Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಶೇಷ ಲೇಖನ | ಕರ್ನಾಟಕದ ಯಶಸ್ವೀ ಮಹಿಳಾ ಲೇಖಕಿ – ನೇಮಿಚಂದ್ರ ಮಲ್ಹೋತ್ರ
    Birthday

    ವಿಶೇಷ ಲೇಖನ | ಕರ್ನಾಟಕದ ಯಶಸ್ವೀ ಮಹಿಳಾ ಲೇಖಕಿ – ನೇಮಿಚಂದ್ರ ಮಲ್ಹೋತ್ರ

    July 16, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದ ಹೆಸರಾಂತ ಕವಯಿತ್ರಿ ನೇಮಿಚಂದ್ರ ಮಲ್ಹೋತ್ರ ಆಗಲೇ ಬೇಕು ಎಂಬುದು ಮನಸ್ಸಿಗೆ ಬಂದಾಗ ಮಾಡಿ ತೋರಿದ ದಿಟ್ಟ ಮಹಿಳೆ. ಇವರು ತಮ್ಮ ಸಣ್ಣ ಕಥೆ, ಕಾದಂಬರಿ ಮತ್ತು ವೈಚಾರಿಕ ಲೇಖನಗಳ ಮೂಲಕ ಖ್ಯಾತರಾಗಿದ್ದಾರೆ. 16 ಜುಲೈ 1959ರಲ್ಲಿ ಚಿತ್ರದುರ್ಗದಲ್ಲಿ ಇವರ ಜನನವಾಯಿತು. ಇವರ ತಂದೆ ಪ್ರೊ. ಜಿ. ಗುಂಡಣ್ಣ ಒಂದು ಕಾಲೇಜಿನ ಪ್ರೊಫೆಸರ್ ಆಗಿದ್ದರು. ಬಟ್ಟೆಬರೆಗಳಿಗೆ ಆಗಾಗ ಹಾಕುವ ಹಣ ನಿಷ್ಪ್ರಯೋಜಕ ಎಂಬ ಮನೋಭಾವನೆ ಅವರದು. ಹೀಗಾಗಿ ಯಥೇಚ್ಛವಾಗಿ ಉತ್ತಮ ಪುಸ್ತಕಗಳನ್ನು ಖರೀದಿಸಿ ಮನೆಯಲ್ಲಿಯೇ ಒಂದು ಸುಂದರ ಗ್ರಂಥಾಲಯದ ನಿರ್ಮಾಣ ಮಾಡಿದ್ದರು. ತಾಯಿ ತಿಮ್ಮಕ್ಕ ಅನಕ್ಷರಸ್ಥರಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ಪ್ರೋತ್ಸಾಹ ನೀಡಿದವರು.

    ನೇಮಿಚಂದ್ರರು ಪ್ರಾಥಮಿಕ ಶಿಕ್ಷಣವನ್ನು ತುಮಕೂರು ಮತ್ತು ಮೈಸೂರಿನಲ್ಲಿ ಪೂರೈಸಿ, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಿಂದ ಬಿ.ಇ. ಪದವಿ ಪಡೆದು, ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂ.ಎಸ್. ಪದವಿ ಮುಗಿಸಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಇವರು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್.) ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ವೃತ್ತಿ ಜೀವನದ ನಡುವೆ ಹೆಚ್ಚಿನ ಸಮಯವನ್ನು ಸಾಹಿತ್ಯ ಕೃಷಿಗೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದರು.

