ಧಾರವಾಡ : ಬೇಂದ್ರೆಯವರ ‘ನಾಕುತಂತಿ’ ಕವನ ಸಂಕಲನಕ್ಕೆ ‘ಜ್ಞಾನಪೀಠ’ ಪ್ರಶಸ್ತಿ ದೊರೆತ ಐವತ್ತನೇ ವರ್ಷವಿದು. ಹೀಗಾಗಿ ನಾಕುತಂತಿ ಚಿನ್ನದ ಹಬ್ಬದ ವರ್ಷವಿದು. ನಾಕುತಂತಿ ಪ್ರಕಟವಾದ ಅರವತ್ತನೇ ವರ್ಷವಿದು. ಹೀಗಾಗಿ ಬೇಂದ್ರೆ ಸಾಹಿತ್ಯ ಪ್ರೀಯರಿಗೆ ಹಾಗೂ ಧಾರವಾಡಕ್ಕೆ ಮತ್ತು ಸಾಧನಕೇರಿ ಬೀದಿಗೆ ಸಂಭ್ರಮದ ಕಾಲವಿದು. ಬೇಂದ್ರೆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಅದರೊಂದಿಗೆ ಅನುಸಂಧಾನ ಮಾಡಿದವರು ‘ಕನ್ನಡದ ಕೀರ್ತಿ’ ಕೀರ್ತಿನಾಥ ಕುರ್ತಕೋಟಿ ಅವರು.
ಅವರ ಶಾಲಾ ಜೀವನದಿಂದ ಬೇಂದ್ರೆಯವರನ್ನು ಓದಲು ಬರೆಯಲು ಪ್ರಾರಂಭಿಸಿದವರು. ತಮ್ಮ ಜೀವನದ ಕೊನೆಯ ಕ್ಷಣದವರೆಗೆ ಅದನ್ನು ಒಂದು ನೋಂಪಿಯಂತೆ ಪರಿಪಾಲಿಸಿಕೊಂಡು ಬಂದರು. ‘ಬೇಂದ್ರೆಯವರಿಗೆ ಕಾವ್ಯ ಉಸಿರಾಟದಷ್ಟು ಸಹಜವಾಗಿತ್ತು. ಅದೇ ಕುರ್ತಕೋಟಿಯವರಿಗೆ ಬೇಂದ್ರೆ ಸಾಹಿತ್ಯದ ವಿಮರ್ಶೆ ಉಸಿರಾಟದಷ್ಟೇ ಸಹಜವಾಗಿತ್ತು’. ಈ ನಾಡಿನಲ್ಲಿ ಬೇಂದ್ರೆಯವರನ್ನು ಕುರಿತು ಬರೆದ ಮತ್ತು ಮಾತನಾಡಿದ ವ್ಯಕ್ತಿಗಳಲ್ಲಿ ಶ್ರೇಷ್ಠರು ಕುರ್ತಕೋಟಿಯವರು. ಇವರ ಮಾತು ಮತ್ತು ಕೃತಿಯಲ್ಲಿ ಒಂದು ಚುಂಬಕ ಶಕ್ತಿ ಇದೆ. ಅದು ವಾಚಕರನ್ನು ಹಾಗೂ ಶ್ರೋತೃಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಅದು ಅನೇಕ ಜನರನ್ನು ಬೇಂದ್ರೆ ಸಾಹಿತ್ಯದ ಅಭ್ಯಾಸಿಗಳನ್ನಾಗಿ ಮಾಡಿತು. ಬೇಂದ್ರೆ ಸಾಹಿತ್ಯ ಕುರಿತು ಮಾತು-ಕತೆ ಮತ್ತು ಬರವಣಿಗೆಯನ್ನು ಅತ್ಯಂತ ಪ್ರೀತಿ ಹಾಗೂ ಭಕ್ತಿಯಿಂದ ಮಾಡಿದವರು ಕೀರ್ತಿನಾಥ ಕುರ್ತಕೋಟಿಯವರು. ಕನ್ನಡ ಸಾಹಿತ್ಯದ ವಿಮರ್ಶೆಗೊಂದು ಮೂಡಣ ದಿಕ್ಕನ್ನು ತೋರಿಸದರೆಂದರೆ ಕುರ್ತಕೋಟಿಯವರು.
ಕುರ್ತಕೋಟಿಯವರು ಸುಮಾರು ಐದು ದಶಕಗಳ ಕಾಲ ಬೇಂದ್ರೆಯವರನ್ನು ಕುರಿತು ಬರೆದ ಕೃತಿ ಹಾಗೂ ಲೇಖನಗಳು ಅನೇಕ. ಅವನ್ನೆಲ್ಲಾ ಒಟ್ಟುಗೂಡಿಸಿ ಮನೋಹರ ಗ್ರಂಥಮಾಲೆ, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸಹಕಾರದೊಂದಿಗೆ ‘ವಾಗರ್ಥ’ ಎಂಬ ಹೆಸರಿನ ಬೃಹತ್ ಹೊತ್ತಿಗೆಯೊಂದನ್ನು ವಾಚಕರ ಕೈಗೆ ನೀಡುತ್ತಿದೆ. ಈ ಪುಸ್ತಕವು ದಿನಾಂಕ 27 ಜುಲೈ 2025 ರವಿವಾರ ಸಂಜೆ 4-30 ಗಂಟಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಬಿಡುಗಡೆಯಾಗಲಿದೆ. ಅಂದೇ ಇನ್ನೊಂದು ಮಹತ್ವದ ಕೃತಿ ಬಿಡುಗಡೆಯಾಗುವುದಿದೆ. ಅಹ್ಮದನಗರದ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಕಮಲಾಕರ ಭಟ್ ಇವರು ಕೀರ್ತಿನಾಥ ಕುರ್ತಕೋಟಿಯವರ ಆಯ್ದ ಲೇಖನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಆ ಪುಸ್ತಕ ‘Courtesy of Criticism’.
ಈ ಎರಡು ಪುಸ್ತಕಗಳನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್.ಕೆ. ಪಾಟೀಲ ಇವರು ಬಿಡುಗಡೆ ಮಾಡುತ್ತಾರೆ. ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪ ಸಂಪಾದಕರಾದ ಶ್ರೀ ಸೂರ್ಯಪ್ರಕಾಶ ಪಂಡಿತ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿನಾಯಕ ನಾಯಕ ಇವರು ವಹಿಸಿಕೊಳ್ಳುತ್ತಿದ್ದು, ಡಾ. ಕಮಲಾಕರ ಭಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಅಂದು ‘ವಾಗರ್ಥ’ ಪುಸ್ತಕ ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಎಲ್ಲ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.