗಳೂರು, ದೆಹಲಿ ಹಾಗೂ ಉಡುಪಿ ನಗರಗಳಲ್ಲಿ ನಡೆಯಿತು. ಶಾಲಾ ದಿನಗಳಲ್ಲಿಯೇ ಇವರು ಚಿತ್ರಕಲೆಯ ತರಬೇತಿಯನ್ನು ಪಡೆಯುತ್ತಿದ್ದರು. ಉಡುಪಿಯಲ್ಲಿ ಇದ್ದ ಸಂದರ್ಭದಲ್ಲಿ, ಅವರು ಪ್ರಖ್ಯಾತ ಕಲಾವಿದ ಕೆ.ಎಲ್. ಭಟ್ಟ ಅವರ ಶಿಷ್ಯೆಯಾಗಿದ್ದರು. ಪಿ.ಯು.ಸಿ. ಶಿಕ್ಷಣದ ಸಂದರ್ಭದಲ್ಲಿ ದೆಹಲಿಯಲ್ಲಿ ಸುಬ್ಬಣ್ಣ ಸರ್ ಎಂಬ ಕಲಾ ಗುರುವಿನ ಮಾರ್ಗದರ್ಶನದಿಂದ ಅವರ ಕಲಾತ್ಮಕ ಪಯಣಕ್ಕೆ ಹೊಸ ದಿಕ್ಕು ಸಿಕ್ಕಿತು.
ಮದುವೆಯಾದ ನಂತರ ಪ್ರತಿಗೃಹದಲ್ಲಿ ಮನೆಯಲ್ಲಿ ಕುಳಿತು ವಿನಾಕಾರಣ ಕಾಲಹರಣ ಮಾಡುವುದು ವೀಣಾ ಶ್ರೀನಿವಾಸ್ ಅವರ ಮನಸ್ಸಿಗೆ ಹಿತವೆನಿಸುತಿರಲಿಲ್ಲ. “ನಮಗೆ ದೇವರು ಕೊಟ್ಟ ಪ್ರತಿಭೆಯನ್ನು ಮೂಲೆಗುಂಪು ಮಾಡದೆ, ಅದಕ್ಕೆ ನೀರೆರೆಯುವುದು ನಮ್ಮ ಕರ್ತವ್ಯ” ಎಂದು ಅವರು ನಂಬಿದರು. ಮದುವೆಯಾದ ಬಳಿಕ ವೀಣಾ ಶ್ರೀನಿವಾಸ್ ಅವರ ನಿಜವಾದ ಕಲಾ ಪಯಣ ಪ್ರಾರಂಭವಾಯಿತು. ಮಂಗಳೂರಿನಲ್ಲಿ ಖ್ಯಾತ ಕಲಾವಿದ ಎಂ.ಆರ್. ಪಾವಂಜೆ ಅವರ ಮಾರ್ಗದರ್ಶನದಲ್ಲಿ, ಅವರು ಚಿತ್ರಕಲೆಯ ವಿವಿಧ ತಂತ್ರಗಳನ್ನು ಆಳವಾಗಿ ಅಧ್ಯಯನ ಮಾಡಲಾರಂಭಿಸಿದರು. ಗುರುಗಳು ಹೇಳಿಕೊಡುತ್ತಿದ್ದ ಪ್ರತಿಯೊಂದು ಮಾಧ್ಯಮವನ್ನೂ ಅವರು ಆಸಕ್ತಿಯಿಂದ ಅಭ್ಯಾಸ ಮಾಡತೊಡಗಿದರು – ಪೆನ್ಸಿಲ್ ಶೇಡಿಂಗ್, ಚಾರ್ಕೋಲ್, ಏಕ್ರಿಲಿಕ್, ತೈಲವರ್ಣ ಮುಂತಾದವುಗಳಲ್ಲಿ ಕೌಶಲ್ಯ ಬೆಳೆಸಿದರು. ಇದರಿಂದ, ಅವರ ಕಲೆಯಲ್ಲಿ ಹೊಸ ಆಯಾಮಗಳ ಉದಯವಾಗಿದ್ದು, ಅವರ ಕಲಾತ್ಮಕ ವ್ಯಕ್ತಿತ್ವಕ್ಕೆ ಮತ್ತಷ್ಟು ಸ್ಪಷ್ಟತೆ ನೀಡಿತು. ವೀಣಾ ಶ್ರೀನಿವಾಸ್ ಅವರಿಗೆ ಚಿತ್ರಕಲೆ ಮಾತ್ರವಲ್ಲ, ಸಂಗೀತದಲ್ಲಿಯೂ ಅಪಾರ ಆಸಕ್ತಿ.
ಕಲಾವಿದ ವೀಣಾ ಶ್ರೀನಿವಾಸ್ ರವರ ಕುಟುಂಬ
ಪತಿ ಶ್ರೀ ಪಿ. ಶ್ರೀನಿವಾಸ್ ಭಂಡಾರಿ ಮಗಳು ತಪಸ್ಯ ಭಂಡಾರಿ ಅತ್ತೆ ರಾಧಾ ಭಂಡಾರಿ ಹಾಗೂ ಮಾವ ಪಿ. ಕೃಷ್ಣ ಭಂಡಾರಿ
