ಕರಾವಳಿಯಲ್ಲಿ ಭರತ ನೃತ್ಯಕ್ಕೆ ಸಂಬಂಧಿಸಿದಂತೆ ಉಚ್ಚಿಲ ಸುಬ್ಬರಾವ್ ಕೃಷ್ಣರಾವ್ ಎಂಬ ಹೆಸರನ್ನು ಹೇಳಿದರೆ ಯಾರಿಗೂ ತಿಳಿಯದು, ಅವರನ್ನೇ ಯು.ಎಸ್.ಕೃಷ್ಣರಾಯರೆಂದರೆ ‘ಹೋ’ ಎಂಬ ಉದ್ಗಾರ ಮೂಡದಿರದು. ‘ಕದಿರೆಯ ರಾಜಮಾಷ್ಟ್ರು’ ಎಂಬುದಂತೂ ಇವರ ಜನಪ್ರಿಯ ಹೆಸರು. ‘ರಾಜ’ ಎಂದು ಭರತ ನೃತ್ಯಕ್ಕೆ ಸಂಬಂಧಿಸಿದಂತೆ ಅವರ ಪ್ರಿಯಶಿಷ್ಯರ ಹಾಗೂ ಅಭಿಮಾನಿಗಳ ಸಂಬೋಧನೆಯಾದರೂ ಅವರಿಗದು ಅನ್ವರ್ಥ. ಕರಾವಳಿಯಲ್ಲಿ ನೃತ್ಯಕ್ಕೆ ಆಧಾರಸ್ತಂಭವೊದಗಿಸಿದ ‘ರಾಜಾಶ್ರಯ’ (ರಾಜನ್ ಅಯ್ಯರ್ ಮತ್ತು ರಾಜರತ್ನಂ ಪಿಳ್ಳೆ ಇನ್ನಿಬ್ಬರು)ರಲ್ಲಿ ಒಬ್ಬರಾಗಿ, ಕೃಷ್ಣರಾಯರು ಮಾನ್ಯರು ನಂತರದ ದಿನಗಳಲ್ಲಿ ಆ ಕಲೆಯನ್ನು ವಿವಿಧ ರೀತಿಗಳಲ್ಲಿ ಪಸರಿಸಿದ ‘ಕೃಷ್ಣ ಚತುಷ್ಟಯ’ (ಮು.ವಿಠಲ್, ಮುರಳೀಧರ ರಾಯರು ಮತ್ತು ಉಳ್ಳಾಲ ಮೋಹನ್ ಕುಮಾರ್ ಇತರ ಮೂವರು)ರ ಪಟ್ಟಿಯಲ್ಲೂ ಅವರು ಸ್ಥಾನ ಗಳಿಸುತ್ತಾರೆ. ರಾಜನ್ ಅಯ್ಯರ್ ಅವರು ಕರಾವಳಿಗೆ ಕಾಲಿಡುವುದಕ್ಕೂ ಮೊದಲೇ ಮಂಗಳೂರಿನಲ್ಲಿ ನೃತ್ಯವನ್ನು ಕಲಿಸುತ್ತಿದ್ದವರು (1941ರಲ್ಲಿ ನೃತ್ಯ ವಿದ್ಯಾನಿಲಯವನ್ನು ಸಂಸ್ಥಾಪಿಸುವುದಕ್ಕೂ ಮೊದಲೇ) ಈ ಕಲಾತಪಸ್ವಿ. ಮಂಗಳೂರಿಗೆ ನೃತ್ಯ ಕಲಿಸುವುದಕ್ಕಾಗಿಯೇ ಬಂದ ನೃತ್ಯ ಗುರುಗಳಿಗೆ ಅವಕಾಶವೊದಗಿಸಿದ ಉದಾರಿ. ನೃತ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಕಲಾಸಾಧಕ, ಅತ್ಯುತ್ತಮ ಸಂಘಟಕ, ಸಾರ್ವಜನಿಕ ಸಂಪರ್ಕ, ದಾಖಲೆಗಳ ಕಾಪಿಡುವಿಕೆ ಮತ್ತು ಕಲಾಪ್ರಸಾರ ಹೀಗೆ ಚತುರ್ವಿಧ ಚಾತುರ್ಯ ಹೊಂದಿದ್ದ ಉಚ್ಚಿಲದ ಶಿರಸ್ತೇದಾರರ ಮನೆಯ ಈ ವ್ಯಕ್ತಿತ್ವ ನೃತ್ಯರಂಗಕ್ಕೊಂದು ಅಪೂರ್ವ ಮಾದರಿ.