    ತಂದೆಯ ಉತ್ತಮ ಪುಸ್ತಕಗಳ ಸಂಗ್ರಹಗಳಿಂದಾಗಿ ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ. ಮುಂತಾದ ಶ್ರೇಷ್ಠ ಕವಿಗಳ ಮತ್ತು ಅವರ ಕವನಗಳ ಪರಿಚಯ ಮಾತ್ರವಲ್ಲದೆ ಷೇಕ್ಸ್ಪಿಯರ್, ಬರ್ನಾಡ್ ಶಾ, ಶೆಲ್ಲಿ, ಕೀಟ್ಸ್, ವರ್ಡ್ಸ್ ವರ್ತ್ ಇವರೆಲ್ಲರ ಪರಿಚಯವೂ ನೇಮಿಚಂದ್ರರಿಗೆ ಮನೆಯ ಗ್ರಂಥಾಲಯದಲ್ಲಿಯೇ ದೊರೆಯಿತು. ಬದುಕಿನಲ್ಲಿ ನಾವೇ ಆಯ್ದುಕೊಳ್ಳುವ ಆದರ್ಶ ವ್ಯಕ್ತಿಗಳು ನಮ್ಮ ಮೇಲೆ ಬಹಳ ಪ್ರಭಾವ ಬೀರುವಂತೆ ನೇಮಿಚಂದ್ರರು ಹತ್ತನೇ ತರಗತಿಯಲ್ಲಿವಾಗ ತಂದೆಯವರ ಗ್ರಂಥಾಲಯದಲ್ಲಿ ದೊರೆತ ಮೇರಿ ಕ್ಯೂರಿಯ ಒಂದು ಪುಟ್ಟ ಪುಸ್ತಕವನ್ನು ಓದುತ್ತಾ ಓದುತ್ತಾ ಆಕೆಯ ಅಸಾಧಾರಣವಾದ ಬದುಕು ಇವರ ಮೇಲೆ ಅಗಾಧವಾದ ಪರಿಣಾಮ ಬೀರಿತು. ‘ಬೆಳಕಿನೊಂದು ಕಿರಣ’ ಎಂಬ ಕೃತಿಯಲ್ಲಿ ಮೇರಿ ಕ್ಯೂರಿಯ ಬಗ್ಗೆ ಬರೆದು ಅವರ ತಾಯಿ ತಿಮ್ಮಕ್ಕನಿಗೆ ಅರ್ಪಣೆ ಮಾಡಿದರು. ಮೇರಿ ಕ್ಯೂರಿಯ ಪ್ಯಾರಿಸ್ಸಿಗೆ ಹೋಗಬೇಕೆಂಬ ಅತಿಯಾದ ಹಂಬಲದಿಂದ ಸ್ವಲ್ಪ ಸ್ವಲ್ಪವೇ ಹಣವನ್ನು ಹೊಂದಿಸಿ ಪ್ಯಾರಿಸಿಗೆ ಹೋದರು. ಭಾಷೆ ಬಾರದ ಆ ದೇಶದಲ್ಲಿ ಮೇರಿ ಕ್ಯೂರಿಯ ಪ್ರಯೋಗಶಾಲೆಯೊಳಗೆ ಕಾಲಿಟ್ಟು ಅದನ್ನು ವೀಕ್ಷಿಸಿದ ಕ್ಷಣವೇ ಅತ್ಯಂತ ಭಾವುಕ ಕ್ಷಣವಾಗಿತ್ತು ಎಂದು ಅವರೇ ಹೇಳಿಕೊಳ್ಳುತ್ತಾರೆ.