ಕಲಾವಿದ್ಯಾರ್ಥಿಯು ಒಂದು ಹಂತಕ್ಕೆ ಬಂದಾಗ, ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಒಮ್ಮೆ ವೀಣಾ ಶ್ರೀನಿವಾಸ್ ಅವರು ಕುಮಟಕ್ಕೆ ಗುರುಗಳಾದ ಶ್ರೀ ಎಂ.ಆರ್. ಪಾವಂಜೆಯವರೊಟ್ಟಿಗೆ ಪ್ರಯಾಣ ಮಾಡಿದರು. ಆ ಪ್ರಯಾಣದ ಸಂದರ್ಭದಲ್ಲಿ ಅಲ್ಲಿರುವ ಮಹಾಲಸ ನಾರಾಯಣಿ ದೇವಸ್ಥಾನಕ್ಕೆ ಶ್ರೀ ಅಶೋಕ್ ಕಿಣಿಯವರು ಕರೆದುಕೊಂಡು ಹೋದರು. ಈ ಕಾವಿ ಕಲೆಯ ಸೌಂದರ್ಯವನ್ನು ಸವಿಯುವ ಹಾಗೂ ಗ್ರಹಿಸುವ ಶಕ್ತಿ ಬಹುಷಃ ಕಲಾವಿದರಿಗೆ ಮಾತ್ರ ಇರುವುದು. ಇದನ್ನು ನೋಡದೆ ನಿನ್ನನ್ನು ವಾಪಸ್ ಮಂಗಳೂರಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿ ಶ್ರೀ ಅಶೋಕ್ ಕಿಣಿಯವರು ವೀಣಾ ಶ್ರೀನಿವಾಸ್ ರವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದನ್ನು ಇವತ್ತಿಗೂ ಸ್ಮರಿಸುತ್ತಾರೆ. ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಕಲಾಕೃತಿಗಳನ್ನು ನೋಡಿದ ನಂತರ, ವೀಣಾ ಶ್ರೀನಿವಾಸ್ ಅವರಿಗೆ ಕಾವಿ ಕಲೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಆಸಕ್ತಿ ಮೂಡಿತು. ಈ ಆಸಕ್ತಿಯು ಅವರನ್ನು ಕಾವಿ ಕಲೆಯ ಕುರಿತು ಗಂಭೀರವಾಗಿ ಸಂಶೋಧನೆ ನಡೆಸುವಂತೆ ಪ್ರೇರೇಪಿಸಿತು. ಈ ಅಧ್ಯಯನದ ಮೂಲಕ, ವೀಣಾ ಶ್ರೀನಿವಾಸ್ ಅವರ ಕಾವಿ ಕಲೆಯ ನಿಜವಾದ ಪಯಣ ಪ್ರಾರಂಭವಾಯಿತು. ಅವರ ಸಂಶೋಧನೆಗಳಿಂದ, ಕಾವಿ ಕಲೆಯ ಪರಂಪರೆಯನ್ನು ಸಾರಸ್ವತ ಜನಾಂಗದವರು ಪ್ರಾರಂಭಿಸಿದರೆಂಬ ಮಾಹಿತಿಯೂ ಲಭಿಸಿತು.
