ಮಂಡ್ಯ ರಮೇಶ್ ಓರ್ವ ರಂಗಭೂಮಿ ತಜ್ಞ, ಉತ್ತಮ ನಟ, ನಿರ್ದೇಶಕ ಯಶಸ್ವಿ ರಂಗ ಶಿಕ್ಷಕ ಮಾತ್ರವಲ್ಲ ನಂಬರ್ ವನ್ ಸಂಘಟಕ. ಸಂಘಟನಾ ಕಲೆ ಈ ಕಲಾವಿದನಿಗೆ ಬಾಲ್ಯದಿಂದಲೇ ಬಂದಿತ್ತು. ತಾನು ಪ್ರಾಥಮಿಕ ಶಾಲಾ ಹಂತದಲ್ಲಿರುವಾಗಲೇ ಮಕ್ಕಳನ್ನು ಒಂದುಗೂಡಿಸಿ ತಂಡ ಕಟ್ಟುವ ಕಲೆಯಲ್ಲಿಯೂ ಚತುರ.
ರಂಗಕರ್ಮಿ ಚಲನಚಿತ್ರ ನಟರು ಆದ ಮಂಡ್ಯ ರಮೇಶ್ ಇವರ ನಿಜವಾದ ಹೆಸರು ಕುಂತೂರು ಸುಬ್ರಮಣ್ಯ ರಮೇಶ್. ವೃತ್ತಿ ಜೀವನದಲ್ಲಿ ಮಂಡ್ಯ ರಮೇಶ್ ಎಂದೇ ಪ್ರಸಿದ್ಧರು. ಅವರೇ ಹೇಳುವಂತೆ ಹೆಸರಿನ ಎದುರು ಊರಿನ ಹೆಸರು ಮಂಡ್ಯ ಎಂದು ಸೇರ್ಪಡೆಯಾಗುವ ಹಿಂದೆ ಒಂದು ಘಟನೆ ಇದೆ. ಮಂಡ್ಯ ರಮೇಶ್ ರಂಗಾಯಣಕ್ಕೆ ಬಂದ ಮೇಲೆ ಅಲ್ಲಿ ಬಂದ ಬಿ.ವಿ. ಕಾರಂತರು ಹಲವು ಹುಡುಗರ ಮಧ್ಯೆ ಮಂಡ್ಯ ರಮೇಶ್ ಇರುವಾಗ ‘ಹೇ… ರಮೇಶ್’ ಎಂದು ಕರೆದ ಸಂದರ್ಭದಲ್ಲಿ ಇವರೊಂದಿಗೆ ಉಳಿದ ರಮೇಶ್ ನಾಮಾಂಕಿತ ಹುಡುಗರೆಲ್ಲರೂ ತಿರುಗಿ ನೋಡಿದರು. ಮುಂದೆ ಬಂದ ಕಾರಂತರು ಮಂಡ್ಯ ರಮೇಶ್ ನಲ್ಲಿ ನಿನ್ನ ಊರು ಯಾವುದು ಎಂದಾಗ ರಮೇಶ ಸ್ವಾಭಾವಿಕವಾಗಿಯೇ ‘ಸರ್.. ಮಂಡ್ಯ’ ಎಂದಾಗ ಹಾಗಾದರೆ ಇನ್ನು ನೀನು ‘ಮಂಡ್ಯ ರಮೇಶ್’ ಎಂದರು. ಅಲ್ಲಿಯೇ ಪಕ್ಕದಲ್ಲಿದ್ದ ಮಂಡ್ಯ ರಮೇಶ್ ಇವರ ಖ್ಯಾತ ಗುರು ಸಚ್ಚಿದಾನಂದರು ‘ಹೇ.. ಮಂಡ್ಯ ರಮೇಶ್.. ಚೆನ್ನಾಗಿದೆ ಅಲ್ವಾ?’ ಎಂದರು. ಅಂದಿನಿಂದ ಕುಂತೂರು ಸುಬ್ರಹ್ಮಣ್ಯ ರಮೇಶ್ – ಮಂಡ್ಯ ರಮೇಶ್ ಎಂಬ ಹೆಸರಿನಿಂದಲೇ ಪ್ರಸಿದ್ಧರಾದರು. ಜೀವನದಲ್ಲಿ ತಾನು ಏನಾದರೂ ಸಾಧಿಸಿದ್ದರೆ ಅದು ಆಗಿನ ಲಂಕೇಶ್ ಪತ್ರಿಕೆಯ ಓದುವಿಕೆ ಮತ್ತು ನೀನಾಸಂ ಎರಡು ಕಾರಣವಾಗಿದೆ ಎಂದು ಅಭಿಮಾನ ಪೂರ್ವಕವಾಗಿ ಹೇಳಿಕೊಂಡಿದ್ದಾರೆ.