    ನೇಮಿಚಂದ್ರರ ಬರಹದ ಮೇಲೆ ಅತಿಯಾಗಿ ಪ್ರಭಾವ ಬೀರಿದ್ದು ಸ್ತ್ರೀವಾದ. ಯಾವುದೇ ಸಾಹಿತ್ಯ ಕಾರ್ಯಕ್ರಮದ ವೇದಿಕೆಗಳಲ್ಲಿ ಪುರುಷರ ಕೃತಿಗಳ ಬಗ್ಗೆ ಚರ್ಚೆ ವಿಮರ್ಶೆ ನಡೆದು ಕಾರ್ಯಕ್ರಮ ಮುಗಿದು ಹೋಗುತ್ತಿತ್ತು. ಇದನ್ನು ಪ್ರಶ್ನಿಸಿದಾಗ “ಎಲ್ಲಿದ್ದಾರೆ ಮಹಿಳಾ ಸಾಹಿತಿಗಳು?, ಮಹಿಳೆಯರು ಎಲ್ಲಿ ಬರೆಯುತ್ತಿದ್ದರು? ಎಲ್ಲಾ ಅಡುಗೆ ಮನೆ ಸಾಹಿತ್ಯ.” ಎಂಬ ಟೀಕೆ ಬಂತು. ಇದನ್ನೇ ಸವಾಲಾಗಿ ಸ್ವೀಕರಿಸಿ, ಕನ್ನಡ ಲೇಖಕಿಯರ ಇತಿಹಾಸವನ್ನು ಪುನಃ ಸೃಷ್ಟಿ ಮಾಡಲು ಲೇಖಕಿಯರ ಸಂಘ ನಿರ್ಧಾರ ಮಾಡಿತು. ಮೊತ್ತಮೊದಲಿಗೆ ನೇಮಿಚಂದ್ರರ ಲೇಖನಿಯಿಂದ ಹೊರಬಂದದ್ದು ಸ್ವಾತಂತ್ರ್ಯ ಪೂರ್ವದ ಕನ್ನಡದ ಮಹಾನ್ ಕವಯಿತ್ರಿ ಬೆಳಗೆರೆ ಜಾನಕಮ್ಮನವರ ಕುರಿತು ಬರೆದ ಕೃತಿ ‘ಬೆಳೆಗೆರೆ ಜಾನಕಮ್ಮ’. ಸುಮಾರು ಮೂರು ದಶಕಗಳಿಂದಲೂ ಹೆಚ್ಚುಕಾಲ ಸಾಹಿತ್ಯ ಸೇವೆ ಮಾಡಿದ ಇವರು ಸಣ್ಣ ಕಥೆ, ವೈಜ್ಞಾನಿಕ ಲೇಖನಗಳು, ಪ್ರವಾಸ ಕಥನಗಳು, ಮಹಿಳಾ ಅಧ್ಯಯನಕ್ಕೆ ಸಂಬಂಧಪಟ್ಟ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವೈವಿಧ್ಯಮ ವಿಚಾರಗಳನ್ನು ಒಳಗೊಂಡ ಸಾಹಿತ್ಯ ಮತ್ತು ವೈಚಾರಿಕ ಲೇಖನಗಳು ವಾಚಕರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.

    ‘ನೇಮಿಚಂದ್ರರ ಕಥೆಗಳು’ ಇದು ಇವರ ಒಂದು ದೊಡ್ಡ ಕಥಾ ಸಂಕಲನ. ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕಥೆಗಳು’, ‘ಕಳೆಯಬೇಕಿದೆ ನಿನ್ನ ಜೊತೆಯಲ್ಲಿ ಒಂದು ಶ್ಯಾಮಲ ಸಂಜೆ’ ಇತ್ಯಾದಿ ಓದುಗರ ಬಹಳಷ್ಟು ಮೆಚ್ಚುಗೆ ಪಡೆದ ಇವರ ಕಥೆಗಳು. ನೇಮಿಚಂದ್ರರ ಕಾದಂಬರಿಗಳು ಬಹಳಷ್ಟು ಓದುಗರ ಮನಸ್ಸನ್ನು ಸೆರೆಹಿಡಿದಿವೆ. ಯಾವುದೇ ಕಾದಂಬರಿಯನ್ನು ಬರೆಯುವಾಗ ಒಂದು ಕಥಾ ವಸ್ತುವಿನ ಹಿನ್ನೆಲೆಯನ್ನು ಸ್ವತಹ ಅನುಭವಿಸಿ ಬರೆಯುವುದಕ್ಕಾಗಿ ಅವರು ಬಹಳಷ್ಟು ತಿರುಗಾಟವನ್ನು ನಡೆಸಿ, ತಮ್ಮ ಅನುಭವವನ್ನು ಅಭಿವ್ಯಕ್ತಪಡಿಸುವ ನಿಟ್ಟಿನಲ್ಲಿ ಇವರು ಯಶಸ್ವಿಯಾಗಿದ್ದಾರೆ. ಮಹಾಯುದ್ಧದ ಕಾಲದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವ ಕಥೆಯಲ್ಲಿ ಹುಡುಗಿ ಒಬ್ಬಳು ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ಹಳೆಯ ಬೆಂಗಳೂರಿನಲ್ಲಿ ಬಂದು ಬೆಳೆಯುತ್ತಾಳೆ. ಮತ್ತೆ ತಾನು ಕಳೆದುಕೊಂಡ ಕುಟುಂಬದ ಹುಡುಕಾಟದಲ್ಲಿ ಜರ್ಮನಿ, ಅಮೇರಿಕವನ್ನು ಸುತ್ತಿ ಇಸ್ರೇಲ್ – ಪ್ಯಾಲೆಸ್ಸಿನ ಪರಿಸರದಲ್ಲಿ ಬಂದು ಇಳಿಯುತ್ತಾಳೆ. ಇದೊಂದು ರೋಚಕ ಸಂದರ್ಭ. ನೇಮಿಚಂದ್ರರು ಈ ಕಥೆಯನ್ನು ಹೆಣೆಯುವುದಕ್ಕಾಗಿ ಸಂಬಂಧಪಟ್ಟ ದೇಶಗಳಿಗೆಲ್ಲ ತಿರುಗಾಡಿದ್ದು, ಒಂದು ಕೃತಿಗೆ ರಚನೆಯಲ್ಲಿ ಅವರೆಷ್ಟು ತಿರುಗಾಟ ನಡೆಸುತ್ತಾರೆ ಎಂಬುದಕ್ಕೆ ಸಾಕ್ಷಿ.

    ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ‘ಬೆಳಕಿಗೊಂದು ಕಿರಣ ಮೇರಿ ಕ್ಯೂರಿ’, ‘ವೆಲ್ಲೂರು ಆಸ್ಪತ್ರೆಯ ಸ್ಥಾಪಕರಾದ ಡಾ. ಈಡಾ ಸ್ಕಡರ್’, ‘ಥಾಮಸ್ ಅಲ್ವಾ ಎಡಿಸನ್’, ‘ಜೇನ್ ಗುಡಾಲ್’, ‘ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿಗಳು’ ಇತ್ಯಾದಿ ವಿಜ್ಞಾನಿಗಳ ಜನಪ್ರಿಯ ಜೀವನ ಚರಿತ್ರೆಗಳು. ಮಹಿಳೆಯೊಬ್ಬಳು ಮನೆಯಲ್ಲಿ ದೌರ್ಜನ್ಯದ ವಿರುದ್ಧ ಬಂಡೇಳುವ ವಸ್ತು ಇರುವ ಕೃತಿ ‘ನನ್ನ ಕಥೆ – ನಮ್ಮ ಕಥೆ’. ‘ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ’ ಕೃತಿಯು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ದೃಷ್ಟಿಯಿಂದ ಬರೆದ ಕೃತಿ. ಇದರಲ್ಲಿ ಬಾಲ್ಯ ವಿವಾಹ ಮತ್ತು ರಾಕ್ಷಸಿ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ಅವರು ನ್ಯಾಯಕ್ಕಾಗಿ ಕಾದು ಕುಳಿತ ವ್ಯಥೆಯ ಕಥೆ ಇದೆ. ಮಹಾನ್ ಡಚ್ ಕಲಾವಿದ ವ್ಯಾನ್ ಗೋ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಕೃತಿ ‘ನೋವಿಗದ್ದಿದ ಕುಂಚ’. ‘ಒಂದು ಕನಸಿನ ಪಯಣ’ ಮತ್ತು ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಇವೆರಡು ನೇಮಿಚಂದ್ರರ ಪ್ರವಾಸ ಕಥನಗಳಾಗಿವೆ. ಈ ಪ್ರವಾಸನ ಕಥನಗಳು ವಾಚಕರನ್ನು ಆಯಾ ಪ್ರದೇಶಕ್ಕೆ ಕರೆಯದೊಯ್ಯುವ ಭಾವನಾತ್ಮಕ ನೈಪುಣ್ಯತೆ ಹೊಂದಿವೆ. ‘ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ದುಡಿವ ಹಾದಿಯಲ್ಲಿ ಜೊತೆಯಾಗಿ’, ‘ಮಹಿಳಾ ಅಧ್ಯಯನ’, ‘ನಿಮ್ಮ ಮನೆಗೊಂದು ಕಂಪ್ಯೂಟರ್’, ‘ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್’ ಇವೆಲ್ಲ ನೇಮಿಚಂದ್ರರ ವೈಚಾರಿಕ ಲೇಖನಗಳಾಗಿವೆ. ‘ಮಹಿಳಾ ಲೋಕ’ ಎಂಬುದು ಇವರ ಸಂಪಾದಿತ ಕೃತಿ. ಈ ಕೃತಿಗಳನ್ನು ಓದುತ್ತಾ ಹೋದಂತೆ ನೇಮಿಚಂದ್ರರ ಬರಹಗಳ ಆಳ-ಅಗಲ ಮತ್ತು ಬದುಕಿನ ಕುರಿತಾದ ವಿಶಾಲದಷ್ಟಿಯ ಅರಿವಾಗುತ್ತದೆ.