ರಾಜಾಶ್ರಯ ಕಲೆಗೆ ನಷ್ಟವಾಗಿ, ಕಲಾಸಂಪತ್ತು ಬರಡಾಗಿದ್ದ ಕಾಲದಲ್ಲಿ, ಸತ್ಯಕ್ಕೆ ಸಮಾಜದಲ್ಲಿ ಅನಾದರವಿದ್ದ ಸಂದರ್ಭ ಕಾಲಿಗೆ ಗೆಜ್ಜೆ ಕಟ್ಟಿದರು ಕೃಷ್ಣರಾಯರು. ಕುಲೀನ ಮನೆತನಗಳಿಗೆ ನೃತ್ಯ ಹೇಳಿಸಿದ್ದಲ್ಲ ಎಂಬಂತಿದ್ದ ಕೊಳೆಯನ್ನು ತೊಡೆದು, ಒಂದಿಡೀ ಕುಟುಂಬವೇ ಕಲೆಯನ್ನು ಅಪೂರ್ವವಾದ ಸಾಧನೆಯನ್ನಾಗಿ ಮಾಡುವ ಬಗ್ಗೆ ಯೋಚಿಸುವುದೇನೊ ಸಣ್ಣ ಮಾತಲ್ಲ. ಇಂದು ದೇಶ – ವಿದೇಶಗಳಲ್ಲೂ ನೃತ್ಯ ವಿದ್ಯಾಲಯದ ವಿದ್ಯಾರ್ಥಿಗಳು ಇದ್ದಾರೆಂದರೆ, ತನ್ನ ಮರಣದ ಬಳಿಕವೂ ವಜ್ರ ಮಹೋತ್ಸವದತ್ತ ಸಂಸ್ಥೆ ಗಟ್ಟಿ ಹೆಜ್ಜೆ ಹಾಕುವಂತೆ ಅಡಿಪಾಯ ಹಾಕಿಕೊಟ್ಟಿದ್ದಾರೆಂದರೆ ಆ ಬದ್ಧತೆ ಅದೆಷ್ಟು ಆಚಲವಾಗಿರಬೇಕು ಊಹಿಸಿಕೊಳ್ಳಿ.
ಬ್ರಿಟೀಷರ ಆಡಳಿತದ ಕಾಲದಲ್ಲಿ ಶಿರಸ್ತೇದಾರರಾಗಿದ್ದ ಸುಬ್ಬರಾಯರದು ಸಂಪ್ರದಾಯಸ್ಥ ಬ್ರಾಹ್ಮಣ ಕುಟಂಬ. ಶಿಸ್ತು, ರೀತಿ ರಿವಾಜುಗಳಿಗೆ ಹೆಸರಾದ ಮನೆತನ. ಉಡುಪಿ ಸಮೀಪದ ಉಚ್ಚಿಲದಲ್ಲಿ ವಾಸ್ತವ್ಯ. ಈ ಶಿಸ್ತಿನ ಸಿಪಾಯಿಯ ಪತ್ನಿ ದೇವಕಿ ಅಮ್ಮ ಮನೆ ಸಮೀಪದಲ್ಲಿ ಹಟ್ಟಿಯೊಂದನ್ನು ಕಟ್ಟಿಕೊಂಡು ದನಗಳನ್ನು ಸಾಕಿಕೊಂಡಿದ್ದರು. ದನಗಳ ಲಾಲನೆ ಪಾಲನೆ-ಆರೈಕೆಯೆಲ್ಲಾ ಈ ತಾಯಿಯದ್ದೇ. ತುಂಬು ಗರ್ಭಿಣಿಯಾಗಿದ್ದಾಗಲೂ ಅದನ್ನು ಬಿಟ್ಟವರಲ್ಲ. ಒಂದು ಬಾರಿ ಸಂಜೆಯ ಹೊತ್ತಿಗೆ ದನಗಳ ಶುಶ್ರೂಷೆಗಾಗಿ ಹಟ್ಟಿಗೆ ಹೋದವರು ಅಲ್ಲೇ ಹೆತ್ತರಂತೆ. ಅಂದು 1914ನೇ ಇಸ್ವಿಯ ನವೆಂಬರ್ 9ನೇ ತಾರೀಕು ಆಗಿತ್ತು. ಸಂಜೆ ಗೋಧೂಳಿಯ ಸಮಯ. ಹುಟ್ಟಿದ ಗಂಡು ಶಿಶುವಿಗೆ ಕೃಷ್ಣನೆಂಬ ಹೆಸರಿಡಲಾಯ್ತು ಅವರೇ ಉಚ್ಚಿಲ ಸುಬ್ಬರಾವ್ ಕೃಷ್ಣರಾವ್.