ಈ ಸಂಶೋಧನೆಯು ಅವರ ಮನಸ್ಸಿನಲ್ಲಿ ಹೊಸ ಆಲೋಚನೆಗೆ ಕಾರಣವಾಯಿತು. ಸಾರಸ್ವತ ವ್ಯಕ್ತಿಯಾದ ನಾನು ನಮ್ಮ ಸಮಾಜದ ಕಲೆ – ಕಾವಿ ಕಲೆಯನ್ನು ಉಳಿಸಿ ಬೆಳೆಸುವುದು ನನ್ನದೇ ಜವಾಬ್ದಾರಿ ಎಂಬ ಭಾವನೆ ಬೇರೂರಿತ್ತು ಎನ್ನುತ್ತಾರೆ. ಇದರಿಂದ, ಕಾವಿ ಕಲೆಯ ಅಧ್ಯಯನವನ್ನು ಗಂಭೀರವಾಗಿ ಕೈಗೊಳ್ಳುವ ಹಾಗೂ ನೈಪುಣ್ಯತೆಯನ್ನು ಬೆಳೆಸಿಕೊಳ್ಳುವ ಇಚ್ಛೆ ಬಲವಾಯಿತು. ಅವರು ಕಾವಿ ಕಲೆಯನ್ನು ಆಳವಾಗಿ ಅರಿತು, ಹೊಸ ಕಲಾಕೃತಿಗಳನ್ನು ರಚಿಸುವುದು ತಮ್ಮ ಕಲಾತ್ಮಕ ಪ್ರವೃತ್ತಿಯ ಅವಿಭಾಜ್ಯ ಭಾಗವಾಗಬೇಕೆಂದು ನಿರ್ಧರಿಸಿದರು. ಈ ಅಭ್ಯಾಸ ಮಾತ್ರವಲ್ಲ, ಅವರು ತಮ್ಮ ಕಲಾ ಪ್ರಯೋಗಗಳನ್ನು ಪ್ರದರ್ಶಿಸಲು ಕಲಾ ಪ್ರದರ್ಶನಗಳನ್ನು ಸಹ ಆಯೋಜಿಸಿದರು. ಈ ಮೂಲಕ, ಕೇವಲ ಕಲೆಯ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ, ಅದನ್ನು ಜನರ ಮುಂದೆ ತಲುಪಿಸುವ ಹೊಣೆಗಾರಿಕೆಯನ್ನೂ ಅವರು ಸ್ವೀಕರಿಸಿದರು. ಇದು ಕೇವಲ ಕಲಾವಿದೆಯಾಗಿ ಬೆಳೆಯುವ ಒಂದು ಹಂತವಲ್ಲ, ಸಂಸ್ಕೃತಿಯ ಸಂರಕ್ಷಣೆಯತ್ತ ಅವರ ಮುಂದುವರೆದ ಹೆಜ್ಜೆಯಾಗಿತ್ತು.
ಇವರು ಅನೇಕ ಕಾರ್ಯಾಗಾರಗಳು ಹಾಗೂ ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಹಾಗೂ ಸಾಮೂಹಿಕ ಕಲಾ ಪ್ರದರ್ಶನಗಳನ್ನು ನಡೆಸಿ, ಕಲಾಸೇವೆಯ ಮೂಲಕ ಜನಮನ್ನಣೆಯನ್ನು ಗಳಿಸಿದ್ದಾರೆ. ಇವರ ಕಲಾ ಸಾಧನೆಯನ್ನು ಗುರುತಿಸಿ, ಮಾನಿಕರ್ಣಿಕಾ ಅಮೃತಾ ಶೇರ್-ಗಿಲ್ ಕಲಾ ಪ್ರಶಸ್ತಿ, ಮಾನಿಕರ್ಣಿಕಾ ಮಹಿಳಾ ಕಲಾ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ವರ್ಣಶ್ರೀ’ ಪ್ರಶಸ್ತಿ, ‘ಉಪಾಧ್ಯಾಯ ಸಮ್ಮಾನ್’ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ‘ಯುವ ಸಾಧಕಿ ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳು ಹಾಗೂ ಗೌರವಗಳನ್ನು ಪಡೆದಿದ್ದಾರೆ.
ಕಲಾಕೃತಿಗಳ ಹರವು