ಸಾಧಾರಣ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ 1964 ಜುಲೈ 14ರಂದು ಜನಿಸಿದವರು ಮಂಡ್ಯ ರಮೇಶ್. ತಂದೆ ಎನ್. ಸುಬ್ರಹ್ಮಣ್ಯಂ ಸರ್ಕಾರಿ ಕಚೇರಿಯಲ್ಲಿ ಎರಡನೇ ದರ್ಜೆಯ ಗುಮಾಸ್ತರಾಗಿದ್ದರು. ತಾಯಿ ನಾಗಲಕ್ಷ್ಮಿ ಗೃಹಿಣಿಯಾಗಿದ್ದರು. ತಂದೆ ಸರಕಾರಿ ಉದ್ಯೋಗಿಯಾಗಿದ್ದ ಕಾರಣ ಮಂಡ್ಯದ ಬೇರೆ ಬೇರೆ ಭಾಗಗಳಿಗೆ ವರ್ಗಾವಣೆ ಆಗುತ್ತಿತ್ತು. ಹೀಗೆ ಅವರದ್ದು ಕಿರುಗಾಟದ ಜೀವನ. ತಾಯಿಯ ತವರು ಮನೆ ನಾಗಮಂಗಲ. ಇವರ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸ ಬೆಳ್ಳೂರಿನಲ್ಲಿ. ಆದರೆ ಪ್ರಾಥಮಿಕ ವಿದ್ಯಾಭ್ಯಾಸ ಅಜ್ಜಿ ಮನೆಯಲ್ಲಿದ್ದು ನಡೆಯಿತು.
ಒಂದು ಬಾರಿ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲಿ ಸ್ತಬ್ಧ ಚಿತ್ರದಲ್ಲಿ ಗಾಂಧಿ ಪಾತ್ರ ಮಾಡಿ ನಿಲ್ಲುವಂತಹ ಸಂದರ್ಭ ಇವರಿಗೆ ದೊರೆಯಿತು. ಪಕ್ಕದಲ್ಲಿ ನೆಹರು, ಅಕ್ಕಮಹಾದೇವಿಯ ವೇಷದಲ್ಲಿ ಇತರರು ನಿಂತಿದ್ದರು. ಸ್ತಬ್ದ ಚಿತ್ರವನ್ನು ಲಾರಿಯಲ್ಲಿ ಆಯೋಜಿಸಲಾಗಿತ್ತು. ಒಂದು ಕಡೆ ಲಾರಿಗೆ ಬ್ರೇಕ್ ಬಿದ್ದಾಗ ಗಾಂಧೀಜಿ ಅಕ್ಕಮಹಾದೇವಿಯ ಮೇಲೆ ಬಿದ್ದದ್ದು, ಎಲ್ಲರೂ ಹಾಸ್ಯ ಮಾಡಿ ನಗುವುದಕ್ಕೆ ಕಾರಣವಾಯಿತು. ಏನು ತಿಳಿಯದ ಬಾಲಕ ಮಂಡ್ಯ ರಮೇಶ್ ಸಹ ಏನಾಯಿತೆಂದು ತಿಳಿಯದೆ ಜನರಿಂದ ಪ್ರೇರಿತರಾಗಿ ಚಪ್ಪಾಳೆ ತಟ್ಟಿ ನಗಲಾರಂಬಿಸಿದರು. ಈ ಜನರ ಕರತಾಡನವೇ ಮುಂದೆ ಬೆಳೆಯಲು ತನಗೆ ಪ್ರೋತ್ಸಾಹವಾಯಿತು ಎಂದು ಹೇಳುತ್ತಾರೆ ಮಂಡ್ಯ ರಮೇಶ್. ಬಾಲ್ಯದಲ್ಲಿ ಕಂಪನಿ ನಾಟಕಗಳು ಬಂದಾಗ ಮನೆಯವರೆಲ್ಲರೂ ಹೋಗುತ್ತಿದ್ದು ವಾಡಿಕೆ. ಕಲಾವಿದರಿಗೆ ಅಲ್ಲಿ ದೊರೆಯುತ್ತಿದ್ದ ಮರ್ಯಾದೆ ಗೌರವವನ್ನು ನೋಡಿ ಅದರಿಂದ ಪೇರಿತರಾಗಿ ತಾನು ಕಲಾವಿದನಾಗಬೇಕೆಂಬ ನಿರ್ಧಾರಕ್ಕೆ ಬಂದರು. ಕಂಪನಿಯ ನಾಟಕಗಳನ್ನು ನೋಡುತ್ತಾ ‘ಕೌರವನ ಗರ್ಭಭಂಗ’ ಎಂಬ ನಾಟಕವನ್ನು ತಾನೇ ರಚಿಸಿ, ಆರನೇ ತರಗತಿಯಲ್ಲಿರುವಾಗಲೇ ‘ಶಿವಶಂಕರ ಸಮಿತಿ’ ಎಂಬ ಒಂದು ತಂಡವನ್ನು ಕಟ್ಟಿಕೊಂಡು ಅಲ್ಲಿ ಪ್ರದರ್ಶನವನ್ನು ಮಾಡಿದ್ದು ಇವರ ಸಂಘಟನೆ ಮತ್ತು ಪ್ರತಿಭೆಗೆ ಸಾಕ್ಷಿಯಾಗಿದೆ. ಶಾಲೆಯ ನಾಟಕ ತರಬೇತಿ ಅಧ್ಯಾಪಕರಾದ ಸಿದ್ದಪ್ಪ ಎನ್ನುವವರು ವೈಯಕ್ತಿಕ ಪ್ರತಿಭೆಯನ್ನು ಹೊರತರುವಲ್ಲಿ ಪ್ರಯತ್ನಿಸಿ, ಬದುಕಿನಲ್ಲಿ ತಿರುಗು ಕೊಟ್ಟವರು ಎಂಬುದಾಗಿ ಅವರನ್ನು ಸಹ ಮಂಡ್ಯ ರಮೇಶ್ ಸ್ಮರಿಸಿಕೊಳ್ಳುತ್ತಾರೆ. ಮಂಡ್ಯದ ಬಾಲಕರ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿರುವಾಗ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಯ ಮಾರಾಟಕಿಟ್ಟ ಪುಸ್ತಕಗಳಿಂದ ಆಕರ್ಷಿತರಾದರು. ಬಹಳಷ್ಟು ಉತ್ತಮ ಪುಸ್ತಕ ಓದುವ ಹವ್ಯಾಸ ಇವರಿಗಿತ್ತು. ಆದರೆ ಆ ಪುಸ್ತಕಗಳನ್ನು ಕೊಂಡುಕೊಳ್ಳಲು ಮನೆಯಿಂದ ಸಹಕಾರ ಸಿಗಲಿಲ್ಲ. ಈ ಸಂದರ್ಭದಲ್ಲಿ ವಾರ್ತಾಪತ್ರಿಕೆಗಳನ್ನು ಮನೆಮನೆಗೆ ಹಾಕಿ, ಅದರಿಂದ ಬಂದ 30 ರೂಪಾಯಿ ಮತ್ತು ಅದಕ್ಕೆ ಸ್ವಲ್ಪ ಸೇರಿಸಿ ಸುಮಾರು 120 ರೂಪಾಯಿಯ ಒಳ್ಳೆಯ ಪುಸ್ತಕಗಳನ್ನು ಕೊಂಡುಕೊಂಡದ್ದು ಮಾತ್ರವಲ್ಲ, ಉತ್ತಮ ಪುಸ್ತಕಗಳಿರುವ ಒಂದು ಸುಂದರ ಗ್ರಂಥಾಲಯವನ್ನು ಆಯೋಜಿಸಿದ್ದು ಪುಸ್ತಕ ಓದುವಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಅವರೊಬ್ಬ ಪುಸ್ತಕ ಪ್ರೇಮಿ ಎಂಬುದನ್ನು ಸಾಬೀತುಪಡಿಸುತ್ತದೆ.