ವೃತ್ತಿಯ ಕಾರಣ ಮಂಗಳೂರಿನಲ್ಲಿ ಮನೆ ಮಾಡಬೇಕಾಗಿ ಬಂತು. ಆದುದರಿಂದ ಕೃಷ್ಣರಾಯರು ಮಂಗಳೂರಿನಲ್ಲೇ ಬೆಳೆದರು. ಕೆನರಾ ಹೈಸ್ಕೂಲಿನಲ್ಲಿ ರಾಯರ ಶಿಕ್ಷಣ. ಆಟ ಮತ್ತು ನಾಟಕಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇತ್ತು. ಶಾಲೆಯಲ್ಲಿ ಯಾವುದೇ ನಾಟಕವಿದ್ದರೂ ಪ್ರಮುಖ ಪಾತ್ರ ಇವರಿಗೆ ಮೀಸಲು. ಅವರ ಹಾಡಿಗೆ ಅಭಿನಯಕ್ಕೆ ಆಗ ‘ವನ್ಸ್ ಮೋರ್’ ಸಾಮಾನ್ಯವಾಗಿತ್ತಂತೆ. ಆಗ ಜನಪ್ರಿಯವಾಗಿದ್ದ ಹಿಂದಿಯ ಗಾಯಕ ಸೈಗಲ್ ಅವರ ಹಾಡುಗಳನ್ನು ಕೃಷ್ಣರಾಯರ ಹಾಗೆ ಹಾಡುವವರೇ ಇರಲಿಲ್ಲವಂತೆ. ಕನ್ನಡ ಪಂಡಿತರು ಕವಿಗಳು ಆಗಿದ್ದ ಎಂ.ಎನ್. ಕಾಮತ್ ಅವರು ನಾಟಕ ಅಭಿನಯದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದನ್ನು ಕೃಷ್ಣರಾಯರು ಕೊನೆಯ ದಿನಗಳವರೆಗೂ ನೆನಪಿಸಿಕೊಳ್ಳುತ್ತಿದ್ದರು. ಹಾಡಿನಲ್ಲಿ ಅಭಿನಯದಲ್ಲಿ ಮೋಡಿ ಮಾಡುತ್ತಿದ್ದ ಕೃಷ್ಣರಾಯರಿಗೆ ನೃತ್ಯದ ಏರು ಹತ್ತುವುದು ತಡವಾಗಲಿಲ್ಲ.
ಅದೇ ಸಮಯದಲ್ಲಿ ವಿಶ್ವ ವಿಖ್ಯಾತ ಉದಯ ಶಂಕರ್ ನೃತ್ಯ ತಂಡದಲ್ಲಿದ್ದ ಕಲಾವಿದ ಮಿಜಾರು ಮೂಲದ ಕಾಂತಪ್ಪ ಶೆಟ್ಟಿ (ಕೆ.ಕೆ. ಶೆಟ್ಟಿ) ಮಂಗಳೂರಿಗೆ ಬಂದಿದ್ದರು. ಕೃಷ್ಣರಾಯರು ಅವರಲ್ಲೂ ಕಲಿತರು. ತಾನು ಕಲಿತದ್ದನ್ನು ಇತರರಿಗೂ ಕಲಿಸ ತೊಡಗಿದರು. ಈ ಹುಡುಗಾಟಕ್ಕೆ ಒಂದು ಪ್ರವೃತ್ತಿಪರ ಸ್ವರೂಪ ಬಂದದ್ದು 1934ರಲ್ಲಿ, ಅವರು ವಿದ್ಯಾಬೋಧಿನಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡ ಮೇಲೆ.
