ಮಂಗಳೂರು : ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಹಾಗೂ ಆಕೃತಿ ಆಶ್ರಯ ಪ್ರಕಾಶನದ ಆಶ್ರಯದಲ್ಲಿ ಉರ್ವಸ್ಟೋರ್‌ನ ತುಳುಭವನದಲ್ಲಿ ದಿನಾಂಕ 03 ಆಗಸ್ಟ್ 2026ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ದೇವಿಕಾ ನಾಗೇಶ್ ಇವರ ‘ಬೊಲ್ಪುದ ಪಾಂತೆ’ (ಬೆಳಕಿನ ಪತಂಗ) ಕವನ ಸಂಕಲನ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ “ತುಳುವಿನ ಸಾಹಿತ್ಯ ಸಮೃದ್ಧವಾಗಿದೆ. ಆದರೆ, ಹೊಸ ತಲೆಮಾರಿನ ತುಳುವರಿಗೆ ಅದರ ಪರಿಚಯವೇ ಇಲ್ಲ. ಒತ್ತಾಯ ಪೂರ್ವಕವಾಗಿಯಾದರೂ ಹೊಸ ತಲೆಮಾರಿನವರಿಗೆ ತುಳು ಸಾಹಿತ್ಯವನ್ನು ತಲುಪಿಸಬೇಕಿದೆ. ‘ಯುವಜನರು ತುಳು ಕೃತಿಗಳನ್ನು ಓದುವಂತೆ ಮಾಡಿದರೆ, ಅದು ಮತ್ತಷ್ಟು ಸಾಹಿತ್ಯ ಕೃಷಿಗೆ ಪ್ರೇರಣೆ ಆಗಬಹುದು” ಎಂದು ಅಭಿಪ್ರಾಯಪಟ್ಟರು.
ಕೃತಿ ಪರಿಚಯಿಸಿದ ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಚೇಳ್ಯಾರು, “ಹೊಸ ಹೊಸ ರೂಪಕ ಮತ್ತು ಪ್ರತಿಮೆಗಳನ್ನು ಬಳಸಿ ಕವಯಿತ್ರಿ ದೇವಿಕಾ ನಾಗೇಶ್ ಬದುಕಿನ ವಿಭಿನ್ನ ಅಂಶಗಳನ್ನು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರ ಕವನಗಳು ಲೋಕವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತವೆ. ದೇವಿಕಾ ಇವರ ಗಟ್ಟಿ ಧ್ವನಿಯ ಚಿಂತನೆಗಳು ‘ಬೊಲ್ಪುದ ಪಾಂತೆ’ಯ ರೂಪ ತಾಳಿವೆ. ಈ ಪತಂಗಗಳು ಬೆಳಕಿನೆಡೆಗೆ ಹಾರುತ್ತವೆಯೇ, ಕತ್ತಲೆಯಡೆ ಹಾರುತ್ತವೆಯೇ ಎಂಬುದು ಮುಖ್ಯ. ಇದರ ವಿಚಾರ ಪೂರ್ಣ ಕವಿತೆಗಳು ನಾವೂ ಪತಂಗಗಳಾಗಬೇಕೇ ಅಥವಾ ರೆಕ್ಕೆ ಸುಟ್ಟುಕೊಳ್ಳದೆಯೇ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕೆ ಎಂಬ ಜಿಜ್ಞಾಸೆಯನ್ನು ಹುಟ್ಟಿಸುತ್ತವೆ. ಕವಿತೆಗಳ ವಿನ್ಯಾಸ, ಲಾಲಿತ್ಯಗಳಲ್ಲಿ ಅವರದ್ದೇ ವಿಭಿನ್ನ ಶೈಲಿ. ಅವರು ಬಳಸಿರುವ ತುಳು ಕೂಡಾ ವೈಶಿಷ್ಟ್ಯಪೂರ್ಣವಾಗಿದ್ದು, ಉಡುಪಿ, ಮಂಗಳೂರು ಹಾಗೂ ಘಟ್ಟದ ಮೇಲಿನ ತುಳುವಿನ ಸಮ್ಮಿಲನದಂತಿದೆ” ಎಂದು ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕಿ ದೇವಿಕಾ ನಾಗೇಶ್, ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿದರು. ಧನಲಕ್ಷ್ಮೀ ಗಟ್ಟಿ, ಶೀಲಾ ಶೆಟ್ಟಿ, ರತ್ನಾವತಿ ಜೆ. ಬೈಕಾಡಿ, ಸೌಮ್ಯಾ ಪ್ರವೀಣ್ ಇವರು ಕವನ ಸಂಕಲನದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ರೂಪಕಲಾ ಆಳ್ವ ಕಾರ್ಯಕ್ರಮ ನಿರೂಪಿಸಿ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿ, ಯಶೋದಾ ಮೋಹನ್ ಧನ್ಯವಾದ ಸಲ್ಲಿಸಿದರು. ಸಂಗೀತಾ ಸಾಧಕಿ ಜಯಲಕ್ಷ್ಮಿಶಾಸ್ತ್ರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
