ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾ ವಿದ್ಯಾಲಯ, ಆಕೃತಿ ಆಶಯ ಪಬ್ಲಿಕೇಷನ್ಸ್, ಕಾಸರಗೋಡು ಕನ್ನಡ ಲೇಖಕರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಇವುಗಳ ಸಹಯೋಗದಲ್ಲಿ ದಿನಾಂಕ 02-06-2024ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ.ಎ.ಎನ್. ಖಂಡಿಗೆ ಅವರ ಲೇಖನಗಳ ಸಂಗ್ರಹದ ಕೃತಿ ‘ಬರಿಗಾಲ ನಡಿಗೆ’ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ “ಸಾಹಿತ್ಯ ಅಭಿರುಚಿ ಯುವ ಮನಸ್ಸುಗಳಲ್ಲಿ ಕಡಿಮೆಯಾಗುತ್ತಿರುವುದು ಬಹಳ ಅಪಾಯಕಾರಿ ಪರಿಸ್ಥಿತಿಯಾಗಿದೆ. ಯಾವುದೇ ಕೃತಿಯನ್ನು ಒಂದು ಬಾರಿ ಓದಿದರೆ ಅರ್ಥವಾಗುವುದಿಲ್ಲ. ನಾವು ಅರ್ಥ ಮಾಡಿಕೊಳ್ಳುವವರೆಗೆ ಓದಬೇಕು. ಆಗ ನಾವು ಮತ್ತೊಬ್ಬರಿಗೆ ತಿಳಿಸಲು ಸಾಧ್ಯವಾಗುತ್ತದೆ. ಬರಿಗಾಲು ಎಂಬುದೊಂದು ರೂಪಕ. ಮುಕ್ತವಾಗಿ ಓದುವುದು. ನಿರ್ಭೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸುವುದು ಬರಿಗಾಲ ನಡಿಗೆಯ ಮೂಲ ಆಶಯ. ಕೃತಿಯಲ್ಲಿ ಅಡಕವಾಗಿರುವ ವಿಷಯಗಳನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದೇ ನಿಜವಾದ ಓದು ಆಗಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಕೃತಿ ಬಿಡುಗಡೆ ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮೂಡಿಸುವ ಕಾರ್ಯಕ್ಕೆ ಒತ್ತು ನೀಡುತ್ತಿದೆ. ಎರಡೂವರೆ ವರ್ಷಗಳಲ್ಲಿ ಘಟಕದಿಂದ 120ಕ್ಕೂ ಹೆಚ್ಚು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಹತ್ತು ಪುಸ್ತಕಗಳನ್ನು ಏಕಕಾಲದಲ್ಲಿ ಹೊರತಂದಿರುವ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜುಗಳಿಗೆ ಸಾಹಿತ್ಯ ಕೃತಿಗಳು ಸೇರಿದಂತೆ ಗ್ರಂಥಗಳನ್ನು ತಲುಪಿಸುವ ಕಾರ್ಯ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗುತ್ತಿದೆ” ಎಂದು ತಿಳಿಸಿದರು.
ಕೃತಿ ಪರಿಚಯ ಮಾಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ಸಹ ಪ್ರಾಧ್ಯಾಪಕ ರಾಜಶೇಖರ್ ಹಳೆಮನಿ “ಖಂಡಿಗೆ ಅವರ ಲೇಖನಗಳಲ್ಲಿ ಸಿನಿಕತನ ಇಲ್ಲ. ಆದ್ದರಿಂದ ಅವುಗಳಲ್ಲಿ ಭರವಸೆಯ ಬೆಳಕು ಕಾಣುತ್ತದೆ. ಈ ಕೃತಿಯಲ್ಲಿರುವ ವ್ಯಕ್ತಿಚಿತ್ರಗಳು ವಿಮರ್ಶೆಯ ಮತ್ತೊಂದು ಆಯಾಮವನ್ನು ಪರಿಚಯಿಸುತ್ತವೆ. ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಕೃತಿ ಅನಾವರಣ ಮಾಡಿದೆ. ವಿಮರ್ಶೆಯ ಹೊಸ ಪರಿಭಾಷೆ ಇದರಲ್ಲಿವೆ” ಎಂದರು.
“ಪೂರ್ವಾಗ್ರಹವಿಲ್ಲದೆ ಸಾಹಿತ್ಯದ ಓದಿನಲ್ಲಿ ತೊಡಗಿಸಿಕೊಂಡಾಗ ಅನಿಸಿದ್ದನ್ನು ಕೃತಿಯಲ್ಲಿ ದಾಖಲಿಸಿದ್ದೇನೆ” ಎಂದು ಲೇಖಕ ಟಿ.ಎ.ಎನ್. ಖಂಡಿಗೆ ಹೇಳಿದರು. ಸಾಹಿತಿ ಡಾ. ರಮಾನಂದ ಬನಾರಿ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ, ಎಸ್.ಡಿ.ಎಂ. ಕಾನೂನು ಕಾಲೇಜಿನ ಪ್ರಾಧ್ಯಾಪಕ ಕೆ. ಪುಷ್ಪರಾಜ ಪಾಲ್ಗೊಂಡಿದ್ದರು. ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಾಶಕರಾದ ಕಲ್ಲೂರು ನಾಗೇಶ್ ಸ್ವಾಗತಿಸಿ, ಆಳ್ವಾಸ್ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿ ನಿರೂಪಿಸಿದರು.