ಶಾಲೆಯಲ್ಲಿ ಅಧ್ಯಾಪನಕ್ಕೆ ತೊಡಗಿದ ಕೃಷ್ಣರಾಯರು ಶಾಲೆ ಬಿಟ್ಟೊಡನೆ ಸೈಕಲ್ ಹತ್ತಿ ಮಕ್ಕಳ ಮನೆ ಮನೆಗೆ ತೆರಳುತ್ತಿದ್ದರು. ನೃತ್ಯ ಕಲಿಸುವುದಕ್ಕಾಗಿ ನೃತ್ಯವೆಂದರೆ ದೂರ ಸರಿಯುತ್ತಿದ್ದ 30ರ ದಶಕದ ದಿನಗಳಲ್ಲಿ ಈ ಕೆಲಸ ನಡೆಸಿದರು. ಆಗಲೇ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿ ಹೆಸರು ಗಳಿಸಿದರು. ಯಾವುದೇ ಸಭೆ-ಸಮಾರಂಭಗಳಲ್ಲಿ ಕೃಷ್ಣರಾಯರ ಬಳಗದ ನೃತ್ಯ ಕಾರ್ಯಕ್ರಮವಿದ್ದರೆ ಅದೊಂದು ಶೋಭೆ ಎನ್ನುವಂತಾಯಿತು. ನೃತ್ಯ ಕಲೆಯನ್ನು ಜನಸಾಮಾನ್ಯರೂ ಒಪ್ಪಿಕೊಳ್ಳುವಂತಾಯಿತು.
ಶಾಲಾ ಇನ್‌ಸ್ಪೆಕ್ಟರ್ ಆಗಿದ್ದ ಮಹಾಲಿಂಗಮ್ ಅವರು ಕಥಕ್ಕಳಿ ಬಲ್ಲವರಾಗಿದ್ದುದರ ಸದುಪಯೋಗ ಕೃಷ್ಣರಾಯರಿಗಾಯಿತು. ಅವರಲ್ಲಿ ಕಥಕ್ಕಳಿಯನ್ನು ಅಭ್ಯಸಿಸಿದರು. 1941ರಲ್ಲಿ ಅಧಿಕೃತವಾಗಿ ಕದ್ರಿಯ ತನ್ನ ಮನೆಯನ್ನೇ ‘ನೃತ್ಯ ವಿದ್ಯಾಲಯ’ವಾಗಿ ಪರಿವರ್ತಿಸಿ ನೃತ್ಯ ತರಬೇತಿಯನ್ನು ಮುಂದುವರಿಸಿದರು. ಹೀಗೆ ಕರಾವಳಿಯ ಮೊತ್ತ ಮೊದಲ ನೃತ್ಯ ಶಾಲೆ ಆರಂಭಗೊಂಡಿತು.
ಆ ಬಳಿಕ ಕೃಷ್ಣರಾಯರಲ್ಲಿದ್ದ ಚತುರ್ವಿಧ ಚಾತುರ್ಯದ ಪರಿಣಾಮವಾಗಿ ನೃತ್ಯ ವಿದ್ಯಾಲಯ ಹಿಂತಿರುಗಿ ನೋಡಿದ್ದೇ ಇಲ್ಲ. 1964ರಲ್ಲಿ ಮುಂಬಯಿಯಲ್ಲಿ ಸಂಸ್ಥೆಯ ಬೆಳ್ಳಿಹಬ್ಬ ಆಚರಣೆ ನಡೆಯಿತೆಂದರೆ ನೃತ್ಯದ ಯಶಸ್ಸು ಹೇಗೆ ದಕ್ಕಿರಬಹುದೆಂದು ಊಹಿಸಬಹುದು. 1988ರಲ್ಲಿ ಮಂಗಳೂರಿನಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಹೊತ್ತಿಗೆ ಕರಾವಳಿ ನೃತ್ಯದ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಂಸ್ಥೆ ನೆಟ್ಟಿತ್ತು.
