ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಆಯೋಜಿಸುವ ‘ಸುನಂದಾ ಬೆಳಗಾಂವಕರ [ವ್ಯಕ್ತಿತ್ವ-ಸಾಹಿತ್ಯ]’ ಪುಸ್ತಕ ಲೋಕಾರ್ಪಣಾ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರ ರವಿವಾರದಂದು ಸಂಜೆ ಐದು ಘಂಟೆಯಿಂದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿರುವ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ನಡೆಯಲಿದೆ.
ಖ್ಯಾತ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಪ್ರೊ. ರಾಘವೇಂದ್ರ ಪಾಟೀಲ ಕೃತಿ ಲೋಕಾರ್ಪಣೆಗೊಳಿಸಲಿರುವರು. ಯುವ ಸಾಹಿತಿಗಳಾದ ಶ್ರೀ ವಿಕಾಸ ಹೊಸಮನಿ ಕೃತಿಯ ಕುರಿತು ಮಾತನಾದಲಿದ್ದು, ಕೃತಿಯ ಲೇಖಕರಾದ ಡಾ. ಸುಭಾಷ ಪಟ್ಟಾಜೆ ಉಪಸ್ಥಿತರಿರುವರು. ಅತಿಥಿಗಳಾಗಿ ಪ್ರಕಾಶಕರಾದ ಡಾ. ವೈಜಯಂತಿ ಸೂರ್ಯನಾರಾಯಣ ಹಾಗೂ ಶ್ರೀಮತಿ ಸೀಮಾ ಕುಲಕರ್ಣಿ ಭಾಗವಹಿಸಲಿದ್ದಾರೆ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.