    ಸಾಮಾಜಿಕ ಕೃತಿಗಳಾದ ‘ಕಾಲು ಹಾದಿಯ ಕೋಲ್ಮಿಂಚುಗಳು – ಮಹಿಳಾ ವಿಜ್ಞಾನಿಗಳು’, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಎಂಬುದು ಸಾಮಾಜಿಕ ಚಿಂತನೆ ಇರುವ ನೇಮಿಚಂದ್ರರ ಗಮನಾರ್ಹ ಕೃತಿಗಳು. ‘ಸಾಹಿತ್ಯ ಮತ್ತು ವಿಜ್ಞಾನ’, ‘ಬದುಕು ಬದಲಿಸಬಹುದು’, ‘ಸಾವೇ ಬರುವುದಿದ್ದರೆ ನಾಳೆ ಬಾ’, ‘ಸೋಲೆಂಬುದು ಅಲ್ಪ ವಿರಾಮ’, ‘ಸಂತಸ ನನ್ನೆದೆಯ ಹಾಡು ಹಕ್ಕಿ’ ಇವರ ಅಂಕಣ ಬರಹಗಳು. ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಗೌರವಗಳು ಇವರನ್ನು ಅರಸಿ ಬಂದಿವೆ. ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’, ‘ಅಕ್ಕ ಪ್ರಶಸ್ತಿ’, ‘ಆರ್ಯಭಟ ಪ್ರಶಸ್ತಿ’, ‘ಸಂದೇಶ ಪ್ರಶಸ್ತಿ’, ‘ವಿಮೆನ್ ಅಚೀವರ್ ಇನ್ ಏರೋಸ್ಪೇಸ್ ಪ್ರಶಸ್ತಿ’, ಇಂಡಿಯನ್ ಎಕ್ಸ್ಪ್ರೆಸ್ ನ ‘ದೇವಿ ಪುರಸ್ಕಾರ’, ‘ಮತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ’, ‘ಕನ್ನಡ ಸಾಹಿತ್ಯ ಅಕಾಡೆಮಿ ಜೀವಮಾನದ ಪ್ರಶಸ್ತಿ’, ‘ಅತ್ತಿಮಬ್ಬೆ ಪ್ರಶಸ್ತಿ’ ಇವೆಲ್ಲವೂ ಅವರ ಸಾಹಿತ್ಯ ಸೇವೆಗೆ ದೊರೆತ ಗೌರವ.

    ನೇಮಿಚಂದ್ರ ಮಲ್ಹೋತ್ರರ ಲೇಖನಿಯಿಂದ ಇನ್ನಷ್ಟು ಅಮೂಲ್ಯವಾದ ಬರಹಗಳು ಮೂಡಿ ಬರಲಿ ಎಂಬ ಶುಭ ಹಾರೈಕೆಗಳೊಂದಿಗೆ –
    ಹುಟ್ಟು ಹಬ್ಬದ ಶುಭಾಶಯಗಳು.

    – ಅಕ್ಷರೀ

    baikady Birthday Literature roovari specialarticle
    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ
    Next Article ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.