ಕರಾವಳಿ ಜಿಲ್ಲೆಗಳ ಮೊದಲ ನೃತ್ಯ ಪಾಠಶಾಲೆ. ಮೊದಲ ಭರತನಾಟ್ಯ ರಂಗಪ್ರವೇಶ ಮಾಡಿಸಿದ ನೃತ್ಯಗುರು ಮುಂತಾದ ಬುನಾದಿ ಒದಗಿ ಬಂದಿತು. ತನ್ನೆಲ್ಲಾ (ಇಬ್ಬರು ಗಂಡು-ಮೂವರು ಹೆಣ್ಣು ಮಕ್ಕಳು) ಮಕ್ಕಳನ್ನು ಭರತನೃತ್ಯ ಕಲಾವಿದರನ್ನಾಗಿ ರೂಪಿಸಿ ಅವರ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕಲಾಪ್ರಸಾರ ಹಾಗೂ ತರಬೇತಿ ನಿರಂತರ ನಡೆಯುವಂತೆ ಮಾಡಿದ ದಕ್ಷಿಣ ಭಾರತದ ಏಕೈಕ ನೃತ್ಯಗುರು ಕೃಷ್ಣರಾಯರು.
ಕೃಷ್ಣರಾಯರ ಮಗ ವಿದ್ವಾನ್ ಯು.ಕೆ. ಅರುಣ್ ಬೆಂಗಳೂರಿನ ನೃತ್ಯ ವಿದ್ಯಾನಿಕೇತನ ಸಂಸ್ಥೆಯನ್ನು ಸ್ಥಾಪಿಸಿದವರು. ವಿಶ್ವವಿಖ್ಯಾತ ‘ಅರುಣ ಕಲಾವಿದರು’ ತಂಡದ ನೇತಾರ. ವಿದುಷಿಯರಾದ ನಿರ್ಮಲಾ ಮಂಜುನಾಥ ಮತ್ತು ಸಂದ್ಯಾ ಕೇಶವರಾವ್ ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಬೆಂಗಳೂರಿನಲ್ಲಿ ನೃತ್ಯ ಮತ್ತು ಸಂಗೀತ ತರಬೇತಿ ನೀಡುತ್ತಿರುವವರು. ವಿದುಷಿ ಶೈಲಜಾ ಮಧುಸೂದನ್ ಸಂಗೀತ ಮತ್ತು ನೃತ್ಯ ಕಲಾವಿದೆಯಾಗಿ ಮುಂಬಯಿಯಲ್ಲಿ ನೃತ್ಯ ಸಂಸ್ಥೆಯನ್ನು ಮನ್ನಡೆಸುತ್ತಿದ್ದಾರೆ. ಮಗ ವಿದ್ವಾನ್ ಯು.ಕೆ. ಪ್ರವೀಣ್ ತನ್ನ ಪತ್ನಿ ಸಂಗೀತ ಕಲಾವಿದೆ ಶ್ರೀಮತಿ ಉಷಾ ಪ್ರವೀಣ್ ಅವರ ಜತೆಗೂಡಿ ಮಂಗಳೂರಿನಲ್ಲಿ ಸಂಸ್ಥೆಯನ್ನು ನಿರ್ದೇಶಿಸುತ್ತಿದ್ದಾರೆ. ಇವರ ಐವರು ಮಕ್ಕಳೂ ವಿಶೇಷ ಪ್ರತಿಭಾವಂತರಾಗಿದ್ದು, ಪ್ರತ್ಯೇಕ ಬರಹಗಳಿಗಾಗುವಷ್ಟು ಸಾಧನೆ ಮಾಡಿದವರು ತಮ್ಮ ಮಕ್ಕಳನ್ನು ನೃತ್ಯ – ಸಿನೆಮಾ ಕ್ಷೇತ್ರಗಳಿಗೆ ನೀಡಿದವರು.
ಕೇರಳದ ನೃತ್ಯ ಕಲಾನಿಪುಣ ರಾಜನ್ ಅಯ್ಯರ್ ಮಂಗಳೂರಿಗೆ ಬಂದಾಗ ಅವರನ್ನು ಮುಕ್ತವಾಗಿ ಬರ ಮಾಡಿಕೊಂಡರು ಕೃಷ್ಣರಾಯರು. ನೃತ್ಯ ಪ್ರದರ್ಶನಗಳ ಮೂಲಕ ಹೊಸ ಅಲೆಯನ್ನು ಎಬ್ಬಿಸಿದ ಅಯ್ಯರ್ ಇವರಲ್ಲಿ ನೃತ್ಯ ಕಲಿತು ಗುರು-ಶಿಷ್ಯರು ಜತೆಯಾಗಿ ಪ್ರದರ್ಶನಗಳನ್ನು ನೀಡುವಂತೆ ವ್ಯವಸ್ಥೆ ಮಾಡಿದ ಕಲಾ ಸಹೃದಯತೆ ಕೃಷ್ಣರಾಯರಲ್ಲಿತ್ತು. ಆದ್ದರಿಂದಲೇ ಮಂಗಳೂರಿಗೆ ಯಾವ ನೃತ್ಯ ಸಂಬಂಧಿ ಪ್ರಮುಖರು ಮತ್ತು ಗುರುಗಳು ಬಂದಾಗಲೂ ಕೃಷ್ಣರಾಯರ ಮನೆಬಾಗಿಲು ತೆರೆದಿರುತ್ತಿತ್ತು.