ರಂಗಭೂಮಿಯ ಒಡನಾಟದಲ್ಲಿ ಬೆಳೆದ ಮಂಡ್ಯ ರಮೇಶ್ ‘ನೀನಾಸಂ’ ನಾಟಕ ಶಾಲೆಯಲ್ಲಿ ಪದವಿಯನ್ನು ಪಡೆದರು. ‘ಮಂಡ್ಯದ ಗೆಳೆಯರ ಬಳಗ’, ‘ಮಾಂಡವ್ಯ ಕಲಾಸಂಘ’, ‘ವೇದಿಕೆ’ ಇಂತಹ ಹಲವಾರು ರಂಗಭೂಮಿಯ ಒಡನಾಟದಲ್ಲಿ ಬೆಳೆದು ಮತ್ತು ನೀನಾಸಂ ನಾಟಕ ಶಾಲೆಯಲ್ಲಿ ಪದವಿಯನ್ನು ಪಡೆದುದು ಅವರು ರಂಗಭೂಮಿಯಲ್ಲಿ ಸಾಧನೆಯನ್ನು ಮಾಡಲು ಸಹಾಯಕವಾಯಿತು.
ಭಾರತ ಮಾತ್ರವಲ್ಲದೆ ಹೊರದೇಶಗಳಲ್ಲೂ ಪ್ರಸಿದ್ಧಿಯನ್ನು ಪಡೆದು, ಶಿಷ್ಯ ಸಮೂಹದ ಪ್ರೀತಿ, ಅಭಿಮಾನ ಗಳಿಸಿ ಜನ ಮಾನಸದೊಂದಿಗೆ ವಯಸ್ಸಿಗೆ ಸರಿಯಾಗಿ ಮಂದಹಾಸದೊಂದಿಗೆ ಆತ್ಮೀಯ ಭಾವ ವ್ಯಕ್ತಪಡಿಸುವ ಮಂಡ್ಯ ರಮೇಶ್ ಓರ್ವ ಅದ್ಭುತ ಕಲಾವಿದ. ಸಿನಿಮಾ ಕಿರುತೆರೆಗಳಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡು ಕಾರ್ಯ ಬಾಹುಳ್ಯವಿದ್ದರೂ ಕಲಾ ಪ್ರಪಂಚದಲ್ಲಿ ತನಗೊಂದು ಸ್ಥಾನ ದೊರಕಿಸಿಕೊಟ್ಟ ರಂಗಭೂಮಿಯೇ ತನ್ನ ಬದುಕಿನ ಉಸಿರು ಎಂದು ಭಾವಿಸಿ ಗೌರವಿಸುವ ಒಬ್ಬ ಆದರ್ಶವಂತ. ಸಂಕ್ರಾಂತಿ, ಮಹಿಮಾಪುರ, ಮಾರನಾಯಕ, ಬಂಕಾಪುರದ ಬಯಲಾಟ, ಚೋರ ಚರಣದಾಸ, ನಾಗಮಂಡಲ, ಅಗ್ನಿ ಮತ್ತು ಮಳೆ, ಹರಕೆಯ ಕುರಿ, ಆಲಿಬಾಬ, ಯುಗಾಂತ, ಐಲು ದೊರೆ, ಚಾಮ ಚೆಲುವೆ, ಸಾಯೋ ಆಟ, ವಲಸೆ ಹಕ್ಕಿಯ ಹಾಡು, ಈ ಕೆಳಗಿನವರು, ಊರುಭಂಗ, ಸುಭದ್ರ ಕಲ್ಯಾಣ, ರತ್ನ ಪಕ್ಷಿ, ಅಂಧಯುಗ ಇತ್ಯಾದಿ ಇವರು ನಟಿಸಿರುವ ಉತ್ತಮ ನಾಟಕಗಳೇ ಇವರಲ್ಲಿ ತುಂಬಿರುವ ಅಪ್ರತಿಮ ಪ್ರತಿಭೆಗೆ ಸಾಕ್ಷಿ. ರಂಗಭೂಮಿಗಾಗಿ ಇವರು ಮಾಡಿದ ಸೇವೆ ಅದ್ಭುತ. ನೀನಾಸಂ ತಿರುಗಾಟ ಯೋಜನೆ, ಕೊಡಗಿನಲ್ಲಿ ಪ್ರಾದೇಶಿಕ ರೆಪಾರ್ಟರಿ ಸ್ಥಾಪಿಸಿದ ಖ್ಯಾತಿ ಇವರದ್ದಾಗಿದೆ. ನಿರ್ದೇಶಕರಾಗಿ ರಾಜ್ಯ ಹೊರರಾಜ್ಯಗಳ ನಾಟ್ಯಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞಾನ, ಮಂಡ್ಯದ ರಂಗ ಚಳುವಳಿಯ ನಟರಾಗಿ, ನಿರ್ದೇಶಕರಾಗಿ, ಉತ್ತಮ ಸಂಘಟಕರಾಗಿ ಅನೇಕ ರೀತಿಯ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ ಖ್ಯಾತಿ ಇವರದು. ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ, ಜರ್ಮನಿ, ಆಸ್ಟ್ರೀಯಾಗಳಲ್ಲಿ ನಾಟಕ ಪ್ರದರ್ಶನವನ್ನು ನೀಡಿ ನಮ್ಮ ದೇಶದ ನಾಟಕದ ಸೊಗಡನ್ನು ವಿದೇಶಗಳಲ್ಲಿ ಪಸರಿಸಿ ಖ್ಯಾತರಾಗಿದ್ದಾರೆ. ‘ನಾಗಮಂಗಲ ಕನ್ನಡ ಸಂಘ’ ಹಾಗೂ ಇತರ ಸಂಘಟನೆಗಳಿಗಾಗಿ ಮಣ್ಣಿನ ಗಾಡಿ, ಡಾ. ಸಿದ್ರಾಜು, ಸಾಹೇಬರು ಬರುತ್ತಿದ್ದಾರೆ, ಅಗ್ನಿ ಮತ್ತು ಮಳೆ, ಮಾರನಾಯಕ, ಈ ಕೆಳಗಿನವರು ಮುಂತಾದ ಉತ್ತಮ ನಾಟಕಗಳ ಪ್ರದರ್ಶನ ನೀಡಿದ್ದಾರೆ. ಹಲವಾರು ಧಾರವಾಹಿಗಳಲ್ಲಿ ಉತ್ತಮ ನಟನೆಯನ್ನು ನೀಡಿ ಜನರ ಮೆಚ್ಚುಗೆಯನ್ನು ಪಡೆದಿರುವ ಇವರು ‘ಜನುಮದ ಜೋಡಿ’ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದ್ಭುತ ನಟನೆಯನ್ನು ನೀಡಿ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ ಬಹಳಷ್ಟು ಸಾಧನೆ ಮಾಡಿದ ಇವರಿಗೆ ಹಲವಾರು ಸಂಘಟನೆಗಳ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ. ‘ನಾಗಮಂಡಲ’ ಚಿತ್ರಕ್ಕಾಗಿ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ರೋಟರಿ ನಮನ ಪ್ರಶಸ್ತಿ, ರಾಜ್ಯಶ್ರೀ ಪ್ರಶಸ್ತಿ ಇವುಗಳಲ್ಲಿ ಮುಖ್ಯವಾದಗಳು. ಇವೆಲ್ಲವೂ ಇವರು ರಂಗಭೂಮಿ ತಜ್ಞರಾಗಿ, ನಿರ್ದೇಶಕರಾಗಿ, ರಂಗ ಶಿಕ್ಷಕರಾಗಿ, ಉತ್ತಮ ನಟರಾಗಿ ಅಸಾಧಾರಣ ಸಂಘಟಕರಾಗಿ ಮಾಡಿದ ದುಡಿಮೆಗೆ ಸಂದ ಗೌರವ.
“ವಿದ್ಯೆ ಬೇರೆ ಬೇರೆ ಕ್ಷೇತ್ರದಿಂದ ಸಿಗುತ್ತದೆ. ಎಂತಹ ಸಂದರ್ಭದಲ್ಲೂ ಆತ್ಮಹತ್ಯೆಗೆ ಅವಕಾಶ ಕೊಡಬೇಡಿ. ಬದುಕುವುದಕ್ಕೆ ಬೇಕಾದಷ್ಟು ದಾರಿಗಳಿವೆ. ರಂಗ ಅದಕ್ಕೆ ಸಹಾಯ ಮಾಡುತ್ತದೆ” ಎಂದು ಯುವ ಜನರಿಗೆ ಆತ್ಮಸ್ಥೈರ್ಯ ತುಂಬುವ ಸಂದೇಶ ನೀಡಿ ಯುವ ಜನತೆಯನ್ನು ಜಾಗೃತಗೊಳಿಸುತ್ತಿರುವ ಮಂಡ್ಯ ರಮೇಶ್ ಇವರಿಂದ ರಂಗಭೂಮಿಯ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ದೊರೆಯಲಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಇವರ ಖ್ಯಾತಿ ಇನ್ನಷ್ಟು ಹಬ್ಬಲಿ ಎಂಬ ಹಾರೈಕೆಯೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು.
– ಅಕ್ಷರೀ