ಕಾವಿ ಕಲೆ – ಚಂದ್ರ ಮಂಡಲ

ಕಾವಿ ಕಲೆ: ಸೂರ್ಯ ಮಂಡಲ

ಕಾಲಚಕ್ರ

ಕಾವಿ ಕಲೆ:ರಾಮಾಯಣ – ಸೀತಾ ಸ್ವಯಂವರ

ಕಾವಿ ಕಲೆ: ಸಪ್ತ ಮಾತೃಕೆಯರು

ಕಾವಿ ಕಲೆ: ಶಾಶ್ವತ ಪ್ರೀತಿ

ಕಾವಿ ಕಲೆ: ಮಹಾಲಕ್ಷ್ಮಿ

ಕಾವಿ ಕಲೆ:ಮೂರು ಮುಖಗಳನ್ನು ಹೊಂದಿರುವ ಗಣಪತಿ ಮುದ್ಗಲಪುರಾಣದಲ್ಲಿ ನೀಡಿರುವಂತೆ

ಕಾವಿ ಕಲೆ:ಶ್ರೀಕರಮೂರ್ತಿಯ ಧ್ಯಾನ ಪಾಂಚರಾತ್ರದಲ್ಲಿ ನೀಡಿದ ಹಾಗೆ

ಪ್ರಕಾರ: ಕಾವಿ ಕಲೆ
ಮಾಧ್ಯಮ: ಕ್ಯಾನ್ವಾಸ್ ಮೇಲೆ ಅಕ್ರಿಲಿಕ್
ಶೀರ್ಷಿಕೆ: ಆಂಡಾಳ್

ದಶಾವತಾರ

ಪ್ರಕಾರ: ಕಾವಿ ಕಲೆ
ಮಾಧ್ಯಮ: ಕ್ಯಾನ್ವಾಸ್ ಮೇಲೆ ಅಕ್ರಿಲಿಕ್
ಶೀರ್ಷಿಕೆ: ದಶಾವತಾರ (ಮೂಲ – ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ)

ಕಾವಿ ಕಲೆ: ಕರ್ಣ (ಮೂಲ – ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ)

ಕಾವಿ ಕಲೆ: ಸಾರಥ್ಯ (ಮೂಲ – ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ)

ಕಾವಿ ಕಲೆ: ಗಾಯಿ ಗೋಪಾಲ್

ಕಾವಿ ಕಲೆ:ಸಪ್ತಮಾತ್ರಿಕ
ಕಾವಿ ಕಲೆ: ಗಣಪತಿ (ಮೂಲ – ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ)

ಕಾವಿ ಕಲೆ:ಪಂಚಮುಖಿ ಶಿವ (ಮೂಲ – ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ)

ರವಿಕಿರಣ್ ಹಾರ್ನಡ್ಕ
ಗ್ರಾಫಿಕ್ ಮತ್ತು ದೃಶ್ಯ ವಿನ್ಯಾಸ ತಜ್ಞ