ಸ್ವತಹ ತನ್ನ ಮಕ್ಕಳಿಗೂ ಅವರು ನೃತ್ಯ ಕೋವಿದರಿಂದ ಮಾರ್ಗದರ್ಶನ ಒದಗಿಸುವ ವಿಶಾಲ ದೃಷ್ಟಿ ಹೊಂದಿದ್ದರು. ಇಂತಹ ಕೃಷ್ಣರಾಯರು ಸದಾ ಹಾಸ್ಯ ಪ್ರವೃತ್ತಿಯವರಾಗಿದ್ದು, ವಿಶಿಷ್ಟ ಮಾತಿನ ಶೈಲಿಯನ್ನು ಹೊಂದಿದ್ದರು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಅವರ ಮಾತಿನ ಮೋಡಿಗೆ ಒಳಗಾಗುತ್ತಿದ್ದರು. ಅತ್ಯುತ್ತಮವಾದ ಸಾರ್ವಜನಿಕ ಸಂಪರ್ಕವನ್ನು ಜೀವನದುದ್ದಕ್ಕೂ ಅವರು ನಿರ್ವಹಿಸಿದ್ದರು. ಬಾಳ ಸಂಗಾತಿಯಾಗಿ ಬಂದ ಜಯಲಕ್ಷ್ಮೀ ಅವರ ಆಸರೆಯಲ್ಲಿ ನೃತ್ಯ ಸಂಸ್ಥೆಯನ್ನು, ವಿದ್ಯಾರ್ಥಿಗಳನ್ನು, ಹೆತ್ತವರನ್ನು, ಸಾರ್ವಜನಿಕರನ್ನು ಹಾಗೂ ಅದರ ಜೊತೆಗೆ ಸರಕಾರಿ ಅಧಿಕಾರಿಗಳನ್ನು ಅವರು ಸಂಭಾಳಿಸಿದ ರೀತಿ ಮತ್ತು ಆ ಸಂಪರ್ಕದ ಸದುಪಯೋಗ ಪಡೆದ ಪರಿ ಮತ್ತೊಂದು ವಿಶೇಷ ಕಲೆ. ಅದು ಅವರ ಇನ್ನೊಂದು ಚಾತುರ್ಯದ ಅನಾವರಣವೂ ಹೌದು.
ಇವರ ಸಾಧನೆಗೆ 1971ರಲ್ಲಿ ಶಿಕ್ಷಣ ಕ್ಷೇತ್ರದ ‘ರಾಜ್ಯ ಪ್ರಶಸ್ತಿ’, 1981ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’ ಬಿರುದು, 1991ರಲ್ಲಿ ನೃತ್ಯ ಕೇಂದ್ರದ ‘ರಾಜ್ಯೋತ್ಸವ ಪ್ರಶಸ್ತಿ’, 1997ರಲ್ಲಿ ‘ನೃತ್ಯ ರಾಣಿ ಶಾಕುಂತಲಾ’ ಬಿರುದು, 5 ವರ್ಷ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯತನ, 4 ವರ್ಷ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯತನ ಇವು ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕೃಷ್ಣರಾಯರಿಗೊಲಿದ ಮಾನ್ಯತೆಗಳು. ನಾಸಿಕ್‌ನ ಪುಣ್ಯಶ್ಲೋಕ ಸದ್ಗುರು ಶಿವ ಪಾರ್ವತಿ ಪ್ರತಿಷ್ಠಾನದಿಂದ ಆದರ್ಶ ಸಂಸ್ಥೆ ಪುರಸ್ಕಾರವನ್ನು ತನ್ನ ನೃತ್ಯ ಶಾಲೆಗೆ ಗಳಿಸಿಕೊಟ್ಟಿದ್ದರಲ್ಲಿ ರಾಯರ ನಿರ್ವಹಣೆಯಿದೆ.
ಕೆ.ವಿ. ರಮಣ್, ಮಂಗಳೂರು
ಆಕಾಶವಾಣಿಯ ಶ್ರೇಣೀಕೃತ ಕಲಾವಿದರಾದ ಇವರು 90ಕ್ಕೂ ಹೆಚ್ಚು ಧ್ವನಿ ಸುರುಳಿಗಳಲ್ಲಿ ಗಾಯನ ಮಾಡಿದ್ದಾರೆ. ಗಾಯಕರಾಗಿರುವ ಇವರು ದೇಶಾದ್ಯಂತ ಮತ್ತು ಥೈಲ್ಯಾಂಡ್, ಸಿಂಗಾಪುರಗಳಲ್ಲೂ 5000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಸಂಗೀತ ನಿರ್ದೇಶನ, ನೃತ್ಯ ನಾಟಕ ರಚನೆ ಮತ್ತು ನಿರ್ದೇಶನ ಹಾಗೂ ನಟನೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಇವರು ಕಾರ್ಯಕ್ರಮದ ನಿರೂಪಣೆ, ಸಂಯೋಜನೆ ಮತ್ತು ಸಂಘಟನಾ ಸಾಮರ್ಥ್ಯ ಪಡೆದಿದ್ದಾರೆ. ಕವನ, ಲೇಖನ, ಕಥನ, ಭಾಷಣ, ವಾರ್ತಾವಾಚನಗಳಲ್ಲಿ ಅನುಭವ ಹೊಂದಿರುವ ಇವರು ಸಂದರ್ಶನ ಮತ್ತು ಛಾಯಾಚಿತ್ರ ಗ್ರಹಣಗಳಲ್ಲಿ ಪರಿಣತಿ ಹೊಂದಿದ್ದಾರೆ.
ಜಿ.ವಿ. ಅಯ್ಯರ್‌ರ ಮಧ್ವಾಚಾರ್ಯ, ಅಲ್ಲಮಪ್ರಭು, ಆಚಾರ್ಯ ಶಂಕರ ಚಲನಚಿತ್ರಗಳಲ್ಲಿ ನಟಿಸಿರುವ ಇವರು ‘ವಠಾರ’ ಟಿವಿ ಧಾರಾವಾಹಿಯಲ್ಲೂ ಪಾತ್ರ ನಿರ್ವಹಿಸಿದ್ದಾರೆ. ಮುದ್ರಣ-ದೃಶ್ಯ ಮಾಧ್ಯಮಗಳಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಇವರ ಸಾಧನೆಗೆ ಡಾ.ಕೆ. ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ, ಕೇರಳ ರಾಜ್ಯ ದಾಸ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಕೇಶವ ಕಲಾಸ್ಮೃತಿ ಪ್ರಶಸ್ತಿ, ನಾಟ್ಯ ಕ್ಷೇತ್ರದ ಸಾಧನೆಗಾಗಿ ಭರತ ಮುನಿ ಪ್ರಶಸ್ತಿ ಹಾಗೂ ಅತ್ಯುತ್ತಮ ನಾಟಕ ಸಂಗೀತ ನಿರ್ದೇಶಕ ಪ್ರಶಸ್ತಿ ಮುಂತಾದವು ಇವರ ಸಾಧನೆಗೆ ಸಂದ ಗೌರವಗಳು.
ಪತ್ನಿ ಡಾ. ಮುಕಾಂಬಿಕಾ ಜಿ.ಎಸ್., ಮಗಳು ಭರತನಾಟ್ಯ ಕಲಾವಿದೆ ವಿದುಷಿ ಅಯನಾ ವಿ. ರಮಣ್ ಇವರ ಜೊತೆ ಮೂಡುಬಿದಿರೆಯಲ್ಲಿ ವಾಸವಾಗಿರುವ ಇವರು ಪ್ರಸ್ತುತ ಉಡುಪಿ ಶ್ರೀ ಪುತ್ತಿಗೆ ಮಠದ ಜಾಗತಿಕ-ಧಾರ್ಮಿಕ ಅಭಿಯಾನ “ಕೋಟಿ ಗೀತಾ ಲೇಖನ ಯಜ್ಞ’ದ ಭಗವದ್ಗೀತಾ ಪ್ರಚಾರಕರೂ ಆಗಿದ್ದಾರೆ.